ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ವಿವಿಧೆಡೆ 75 ಕೋಟಿ ಸೂರ್ಯನಮಸ್ಕಾರ ಮಹಾಯಜ್ಞದ ಮಂಗಳೂರು ಕಾರ್ಯಕ್ರಮ ನಗರದ ಮಂಗಳಾ ಕ್ರೀಡಾಂಗಣದಲ್ಲಿ ರವಿವಾರ ಬೆಳಗ್ಗೆ ನಡೆಯಿತು.
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು. ಆರೋಗ್ಯ ಕಾಪಾಡಿಕೊಳ್ಳಲು ಯೋಗವೇ ಮಾರ್ಗ. ಪ್ರಧಾನಿ ಮೋದಿ ಯೋಗಕ್ಕೆ ಸ್ಥಾನಮಾನ ನೀಡಲು ಸಂಕಲ್ಪಿಸಿದಂತೆ ಯೋಗ ಇಂದು ವಿಶ್ವವ್ಯಾಪಿಯಾಗಿದೆ.ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 75 ಕೋಟಿ ಸೂರ್ಯನಮಸ್ಕಾರ ಮಹಾಯಜ್ಞ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಕುಟುಂಬ ಪ್ರಬೋಧನ್ ಮಂಗಳೂರು ವಿಭಾಗ ಸಂಯೋಜಕ ಗಜಾನನ ಪೈ ಯೋಗದ ಮಹತ್ವ ವಿವರಿಸಿದರು. ಆರೆಸ್ಸೆಸ್‌ನ ಮಂಗಳೂರು ಮಹಾನಗರ ಸಂಘಚಾಲಕ್ ಡಾ| ಸತೀಶ್ ರಾವ್, ಶಾಸಕರಾದ ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿ’ಸೋಜ, ಹಿರಿಯ ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ, ಕ್ರೀಡಾಭಾರತಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬೋಜರಾಜ್ ಕಲ್ಲಡ್ಕ, ಮಂಗಳೂರಿನ ಪತಂಜಲಿ ಯೋಗಪೀಠದ ಡಾ| ಜ್ಞಾನೇಶ್, ಸುಜಾತಾ ಮಾರ್ಲ, ಮಂಗಳೂರಿನ ಪತಂಜಲಿ ಶಿಕ್ಷಣ ಪ್ರತಿಷ್ಠಾನದ ಏಕನಾಥ ಬಾಳಿಗ, ಹಿಂದೂ ಜಾಗರಣ ವೇದಿಕೆಯ ಅಮಿತ್, ಮಂಗಳೂರು ಆವಿಷ್ಕಾರ ಯೋಗ ಸಂಸ್ಥೆಯ ಕುಶಾಲಪ್ಪ ಗೌಡ ಉಪಸ್ಥಿತರಿದ್ದರು.
ಕ್ರೀಡಾಭಾರತಿ ಮಂಗಳೂರು ಅಧ್ಯಕ್ಷ ಕಾರಿಯಪ್ಪ ರೈ ಸ್ವಾಗತಿಸಿದರು. ಕೃಷ್ಣ ಶೆಟ್ಟಿ ತಾರೆಮಾರ್ ವಂದಿಸಿದರು. ಕೇಶವ ಬಂಗೇರ ನಿರೂಪಿಸಿದರು.