Advertisement

Channapatna By-Election: ಯೋಗೇಶ್ವರ್‌ ಎನ್‌ಡಿಎ ಅಭ್ಯರ್ಥಿ?

12:14 AM Oct 23, 2024 | Team Udayavani |

ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿ ಘೋಷಣೆ ಬುಧವಾರ ನಡೆಯಲಿದ್ದು, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಪರ ಕೇಸರಿ ಪಡೆ ದಿಲ್ಲಿಯಲ್ಲಿ ಲಾಬಿ ಪ್ರಾರಂಭಿಸಿದೆ.

Advertisement

ಬಿಜೆಪಿ ಮೂಲಗಳ ಪ್ರಕಾರ ಯೋಗೇಶ್ವರ್‌ ಅವರನ್ನು ಮೈತ್ರಿ ಅಭ್ಯರ್ಥಿಯಾಗಿ ಪರಿಗಣಿಸುವುದಕ್ಕೆ ಎಚ್‌.ಡಿ. ಕುಮಾರಸ್ವಾಮಿ ಒಪ್ಪುವ ಸಾಧ್ಯತೆಗಳು ಇವೆ.

ಬಿಜೆಪಿ ನಾಯಕರು ದಿಲ್ಲಿ ಮಟ್ಟದಲ್ಲಿ ಪ್ರಯತ್ನ ಮಾಡುತ್ತಿದ್ದಂತೆ ತಾವು ಕೊಟ್ಟ ಗಡುವು ಮುಗಿದರೂ, ಯೋಗೇಶ್ವರ್‌ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಯೋಗೇಶ್ವರ್‌ ಜತೆಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಸಲಹೆ ನೀಡಿದ್ದಾರೆ.

ಜತೆಗೆ ಟಿಕೆಟ್‌ ಲಭಿಸುವ ಸಾಧ್ಯತೆ ಬಗ್ಗೆ ಆಶಾವಾದಿಯಾಗಿರಲು ಸೂಚಿಸಿದ್ದಾರೆ. ಅದೇ ರೀತಿ ವಿಪಕ್ಷ ನಾಯಕ ಆರ್‌. ಅಶೋಕ್‌ ಕೂಡ ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಕೆಲ ಸಂದೇಶ ರವಾನೆ ಮಾಡಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಮೂಲಕ ಗೃಹ ಸಚಿವ ಅಮಿತ್‌ ಶಾ ಅವರಿಗೆ ಚನ್ನಪಟ್ಟಣದ ಪರಿಸ್ಥಿತಿ ಬಗ್ಗೆ ಬಿಜೆಪಿ ನಾಯಕರು ವಿವರಣೆ ನೀಡಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಯೋಗೇಶ್ವರ್‌ ಗೆಲ್ಲುವ ಅಭ್ಯರ್ಥಿ.

Advertisement

ಹೀಗಾಗಿ ಯಾವುದೇ ಕಾರಣಕ್ಕೂ ಒಂದು ಕ್ಷೇತ್ರ ಕಳೆದುಕೊಳ್ಳುವುದು ಬೇಡ ಎಂಬ ಮನವಿಯನ್ನು ಮಾಡಿದ್ದಾರೆ. ಜತೆಗೆ ಕುಮಾರಸ್ವಾಮಿ ಅವರು ಕಳೆದ 2 ತಿಂಗಳಿಂದಲೂ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ನಿಲುವು ಬದಲಿಸುತ್ತಿರುವ ಬಗ್ಗೆಯೂ ರಾಜ್ಯ ನಾಯಕರು ಬಿಜೆಪಿ ವರಿಷ್ಠರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ.

ಸಮಾಜವಾದಿ ಟಿಕೆಟ್‌ ಪಡೆದ ಸಿ.ಪಿ. ಯೋಗೇಶ್ವರ್‌?
ರಾಮನಗರ: ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ಯೋಗೇಶ್ವರ್‌ ಹೊಸ ಟ್ವಿಸ್ಟ್‌ ನೀಡಿದ್ದು, ಸಮಾಜವಾದಿ ಪಕ್ಷದ ಬಿ ಫಾರಂ ಪಡೆದುಕೊಂಡಿದ್ದಾರೆ. ಇದರೊಂದಿಗೆ ಸೈನಿಕ ಸಮಾಜವಾದಿ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರಾ ಎಂಬ ಕುತೂಹಲ ಗರಿಗೆದರುವಂತೆ ಮಾಡಿದ್ದಾರೆ.

2013ರಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದ ಯೋಗೇಶ್ವರ್‌ಗೆ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿತ್ತು. ಕೊನೆ ಕ್ಷಣದಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಬಳಿಕ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಮತ್ತೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಇದೀಗ ಮತ್ತೆ ಟಿಕೆಟ್‌ ದಂಗಲ್‌ ಆರಂಭಗೊಂಡಿದೆ. ಯೋಗೇಶ್ವರ್‌ ಸಮಾಜವಾದಿ ಪಕ್ಷದ ರಾಜ್ಯ ಘಟಕದ ಪದಾಧಿಕಾರಿಗಳಿಂದ ಟಿಕೆಟ್‌ ಸ್ವೀಕರಿಸುತ್ತಿರುವ ಫೋಟೋ ಹರಿದಾಡುತ್ತಿದೆ. ಯೋಗೇಶ್ವರ್‌ ಸಮಾಜವಾದಿ ಪಕ್ಷದಿಂದ ಮತ್ತೆ ಸ್ಪರ್ಧೆ ಮಾಡುತ್ತಾರಾ, ಇಲ್ಲಾ ಎನ್‌ಡಿಎ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಟಾಂಗ್‌ ನೀಡಲು ಈ ಫೋಟೋವನ್ನು ತಮ್ಮ ಬೆಂಬಲಿಗರ ಮೂಲಕ ಹರಿಯಬಿಟ್ಟು ಹೊಸ ಗೇಮ್‌ ಪ್ಲಾನ್‌ ಮಾಡುತ್ತಿದ್ದಾರಾ ಕಾಯ್ದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next