Advertisement

ಮಕ್ಕಳೊಂದಿಗೆ ಯೋಗಾಭ್ಯಾಸ ಆರೋಗ್ಯಕ್ಕೆ ಹಲವು ಲಾಭ

11:24 AM Dec 07, 2020 | Nagendra Trasi |

ಆರೋಗ್ಯ ರಕ್ಷಣೆಯಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ಬೆಳಗ್ಗಿನ ಆರಂಭವನ್ನು ಯೋಗದಿಂದ ಮಾಡುವುದು ಬಹಳ ಒಳ್ಳೆಯದು. ಅದರಲ್ಲೂ ಮಕ್ಕಳೊಂದಿಗೆ ಸೇರಿ ಯೋಗಾಭ್ಯಾಸ ಮಾಡುವುದರಿಂದ ಮಕ್ಕಳಿಗೆ ಆ ಕುರಿತು ಜಾಗೃತಿ ಮೂಡಿಸಿದಂತಾಗುವುದು ಮಾತ್ರವಲ್ಲ ಇದರಿಂದ
ನಮ್ಮ ಮನಸ್ಸಿನ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುವುದು.

Advertisement

ಸಣ್ಣ ವಯಸ್ಸಿನಲ್ಲೇ ಯೋಗ ಮಾಡುವುದು ಕಲಿತರೆ ಮಾಂಸಖಂಡಗಳು ಶಕ್ತಿಯುತವಾಗುತ್ತವೆ. ಉಸಿರಾಟದ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದೇಹದ ತೂಕ ಸಮತೋಲನದಲ್ಲಿರುತ್ತದೆ. ಹೃದಯ, ರಕ್ತನಾಳಗಳ ಸಮಸ್ಯೆ ಉಂಟಾಗುವುದಿಲ್ಲ. ಆಟಪಾಠಗಳಲ್ಲಿ ಹೆಚ್ಚು ತಲ್ಲೀನತೆ ಮೂಡುತ್ತದೆ. ಮಾನಸಿಕ ಉದ್ವೇಗ, ಒತ್ತಡ ಕಡಿಮೆಯಾಗುತ್ತದೆ. ಆಟದಲ್ಲಿ ತಲ್ಲೀನತೆ ಹೆಚ್ಚುತ್ತದೆ. ಹೀಗಾಗಿ ಮಕ್ಕಳನ್ನು ಯೋಗದಲ್ಲಿ ಜತೆಯಾಗಿಸುವುದು ಅವರ ಆರೋಗ್ಯಕ್ಕೂ ಅತ್ಯುತ್ತಮ.

ಮಕ್ಕಳು ಯೋಗಾಭ್ಯಾಸವನ್ನು ಸುಲಭವಾಗಿ ಕಲಿಯುತ್ತಾರೆ. ಹೀಗಾಗಿ ಅವರೊಂದಿಗೆ ಯೋಗ ಮಾಡುವುದು ನಿಮಗೂ ಹೆಚ್ಚು ಪ್ರೇರಣೆ ನೀಡುತ್ತದೆ. ಮಕ್ಕಳೊಂದಿಗೆ ಸೇರಿ ಮಾಡಬಹುದಾದ ಯೋಗ ಭಂಗಿಗಳಲ್ಲಿ ಮಾಹಿತಿ ಇಲ್ಲಿದೆ.

ಸೇತುಬಂಧಾಸನ
ಮನಸ್ಸನ್ನು ಶಾಂತಗೊಳಿಸುವ ಸೇತುಬಂಧಾಸನ ಬೆನ್ನಿನ ಮೂಳೆ, ಎದೆ, ಸೊಂಟ, ಭುಜಕ್ಕೆ ಶಕ್ತಿ ತುಂಬುತ್ತದೆ. ಜೀರ್ಣಕ್ರಿಯೆ ಸುಧಾರಿಸಲು ಇದು ಪ್ರಯೋಜನಕಾರಿಯಾಗಿದೆ.

ನೆಲದ ಮೇಲೆ ಕಾಲಿಟ್ಟು ಮಂಡಿಗಳನ್ನು ಮಡಚಿ ಅಂಗಾತ ಮಲಗಿ. ಕಾಲುಗಳ ಹೆಬ್ಬೆರಳುಗಳು ನೇರವಾಗಿರಲಿ. ಮಂಡಿಗಳು ಸೊಂಟಕ್ಕೆ ಸಮಾನಾಗಿರಲಿ. ಈಗ ಎರಡು ತೋಳುಗಳನ್ನು ದೇಹದ ಅಕ್ಕಪಕ್ಕ ಇಟ್ಟು, ಅಂಗೈ ಗಳು ನೆಲ ಮುಟ್ಟುವಂತಿರಲಿ. ಎದೆಗೆ ಗಲ್ಲ ತಾಗಿ ಉಸಿರು ತೆಗೆದುಕೊಳ್ಳುವಾಗ ಸೊಂಟವನ್ನು ಮೇಲೆತ್ತಿ.

Advertisement

ನೌಕಾಸನ
ಇದು ಹೊಟ್ಟೆಯ ಹಾಗೂ ಬೆನ್ನಿನ ಭಾಗದ ಮಾಂಸ ಖಂಡಗಳನ್ನು ಬಲಿಷ್ಠವಾಗಿಸುತ್ತದೆ. ಇದನ್ನು ಮಾಡಲು ಮೊದಲು ಅಂಗಾತ ಮಲಗಿ ಎರಡೂ ಕೈ ಗಳನ್ನು ದೇಹದ ಅಕ್ಕಪಕ್ಕ ಇಟ್ಟುಕೊಂಡು ಎರಡು ಕಾಲುಗಳನ್ನು ಜೋಡಿಸಿಟ್ಟುಕೊಳ್ಳಿ. ದೀರ್ಘ‌ ಉಸಿರೆಳೆದುಕೊಂಡು ಎದೆ ಮತ್ತು ಕಾಲುಗಳನ್ನು ನೆಲದಿಂದ ಮೇಲೆತ್ತಿ. ನಿಮ್ಮ ತೋಳು ಮತ್ತು ಕಾಲುಗಳನ್ನು ನೀರಿನಲ್ಲಿ ದೋಣಿ ಸಾಗುವಂತೆ ಚಾಚಿ.

ಅಧೋಮುಖ ಶ್ವಾನಾಸನ
ಇದರಿಂದ ದೇಹದಲ್ಲಿ ರಕ್ತ ಸಂಚಾರ ಅಧಿಕವಾಗಿ ದೇಹದ ಎಲ್ಲ ಭಾಗಕ್ಕೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ದೊರೆಯುವುದು. ಚಾಪೆಯಲ್ಲಿ ಮಂಡಿಗಳ ಮೇಲೆ ಕುಳಿತು ಎರಡು ಕೈಗಳು ಚಾಪೆ ಮೇಲೆ ಇರಿಸಿ. ಕಾಲುಗಳ ಹೆಬ್ಬೆರಳುಗಳ ಮೇಲೆ ಬಲ ಹಾಕುವಂತೆ ಪ್ರಯತ್ನಿಸಿ. ನಿಧಾನವಾಗಿ ಸೊಂಟವನ್ನು ಮೇಲೆತ್ತಿ ತ್ರಿಕೋನಾಕಾರಕ್ಕೆ ಬನ್ನಿ. ಮಕ್ಕಳು ಇದನ್ನು ಸುಲಭವಾಗಿ ಮಾಡುತ್ತಾರೆ. ಅವರ ದೇಹ ಭಾರವಿಲ್ಲದ ಕಾರಣ ತಮ್ಮ ಕಾಲಿನ ಹೆಬ್ಬೆರಳುಗಳ ಮೇಲೆ ಸುಲಭವಾಗಿ ನಿಲ್ಲುತ್ತಾರೆ. ಆದರೂ ಸಮತೋಲನ ತಪ್ಪದಂತೆ ಜಾಗ್ರತೆ ವಹಿಸುವುದನ್ನು ಕಲಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next