ಸುರಪುರ: ನೆಲದ ಮೇಲೆ ವಿವಿಧ ಬಂಗಿಗಳಲ್ಲಿ ಯೋಗಾಸನ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ತಾಸುಗಟ್ಟಲೇ ನೀರಿನಲ್ಲಿ ಯೋಗಾಸನ ಮಾಡಿ ಜನರ ಹುಬ್ಬೇರಿಸುವಂತೆ ಮಾಡಿದ್ದಾರೆ.
ನಗರದ ಉದ್ದಾರ ಓಣಿಯ ಯಂಕಣ್ಣ ಗೋಡೇಕಾರ ಎಂಬುವರೇ ಎಲ್ಲರ ಗಮನ ಸೆಳೆದ ವ್ಯಕ್ತಿ. ಇವರಿಗೆ ಓದು ಬರಹ ಬರದಿದ್ದರೂ ಬಹುಮುಖ ಪ್ರತಿಭಾವಂತರು. ಯೋಗದೊಂದಿಗೆ ಆಯುರ್ವೇದ ಚಿಕಿತ್ಸೆ ನೀಡುವಲ್ಲೂ ಸಿದ್ಧಹಸ್ತರು. ಇವರಿಗೆ ಜಲಯೋಗ ಒಮ್ಮಿಂದೊಮ್ಮೆ ಒಲಿದು ಬಂದಿಲ್ಲ.ನಗರದ ವೆಂಕಟೇಶ ಸುಗುಂದಿ ಮಾರ್ಗದರ್ಶನದಲ್ಲಿ ಸತತ ಪರಿಶ್ರಮದ ಫಲವಾಗಿ ಇದನ್ನು ಸಿದ್ಧಿಸಿಕೊಂಡಿದ್ದಾರೆ. ವೆಂಕಣ್ಣ ಮೊದಮೊದಲು ನೀರನ ಮೇಲೆ ಮಲಗಿ ಜಾಗೃತಾವಸ್ಥೆಯಲ್ಲಿ ತೇಲುವುದನ್ನು ಕಲಿತುಕೊಂಡರು. ನಂತರ ಎದೆ, ಮುಖ, ಹೊಟ್ಟೆಯ ಭಾಗ ತೇಲಿಸುವುದನ್ನು ಕಲಿತರು. ತದನಂತರ ತಲೆಯಿಂದ ಕಾಲಿನವರೆಗೆ ಇಡೀ ದೇಹವನ್ನೆ ತೇಲಿಸುವ ವಿಧಾನ ವೃದ್ಧಿಸಿಕೊಂಡರು. ನಿರಂತರ ಪರಿಶ್ರಮದಿಂದ ಈ ವಿದ್ಯೆ ಕರಗತ ಮಾಡಿಕೊಂಡ ಗೋಡೇಕಾರ, ಈಗ ಪ್ಲಾಸ್ಟಿಕ್ ಚೀಲದಲ್ಲಿ ಇಡೀ ದೇಹ ಸೇರಿಸಿ ಕೈ ಮತ್ತು ಮುಖ ಹೊರಗಿಟ್ಟುಕೊಂಡು ಪದ್ಮಾಸನದಲ್ಲಿ ಕೂಡುತ್ತಾರೆ. ನಂತರ ಗೆಳೆಯರು ಅವರನ್ನು ಬಾವಿಯ ನೀರಿಗೆ ಎಸೆಯುತ್ತಾರೆ. ಗೋಡೇಕಾರ ನೀರಲ್ಲಿ ಮುಳುಗದೆ ಪದ್ಮಾಸನ, ಗಜಾಶನ, ಶವಾಸನ ಸೇರಿದಂತೆ ಸುಮಾರು ಒಂದು ಗಂಟೆಯವರೆಗೆ ಯೋಗದ ವಿವಿಧ ಬಂಗಿ ಪ್ರದರ್ಶಿಸುತ್ತಾರೆ.
ಮೊದಮೊದಲು ಐದಾರು ನಿಮಿಷ ಮಾತ್ರ ಸಾಧ್ಯವಾಗುತ್ತಿತ್ತು. ಕೈ, ಕಾಲು ಮುಳುಗುತ್ತಿದ್ದವು. ಇದರಿಂದ ಹಿಂಜರಿಯಲಿಲ್ಲ. ಪ್ರಯತ್ನ ಮುಂದುವರಿಸಿದೆ. ಈಗ ಯೋಗದಲ್ಲಿಪರಿಪೂರ್ಣವಾಗಿರುವ ಸಂತಸವಿದೆ. ಯೋಗದಿಂದ ದೇಹ ಸದೃಢವಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಏಕಾಗ್ರತೆ ಮೂಡುತ್ತದೆ. ಲವಲವಿಕೆ, ಉತ್ಸಾಹ, ಚೈತನ್ಯ ಒಡಮೂಡುತ್ತದೆ. ಒತ್ತಡ ಕಡಿಮೆಯಾಗಿ ಉದ್ವೇಗ ಶಮನವಾಗುತ್ತದೆ. ಮನಸ್ಸಿಗೆ ಶಾಂತಿ ನೆಮ್ಮದಿ ದೊರಕುತ್ತದೆ ಎನ್ನುತ್ತಾರೆ ಗೋಡೇಕಾರ. ಗೋಡೇಕಾರ ಜಲಯೋಗದಂತೆ ಉತ್ತಮ ನಾಟಿ ವೈದ್ಯರು ಹೌದು. ನಾಗಾಸಾಧುಗಳಿಂದ ನಾಟಿ ವೈದ್ಯ ಪದ್ಧತಿ ಕುರಿತು ಅರಿತಿರುವ ಅವರು ಹಿಮಾಲಯಕ್ಕೆ ಹೋಗುತ್ತಾರೆ. ಅಲ್ಲಿಂದಕೆಲ ಗಿಡಮೂಲಿಕೆ ತರುತ್ತಾರೆ. ಕೆಲವೊಂದನ್ನು ಸ್ಥಳೀಯವಾಗಿಸಂಗ್ರಹಿಸುತ್ತಾರೆ. ಕಳೆದ 20 ವರ್ಷಗಳಿಂದ ವಿವಿಧ ರೋಗಗಳಿಗೆ ಔಷಧಿ ನೀಡುತ್ತಿದ್ದಾರೆ.
ಋಷಿಮುನಿಗಳು ಅಳವಡಿಸಿಕೊಂಡಿದ್ದ ಆಯರ್ವೇದ ಉತ್ತಮ ಚಿಕಿತ್ಸಾ ವಿಧಾನವಾಗಿದೆ. ಭಯಾನಕ ರೋಗಗಳು ದೂರವಾಗುತ್ತವೆ. ಯಾವುದೇ ಅಡ್ಡ ಪರಿಣಾಮವಿಲ್ಲ. ಕೋವಿಡ್ ರೋಗಕ್ಕೂ ಔಷಧಿ ಸಿದ್ಧಪಡಿಸಿದ್ದೇನೆ. ಈ ಕುರಿತು ಭಾರತೀಯ ವಿಜ್ಞಾನ ಔಷಧಾಲಯ ಮತ್ತು ಪ್ರಧಾನಮಂತ್ರಿಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದೇನೆ. ಸರ್ಕಾರ ಒಪ್ಪಿಗೆ ನೀಡಿದ್ದಲ್ಲಿ ಔಷಧಿ ನೀಡಲು ಸಿದ್ಧನಿದ್ದೇನೆ. ಈಗಾಗಲೇ ಸ್ವಯಂ ಪ್ರೇರಿತರಾಗಿ ಬಂದ ಕೆಲವರಿಗೆ ಔಷಧ ಕೊಟ್ಟಿದ್ದೇನೆ.
–ಯಂಕಣ್ಣ ಗೋಡೇಕಾರ
–ಸಿದ್ದಯ್ಯ ಪಾಟೀಲ