Advertisement

ಯೋಗೀಶ್ ಗೌಡ ಕೊಲೆ ಪ್ರಕರಣ: ಹೊಸ್ ಬಾಂಬ್ ಸಿಡಿಸಿದ ಅರೋಪಿ ಮುತ್ತಗಿ!

04:27 PM Jul 09, 2021 | Team Udayavani |

ಧಾರವಾಡ: ಹುಬ್ಬಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಮುಂದುವರೆಸಿರುವ ಮಧ್ಯೆಯೇ ಇದುವರೆಗೂ ಹೇಳದ ವಿಷಯಗಳನ್ನು ತನಿಖಾಧಿಕಾರಿಗಳ ಮುಂದೆ ಬಾಯಿ ಬಿಡುವುದಾಗಿ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಹೊಸ ಬಾಂಬ್ ಸಿಡಿಸಿದ್ದಾನೆ.

Advertisement

ಇಲ್ಲಿನ ಉಪನಗರ ಠಾಣೆಯಲ್ಲಿ ನಿನ್ನೆಯಿಂದ ಸಿಬಿಐ ಅಧಿಕಾರಿಗಳು ನಡೆಸುತ್ತಿರುವ ತನಿಖೆಗೆ ಹಾಜರಾಗಲು ಆಗಮಿಸಿದ್ದ ಮುತ್ತಗಿ ಮಾಧ್ಯಮದವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅಚ್ಚರಿಯ ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಂತಾಗಿದೆ.

ಪ್ರಕರಣದಲ್ಲಿ ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮುತ್ತಗಿ, ’ಮತ್ತೊಬ್ಬರನ್ನು ಬಲಿ ಪಶು ಮಾಡಬೇಡಿ. ನಾನು ಕೂಡ ಅಂಥ ಮನಸ್ಥಿತಿಯವನಲ್ಲ. ಪ್ರಾಮಾಣಿಕವಾಗಿ ಹೋರಾಟ ಮಾಡಿದವನು ನಾನು ಕೂಡ. ಯಾರ ರಾಜಕೀಯ ಉದ್ದೇಶಕ್ಕೆ ಕೊಲೆಯಾಗಿದೆ ಅನ್ನೋದು ಎಲ್ಲರಿಗೂ ಸಿಬಿಐ ತನಿಖೆಯಲ್ಲಿ ಗೊತ್ತಾಗಿದೆ. ಇನ್ನೂ ಸಾಕಷ್ಟು ವಿಷಯಗಳೂ ಬಯಲಿಗೆ ಬರಲಿವೆ. ಈ ಕುರಿತು ನಾನು ಕೂಡ ಇಂದು ಸಿಬಿಐ ಮುಂದೆಯೂ ಸಾಕಷ್ಟು ವಿಷಯ ಹೇಳಲಿದ್ದೇನೆ. ಮುಂದೆ ಕೋರ್ಟ್‌ನಲ್ಲಿಯೂ ಹೇಳುತ್ತೇನೆ ಎಂದರು.

ಇದೇ ವೇಳೆ ನನ್ನ ನಂಬಿದ ಹುಡುಗರ ಸಲುವಾಗಿ ಈ ತೀರ್ಮಾನ ಮಾಡಿರುವೆ. ನನ್ನೊಂದಿಗೆ ಬಹಳಷ್ಟು ಬಡ ಹುಡುಗರಿದ್ದಾರೆ. ನಾನು ವಿನಯ್ ಪರ ಅಥವಾ ವಿರುದ್ಧ ಮಾತಾಡುತ್ತಿಲ್ಲ. ಯಾವುದೇ ಸಂದರ್ಭದಲ್ಲಿಯೂ ನನ್ನ ಹಾಗೂ ಹುಡುಗರನ್ನು ಬಲಿ ಪಶು ಮಾಡಲು ಬಿಡುವುದಿಲ್ಲ. ಹಾಗೆ ಬಲಿ ಪಶು ಮಾಡಿ ಬದುಕಲು ಆಗೋದಿಲ್ಲ. ಇದೇ ಸಂಬಂಧ ಅನೇಕ ಸತ್ಯವನ್ನು ಹೇಳಲಿದ್ದೇನೆ. ಸಿಬಿಐ ಮುಂದೆ ಇದುವರೆಗೂ ಹೇಳದಿರುವ ವಿಚಾರವನ್ನು ಹೇಳುತ್ತೇನೆ’ ಎನ್ನುವ ಮೂಲಕ ಇಡೀ ಪ್ರಕರಣದ ಮತ್ತೊಂದು ಆಯಾಮಕ್ಕೆ ಕೊಂಡೊಯ್ದಿದ್ದಾನೆ.

ಇದನ್ನೂ ಓದಿ:ಕೇಂದ್ರ ಸಂಪುಟದಲ್ಲಿ ರಾಜ್ಯಕ್ಕೆ 4 ಸಚಿವ ಸ್ಥಾನ : ಪ್ರಧಾನಿಯವರಿಗೆ ರಾಜ್ಯ ಬಿಜೆಪಿ ಅಭಿನಂದನೆ

Advertisement

ತಮ್ಮ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದು ಗೊತ್ತಿರಲಿಲ್ಲ. ಅವರನ್ನು ವಾದಕ್ಕೆ ಕರೆಯುವಷ್ಟು ದೊಡ್ಡವನು ನಾನಲ್ಲ. ಆದರೆ ಅವರು ವಾದಿಸಿದ್ದು ಖುಷಿ ತಂದಿದೆ. ಹೀಗಾಗಿ ಈಗಿರುವ ವಕೀಲರಿಂದ ಎನ್‌ಓಸಿ ಪಡೆಯುತ್ತೇನೆ. ಆದರೆ, ಕಪಿಲ್ ಅವರನ್ನು ಯಾರು ನೇಮಿಸಿದ್ದಾರೋ ಗೊತ್ತಿಲ್ಲ ಎಂದ ಬಸವರಾಜ, ಒಂದು ಕಡೆ ಜಾಮೀನು ರದ್ದಿಗೆ ಆಗ್ರಹ ನಡೆದಿದೆ. ಕೋರ್ಟ್‌ನಲ್ಲಿ ಈ ಬಗ್ಗೆ ವಾದಿಸಲಾಗಿದೆ. ಇನ್ನೊಬ್ಬರ ಜಾಮೀನು ರದ್ದು ಮಾಡಲು ಕೋರುವವರ ಮನಸ್ಥಿತಿ ಅರ್ಥವಾಗುತ್ತದೆ.

ಅಂಥವರ ಉದ್ದೇಶ ಏನು ಅನ್ನೋದು ಗೊತ್ತಾಗುತ್ತಿದೆ. ಮತ್ತೊಂದು ಕಡೆ ಕಪಿಲ್ ನಂಥವರು ನನ್ನ ಪರ ವಾದಿಸುತ್ತಿದ್ದಾರೆ. ಇದೆಲ್ಲವೂ ನನಗೆ ಅರ್ಥವಾಗುತ್ತಿಲ್ಲ ಎನ್ನುವ ಮುಖಾಂತರ ಮತ್ತೊಂದು ತಿರುವಿಗೆ ನಾಂದಿ ಹಾಡಿದ್ದಾನೆ.

ಮುಂದುವರೆದ ಡ್ರಿಲ್ಲಿಂಗ್

ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಉಪನಗರ ಠಾಣೆಯಲ್ಲಿ ಇಂದು ಕೂಡ ಸಿಬಿಐ ಅಧಿಕಾರಿಗಳು ಹಲವರ ವಿಚಾರಣೆ ನಡೆಸಿದರು. ನಿನ್ನೆ ನ್ಯಾಯಾಲಯದಿಂದ ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ಪಡೆದಿರುವ ವಿನಯ ಕುಲಕರ್ಣಿ ಅವರ ಆಪ್ತ ಸಹಾಯಕನಾಗಿದ್ದ ಸೋಮಶೇಖರ ನ್ಯಾಮಗೌಡ, ಸೋದರ ಸಂಬಂಧಿ ಕೆಂಪೇಗೌಡ ಪಾಟೀಲ ಮತ್ತು ಯೋಗೀಶಗೌಡ ಗೌಡರ ಕೊಲೆಯಾಗಿದ್ದ ಸಮಯದಲ್ಲಿನ ಜಿಮ್ ತರಬೇತುದಾರ ವಿವೇಕ ದಳವಾಯಿ ಅವರನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದರು.

ನಿನ್ನೆ ಗದಗನಲ್ಲಿ ಬಂಧಿಸಲಾಗಿದ್ದ ಸೋಮಶೇಖರ ನ್ಯಾಮಗೌಡನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಅಧಿಕರಿಗಳು ಇಂದು ಕೂಡ ತನಿಖೆಗೊಳಪಡಿಸಿದರು. ಅಲ್ಲದೇ ನಿನ್ನೆ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ, ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಯೋಗೀಶಗೌಡ ಗೌಡರನ ಪತ್ನಿ ಮಲ್ಲಮ್ಮ ಮತ್ತು ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಅವರನ್ನು ವಿಚಾರಣೆಗೆ ಕರೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next