ಹುಬ್ಬಳ್ಳಿ: ಹರಿದ್ವಾರದ ಪತಂಜಲಿ ಯೋಗ ಪೀಠ ಹಾಗೂ ಪತಂಜಲಿ ಯೋಗ ಸಮಿತಿ ಕರ್ನಾಟಕದ ಆಶ್ರಯದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ, ವಿಆರ್‌ಎಲ್ ಸಮೂಹ ಸಂಸ್ಥೆ ಸಹಯೋಗದಲ್ಲಿ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು ಬೆಳಗಿನ 5:30ಗಂಟೆಗೆ ಇಲ್ಲಿನ ದೇಶಪಾಂಡೆ ನಗರದ ಕರ್ನಾಟಕ ಜಿಮ್‌ಖಾನಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪತಂಜಲಿ ಯೋಗ ಸಮಿತಿಯ ಕರ್ನಾಟಕ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ಪತಂಜಲಿ ಯೋಗ ಪೀಠ ಮುಂದಿನ ವರ್ಷ 25ನೇ ವಸಂತ ಆಚರಿಸಿಕೊಳ್ಳುತ್ತದೆ. 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಿಂದ 6ನೇ ದಿನಾಚರಣೆ ವರೆಗೆ ವರ್ಷಂಪೂರ್ತಿ ಯೋಗ ಉಚಿತ ಶಿಬಿರಗಳನ್ನು ಆಯೋಜಿಸಲಾಗುವುದು.
ರಾಜ್ಯದಲ್ಲಿ ಈಗಾಗಲೇ ಇಂತಹ 1,100 ಕೇಂದ್ರಗಳಿದ್ದು, 6ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯೊಳಗೆ ಒಟ್ಟು 2,200 ಕೇಂದ್ರಗಳನ್ನು ಹಾಗೂ ಹು-ಧಾದಲ್ಲಿ 100 ಕೇಂದ್ರಗಳನ್ನು ಸ್ಥಾಪಿಸುವ ಸಂಕಲ್ಪವಿದೆ. ಈಗಾಗಲೇ ಧಾರವಾಡದಲ್ಲಿ 35, ಹುಬ್ಬಳ್ಳಿಯಲ್ಲಿ 10 ಯೋಗ ಶಿಬಿರಗಳಿವೆ. ವರ್ಷಂಪೂರ್ತಿ ರಾಜ್ಯಾದ್ಯಂತ ಯೋಗಮಯ ಕರ್ನಾಟಕ ಅಭಿಯಾನ ಆಯೋಜಿಸಲಾಗುವುದು ಎಂದರು.
ಜೂ. 21ರಂದು ಕರ್ನಾಟಕ ಜಿಮ್‌ಖಾನಾ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದ ವೇಳೆ ಹೆಸರು ನೋಂದಾಯಿಸಿದವರಿಗೆ 50 ಜನರ ಒಂದು ಬ್ಯಾಚ್ ಮಾಡಿ, ಅವರಿಗೆ 25 ದಿನಗಳ ಕಾಲ ಯೋಗ ಶಿಕ್ಷಕರ ವಿಶೇಷ ತರಬೇತಿ ಶಿಬಿರ ನಡೆಸಲಾಗುವುದು. ಅವರು ನಂತರ ಅವಳಿ ನಗರದ ವಿವಿಧ ವಾರ್ಡ್‌ಗಳಲ್ಲಿ ಯೋಗ ಶಿಬಿರ ನಡೆಸಿಕೊಡಲಿದ್ದಾರೆ. ಸಮಿತಿಯಿಂದ ಈಗಾಗಲೇ ರಾಜ್ಯದಲ್ಲಿ 5 ಸಾವಿರ ಯೋಗ ಶಿಕ್ಷಕರಿಗೆ ಪ್ರಮಾಣಪತ್ರ ನೀಡಲಾಗಿದೆ ಎಂದರು.
ಪತಂಜಲಿ ಯೋಗ ಸಮಿತಿಯ ರಮೇಶ ಸುಲಾಖೆ, ಕೃಷ್ಣಾ, ಸಚಿನ ಪಾಟೀಲ ಮೊದಲಾದವರಿದ್ದರು.