ಧಾರವಾಡ: ಹುಬ್ಬಳ್ಳಿ ಜಿಪಂ ಕ್ಷೇತ್ರದ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದ ವಿಚಾರಣೆಯನ್ನು ಸಿಬಿಐ ಮತ್ತಷ್ಟು ಚುರುಕುಗೊಳಿಸಿದೆ. ಮಂಗಳವಾರ ಬೆಳಗ್ಗೆ ಉಪನಗರ ಠಾಣೆಗೆ ಆಗಮಿಸಿದ ಸಿಬಿಐನ ತನಿಖಾಧಿಕಾರಿ ರಾಜೇಶ ರಂಜನ್ ನೇತೃತ್ವದ ತಂಡವು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಹಾಗೂ ಶ್ರೀ ಪಾಟೀಲ ಅವರನ್ನು ಮತ್ತೆ ಕರೆಸಿ ವಿಚಾರಣೆಗೆ ಒಳಪಡಿಸಿದೆ. ಬೆಳಗ್ಗೆ 11:15ಕ್ಕೆ ಸಿಬಿಐ ಮುಂದೆ ವಿಚಾರಣೆಗೆ ಹಾಜರಾದ ಬಸವರಾಜ ಮುತ್ತಗಿ ಸುಮಾರು 45 ನಿಮಿಷಗಳ ಕಾಲ ವಿಚಾರಣೆ ಎದುರಿಸಿ ಮರಳಿದ್ದರು. ಮಧ್ಯಾಹ್ನ 12:30 ಗಂಟೆಗೆ ಮತ್ತೆ ಕರೆಸಿ ವಿಚಾರಣೆ ಮುಂದುವರಿಸಿದ ಸಿಬಿಐ
ಅಧಿಕಾರಿಗಳು, ಇದೇ ವೇಳೆ ಶ್ರೀ ಪಾಟೀಲ ಅವರನ್ನೂ ಕರೆಯಿಸಿ ಸಂಜೆವರೆಗೂ ವಿಚಾರಣೆಗೆ ಒಳಪಡಿಸಿದರು. ಕೆಲ ದಿನಗಳ ಹಿಂದಷ್ಟೇ ವಿಚಾರಣೆ ಎದುರಿಸಿದ್ದ ಚಂದ್ರಶೇಖರ ಇಂಡಿ ಹಾಗೂ ಸೋಮಶೇಖರ ನ್ಯಾಮಗೌಡ ಅವರ ಹೇಳಿಕೆ ಆಧರಿಸಿ ಈ ಇಬ್ಬರನ್ನು ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ತನ್ನದೇ ಪಕ್ಷದ ಮಹಿಳಾ ಸದಸ್ಯೆಯನ್ನು ಪೊಲೀಸರ ಎದುರೇ ಎಳೆದಾಡಿದ ಶಾಸಕ ಸಿದ್ದು ಸವದಿ
ಹೈಕೋರ್ಟ್‌ಗೆ ಜಾಮೀನು ಅರ್ಜಿ: ಯೋಗೀಶಗೌಡ ಹತ್ಯೆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಉಪನಗರ ಠಾಣೆ ಇನ್ಸ್‌ಪೆಕ್ಟರ್ ಚನ್ನಕೇಶವ ಟಿಂಗರಿಕರ್ ಅವರು ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಿಬಿಐನಿಂದ ಬಂಧನಕ್ಕೆ ಒಳಗಾಗುವ ಆತಂಕದಲ್ಲಿರುವ ಟಿಂಗರಿಕರ್ ಅವರು, ಈ ಹಿಂದೆ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಮಾಡಿದ್ದ ನ್ಯಾಯಾಲಯ, ಜಾಮೀನು ನೀಡಲು ನಿರಾಕರಿಸಿ ಅರ್ಜಿ ವಜಾಗೊಳಿಸಿತ್ತು. ಇದೀಗ ಟಿಂಗರಿಕರ್ ಅವರು ಹೈಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ.