ಲಕ್ನೋ : ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ನಡುವೆ ಇದೀಗ ಗೃಹ ಸಚಿವ ಹುದ್ದೆಗಾಗಿ ಮುಸುಕಿನ ಜಟಾಪಟಿ ಏರ್ಪಟ್ಟಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ಆದಿತ್ಯನಾಥ್ ಅವರಿಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ದಿಲ್ಲಿಗೆ ಆಗಮಿಸಿದ್ದಾರೆ.
ನಿನ್ನೆ ಸೋಮವಾರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅವರ ಇಬ್ಬರು ಉಪ ಮುಖ್ಯಮಂತ್ರಿಗಳಾಗಿರುವ ಮೌರ್ಯ ಮತ್ತು ದಿನೇಶ್ ಸಿಂಗ್ ಅವರು ರಾಜ್ಯದ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಹೊಸ ಸರಕಾರದ ಕಾರ್ಯಸೂಚಿಯ ರೂಪರೇಖೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೋದಿ ಮತ್ತು ಅಮಿತ್ ಶಾ ಅವರೊಂದಿಗಿನ ಭೇಟಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ 47 ಸಚಿವರಿಗೆ ಖಾತೆಗಳನ್ನು ಹಂಚಿಕೊಡುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಯೋಗಿ ಮತ್ತು ಮೌರ್ಯ ಅವರಿಬ್ಬರೂ ತಮಗೆ ಗೃಹ ಖಾತೆಯೇ ಬೇಕೆಂದು ಹಠ ಹಿಡಿದಿರುವುದು ಪಕ್ಷದ ವರಿಷ್ಠರಿಗೆ ಈಗ ಬಿಸಿ ತುಪ್ಪವಾಗಿ ಪರಿಣಮಿಸಿರುವುದಾಗಿ ಮೂಲಗಳು ಹೇಳಿವೆ.
ಇದೇ ವೇಳೆ ಹಣಕಾಸು ಖಾತೆಯ ಬಗ್ಗೆಯೂ ಇಬ್ಬರು ಉಪ ಮುಖ್ಯಮಂತ್ರಿಗಳ ನಡುವೆ ಮುಸುಕಿನ ಯುದ್ಧ ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಕೂಡಲೇ ರಾಜ್ಯದ ಉನ್ನತ ಅಧಿಕಾರಿಗಳ ಹೊಣೆಗಾರಿಕೆಗಳನ್ನು ಬದಲಾಯಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದು ಅದಿನ್ನು ಕೂಡಲೇ ನಡೆಯಲಿದೆ ಎಂದು ಹೇಳಲಾಗಿದೆ.