ಲಖನೌ : ಉತ್ತರ ಪ್ರದೇಶದಲ್ಲಿ ಈ ಮೊದಲು “ಅಬ್ಬಾ ಜಾನ್” ಎನ್ನುವವರಿಗೆ ಮಾತ್ರ ಪಡಿತರ ಸಿಗುತ್ತಿತ್ತು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮುಂಬರುವ ವಿಧಾನ ಸಭೆ ಚುನಾವಣೆಯ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ, ಈ ಹಿಂದಿನ ಸರ್ಕಾರಗಳನ್ನು ಟೀಕಿಸಿದರು. 2017ರ ಮುಂಚೆ ಇಲ್ಲಿಯ ಪರಿಸ್ಥಿತಿ ತೀರಾ ಭಿನ್ನವಾಗಿತ್ತು. ಅಂದು ಎಲ್ಲರಿಗೂ ಪಡಿತರ ಧಾನ್ಯಗಳು ಸಿಗುತ್ತಿರಲಿಲ್ಲ. ಕೇವಲ ‘ಅಬ್ಬಾ ಜಾನ್’ ಎನ್ನುತ್ತಿದ್ದವರಿಗೆ ಮಾತ್ರ ರೇಷನ್ ದೊರೆಯುತ್ತಿತ್ತು. ಆದರೆ, ಅಂದು ಇದ್ಧ ಪರಿಸ್ಥಿತಿ ಇಂದು ತೊಲಗಿದೆ. ಅಂತಹ ತಾರತಮ್ಯದ ರಾಜಕಾರಣಕ್ಕೆ ಬಿಜೆಪಿ ಅಂತ್ಯ ಹಾಡಿದೆ ಎಂದಿದ್ದಾರೆ.
ನಾವು ಗುರುತಿನ (ಜಾತಿಗಳ) ಆಧಾರದ ಮೇಲೆ ಪಡಿತರ ವಿತರಿಸುತ್ತಿಲ್ಲ. 2017 ಕ್ಕಿಂತ ಮುಂಚೆ ನಿಮಗೆಲ್ಲರಿಗೂ ಪಡಿತರ ಸಿಗುತ್ತಿತ್ತೇ ? ಎಂದು ಪ್ರಶ್ನಿಸಿದ ಸಿಎಂ, ಪ್ರಸ್ತುತ ಎಲ್ಲವೂ ಬದಲಾಗಿದೆ. ಪಡಿತರ ವಿತರಣೆಯಲ್ಲಿ ಯಾರಾದರೂ ಭ್ರಷ್ಟಾಷಾರ ಎಸಗಿದರೆ ಅವರನ್ನು ಜೈಲಿಗೆ ಅಟ್ಟಲಾಗುತ್ತದೆ ಎಂದು ಗುಡುಗಿದರು.
ಇದೆ ವೇಳೆ ಕೇಂದ್ರ ಸರ್ಕಾರವನ್ನು ಹೊಗಳಿದ ಯೋಗಿ ಆದಿತ್ಯನಾಥ್, ದೇಶಕ್ಕೆ ಉತ್ತಮವಾದ ರಾಜಕೀಯ ಕಾರ್ಯಸೂಚಿಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ ಎಂದರು.
ಮೊದಲು ನಮ್ಮ ದೇಶವು ಭಾಷೆ, ಜಾತಿ, ಜನಾಂಗೀಯತೆ ಮತ್ತು ಕುಟುಂಬದ ರಾಜಕೀಯದಲ್ಲಿ ನಿರತವಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಬಡವರು, ರೈತರು, ಗ್ರಾಮವಾಸಿಗಳು ಹಾಗೂ ಯುವಜನಾಂಗದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಪ್ರತಿಫಲವಾಗಿ ಇಂದು ದೇಶದ ಎಲ್ಲ ಜನರು ಸಮಾನವಾಗಿ ಎಲ್ಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ನಮ್ಮ ಆಡಳಿತದಲ್ಲಿ ತಾರತಮ್ಯಕ್ಕೆ ಆಸ್ಪದ ನೀಡಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದರು.