ಅಜ್ಜಂಪುರ: ಸಮೀಪದ ಬಗ್ಗವಳ್ಳಿಯ ಇತಿಹಾಸ ಪ್ರಸಿದ್ಧ ಯೋಗಾನರಸಿಂಹ ದೇಗುಲದ ಪ್ರಧಾನ ಗೋಪುರದಲ್ಲಿ ಬಿರುಕು ಕಾಣಿಸಿಕೊಂಡಿದೆ. ದೇಗುಲದ ಹಿಂಭಾಗದ ಗೋಡೆಯೂ ಎಡಕ್ಕೆ ವಾಲಿದೆ. ಒಟ್ಟಾರೆ ಶಿಥಿಲಾವಸ್ಥೆಗೆ ಜಾರುತ್ತಿದೆ. ಇದರ ಕಾಯಕಲ್ಪಕ್ಕೆ ಸಿದ್ಧತೆ ನಡೆಯುತ್ತಿದೆ.
ಬಗ್ಗವಳ್ಳಿ ಗ್ರಾಮದ ಸಮಾನ ಮನಸ್ಕರು ರಚಿಸಿರುವ ಯೋಗಾನರಸಿಂಹಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿ ಈ ಕಾರ್ಯಕ್ಕೆ ಮುಂದಾಗಿದೆ. ಹಿಂದೆ ಹಲವು ರಾಜರು ದಾಳಿ ನಡೆಸಿ, ಅಪೂರ್ವ ಶಿಲಾಮೂರ್ತಿಗಳನ್ನು ಭಗ್ನಗೊಳಿಸಿದ್ದು ಇತಿಹಾಸ ಆಗಿದೆ. ಆದರೆ ಇಲ್ಲಿನ ಅಮೂಲ್ಯ ವಿಗ್ರಹಗಳು ಇಂದಿಗೂ ಭಂಜನೆಗೆ ಒಳಪಡುತ್ತಿವೆ. ಕಿಡಿಗೇಡಿಗಳು ದೇಗುಲದ ಸುತ್ತಲಿನ ಕಲ್ಲುಗಳ ಮೇಲೆ ಹೆಸರನ್ನು ಕೆತ್ತುತ್ತಿದ್ದಾರೆ. ಸೂಕ್ಷ್ಮ ಕಲಾಕುಸುರಿಯುಳ್ಳ ಜಯ-ವಿಜಯ ದ್ವಾರಪಾಲಕರು, ಶಿಲಾಬಾಲಕಿ, ನಾಗಕನ್ನಿಕೆ, ಗಣೇಶ, ಪಾಶ ಹಿಡಿದು ನಿಂತ ಯಮನ ವಿಗ್ರಹಗಳನ್ನು ವಿರೂಪಗೊಳಿಸಿದ್ದಾರೆ. ಇದು ಕೊಳಕು ಮನಸ್ಥಿತಿಯವರ ಕುಕೃತ್ಯಕ್ಕೆ ಸಾಕ್ಷಿಯಾಗಿದೆ.
ದೇಗುಲದ ಚನ್ನಕೇಶವ ಮೂರ್ತಿ ಇರುವ ಗರ್ಭಗುಡಿ ಮೇಲ್ಭಾಗದಲ್ಲಿನ ಎತ್ತರದ ಗೋಪುರ ಕುಸಿಯುವ ಭೀತಿ ಮೂಡಿಸಿದೆ. ಗೋಪುರದಲ್ಲಿ ಅರ್ಧ ಅಡಿಗಿಂತಲೂ ಹೆಚ್ಚು ಅಂತರದ ಬಿರುಕು ಕಾಣಿಸಿಕೊಂಡಿದೆ. ಮಳೆ-ಗಾಳಿಗೆ ಸಿಲುಕಿ ಗೋಡೆಗಳೂ ವಾಲಿವೆ. ಇಡೀ ಗೋಪುರ ಹಿಂಭಾಗದಲ್ಲಿ ಎಡಭಾಗಕ್ಕೆ ಸ್ವಲ್ಪ ಮಟ್ಟಿಗೆ ಕುಸಿದಿರುವಂತೆ ಕಾಣುತ್ತಿದೆ. ಐತಿಹಾಸಿಕ ದೇಗುಲ ಉಳಿಯಬೇಕು. ಉತ್ತಮ ಶಿಲ್ಪಕಲಾ ಗೋಪುರ ಹಾಳಾಗಬಾರದು. ಗೋಪುರ ಕುಸಿಯದಂತೆ ತಡೆಯಲು ತಕ್ಷಣ ಗೋಪುರಕ್ಕೆ ಸಿಮೆಂಟ್ ಕಂಭ ಬಳಸಿ ಆಸರೆ ಒದಗಿಸಬೇಕು. ಮಳೆ ನೀರು ತಾಗದಂತೆ ಗೋಪುರಕ್ಕೆ ತಾಡಪಾಲು ಹಾಕಬೇಕು. ಇದು ತುರ್ತಾಗಿ ಆಗಬೇಕು ಎಂದು ದೇವಾಲಯ ಅಭಿವೃದ್ಧಿ ಸಮಿತಿಯ ಶಾಂತಪ್ಪ ಒತ್ತಾಯಿಸಿದ್ದಾರೆ.
ದೇವಸ್ಥಾನ ಅಭಿವೃದ್ಧಿ ಸೇರಿ ಪ್ರವಾಸಿಗರಿಗೆ ತಂಪು ವಾತಾವರಣ ಸೃಷ್ಟಿಗೆ ಉದ್ಯಾನ ರೂಪಿಸಬೇಕು. ಜನಮನ ಸೆಳೆಯಲು ಕಾರಂಜಿ, ಮಕ್ಕಳಿಗೆ ಆಟಿಕೆ, ಜಾರುಬಂಡಿ, ಉಯ್ನಾಲೆ ವ್ಯವಸ್ಥೆಗೊಳಿಸಬೇಕು ಎಂಬ ಯೋಜನೆ ದೇವಾಲಯ ಅಭಿವೃದ್ಧಿ ಸಮಿತಿ ಮುಂದಿದೆ. ಇದಕ್ಕೆ ಸಹಕಾರ ನೀಡಲು ಗ್ರಾಮಸ್ಥರು, ಯೋಗ ವಿಸ್ಮಯಟ್ರಸ್ಟ್ ನ ಯೋಗಾ ಶಿಭಿರಾರ್ಥಿಗಳು, ಅನಂತ್ ಜೀ ಯವರ ವಿದೇಶೀ ಅಭಿಮಾನಿಗಳೂ ಮುಂದೆ ಬಂದಿದ್ದಾರೆ. ಎಂಟು ಮಂದಿ ಮುಸ್ಲಿಂ ಬಾಂಧವರೂ ದೇಣಿಗೆ ನೀಡಿದ್ದಾರೆ. ಸರ್ಕಾರ ದೇಗುಲದ ಪುನಶ್ಚೇನಕ್ಕೆ ಮುಂದಾಗಬೇಕು. ಇಲ್ಲವಾದರೆ ನಮಗಾದರೂ ಅವಕಾಶ ಮಾಡಿಕೊಡಬೇಕು. ಬದಲಿಗೆ ಐತಿಹಾಸಿಕ ದೇಗುಲವನ್ನು ಅಳಿವಿನಂಚಿಗೆ ಜಾರಲು ಬಿಡಬಾರದು ಎಂದು ಶಿವಮೊಗ್ಗದ ಯೋಗ ವಿಸ್ಮಯ ಟ್ರಸ್ಟ್ ನ ಸಂಸ್ಥಾಪಕರು ಹಾಗು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಅನಂತ್ ಜೀ ಮನವಿ ಮಾಡಿದ್ದಾರೆ.
ಶಿಥಿಲಾವಸ್ಥೆಯಲ್ಲಿರುವ ದೇಗುಲದ ರಕ್ಷಣೆಗೆ ರಾಜ್ಯ ಪ್ರಾಚ್ಯವಸ್ತು ಇಲಾಖೆ ಮುಂದಾಗಬೇಕು. ಅಪೂರ್ವ ಕಲೆ, ಇತಿಹಾಸ ಸಾರುವ ದೇವಾಲಯವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರ ಕ್ರಮವಹಿಸಬೇಕು ಎಂದು ಸಮಿತಿಯ ಸಿ.ಎಸ್. ಸಿದ್ದೇಗೌಡ ಒತ್ತಾಯಿಸಿದ್ದಾರೆ