ಲಕ್ನೋ: ವಿಶ್ವವಿಖ್ಯಾತ ಕುಂಭಮೇಳ ನಡೆಯುತ್ತಿರುವ ಉತ್ತರಪ್ರದೇಶದ ಪ್ರಯಾಗ್ ರಾಜ್ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶ ಸರಕಾರದ ಸಚಿವ ಸಂಪುಟ ಸಭೆ ನಡೆಯಲಿದೆ. ಕಳೆದ ಐದು ದಶಕಗಳಿಂದ ಉತ್ತರಪ್ರದೇಶದಲ್ಲಿ ಸಚಿವ ಸಂಪುಟ ಸಭೆಗಳು ಲಕ್ನೋದಲ್ಲೇ ನಡೆಯುತ್ತಿವೆ. 1962ರಲ್ಲಿ ಅಂದಿನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಗೋವಿಂದ್ ಬಲ್ಲಾಳ್ ಪಂತ್ ಅವರು ತಮ್ಮ ಸಚಿವ ಸಂಪುಟದ ಸಭೆಯನ್ನು ಇಂದಿನ ಉತ್ತರಾಖಂಡ ರಾಜ್ಯದಲ್ಲಿರುವ ನೈನಿತಾಲ್ ನಲ್ಲಿ ನಡೆಸಿದ್ದರು.
ಇಂದು ಪ್ರಯಾಗ್ ರಾಜ್ ನಲ್ಲಿ ನಡೆಯಲಿರುವ ಮಹತ್ವದ ಈ ಸಚಿವ ಸಂಪುಟ ಸಭೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಕೆಲವೊಂದು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ.
ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಯೋಗಿ ಸರಕಾರದ ಸಚಿವರು ಕುಂಭಮೇಳ ನಡೆಯುತ್ತಿರುವ ಪ್ರದೇಶದಲ್ಲಿ ಸೇರಲಿದ್ದಾರೆ, ಬಳಿಕ ಅಲ್ಲಿಂದ ಯೋಗಿ ಆದಿತ್ಯನಾಥ್ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಹನುಮಾನ್ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಬಳಿಕ ಅಕ್ಬರ್ ಕೋಟೆ, ಅಕ್ಷಯ್ವಾಟ್ ಮತ್ತು ಸರಸ್ವತಿ ಕೂಪಗಳಿಗೂ ಸಹ ಭೇಟಿ ನೀಡುವ ಕಾರ್ಯಕ್ರಮವಿದೆ. ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಹಾಗೂ ಸಚಿವ ಸಮೂಹ ಸಂಗಮ ಕ್ಷೇತ್ರದಲ್ಲಿ ಪುಣ್ಯಸ್ನಾನ ಮಾಡುವ ಕಾರ್ಯಕ್ರಮವೂ ನಿಗದಿಯಾಗಿದೆ.
ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರು ಕುಂಭಮೇಳದಲ್ಲಿ ಭಾಗವಹಿಸಿ ಪುಣ್ಯಸ್ನಾನ ಮಾಡುವ ನಿರ್ಧಾರ ಹೊರಬಿದ್ದ ಬಳಿಕ ಯೋಗಿ ಆದಿತ್ಯನಾಥ್ ತಮ್ಮ ಸಚಿವ ಸಂಪುಟ ಸಭೆಯನ್ನು ಕುಂಭ ಮೇಳ ನಡೆಯುತ್ತಿರುವ ಸ್ಥಳದಲ್ಲಿ ನಡೆಸುವ ನಿರ್ಧಾರ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.