ಮಂಡ್ಯ: ಇವರ ವಯಸ್ಸು 70. ಯೋಗ ಮಾಡಲು ನಿಂತರೆ ಎಲ್ಲರಿಗೂ ಗುರು. ಇಳಿ ವಯಸ್ಸಿನಲ್ಲೂ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡು ಅಚ್ಚರಿ ಮೂಡಿಸಿದ್ದಾರೆ ಯೋಗ ಸಾಧಕಿ ಮಂಡ್ಯ ತಾಲೂಕಿನ ಚಿಕ್ಕಮಂಡ್ಯದ ಭಾಗ್ಯಲಕ್ಷ್ಮಮ್ಮ.
ಎಪ್ಪತ್ತನೇ ಇಳಿ ವಯಸ್ಸಿನಲ್ಲೂ ಭಾಗ್ಯಲಕ್ಷ್ಮಮ್ಮ ಯೋಗಾಭ್ಯಾಸ ಮಾಡುವುದು ಬಿಟ್ಟಿಲ್ಲ. ಅದನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದಾರೆ. ಪ್ರತಿದಿನ ಚಿಕ್ಕಮಂಡ್ಯದಿಂದ ನಡೆದುಕೊಂಡೇ ಮುಂಜಾನೆ 5.15ಕ್ಕೆಲ್ಲಾ ಗಾಂಧಿ ಭವನದಲ್ಲಿ ಹಾಜರಿರುತ್ತಾರೆ. 7.30ಕ್ಕೆ ಯೋಗ ಮುಗಿಸಿ ಮಾರುಕಟ್ಟೆಗೆ ಹೋಗಿ ತರಕಾರಿ ತೆಗೆದುಕೊಂಡು ಮನೆ ತಲುಪಿ, ಮನೆಯಲ್ಲಿಯೂ ಮನೆ ಕೆಲಸಗಳನ್ನು ಅವರೇ ನಿರ್ವಹಿಸುತ್ತಾರೆ. ಅವರ ಕ್ರಿಯಾಶೀಲತೆ, ಉತ್ಸಾಹ, ಆರೋಗ್ಯಭಾಗ್ಯಕ್ಕೆ ಯೋಗವೇ ಕಾರಣ.
64ರಲ್ಲಿ ಆರಂಭಿಸಿದ ಯೋಗ: ಮೊದಲು ಭಾಗ್ಯಲಕ್ಷ್ಮಮ್ಮನವರಿಗೂ ಯೋಗ, ಧ್ಯಾನ, ಪ್ರಾಣಾಯಾಮಗಳ ಗಂಧವೇ ಗೊತ್ತಿರಲಿಲ್ಲ. ಇವರಿಗೆ 64 ವಯಸ್ಸಾಗಿದ್ದ ವೇಳೆ ಮಂಡಿ ನೋವು ಬಾಧಿಸಲು ಶುರು ಮಾಡಿತು. ನೋಡ ನೋಡುತ್ತಿದ್ದಂತೆ ಎರಡು ಕಾಲುಗಳ ಮಂಡಿಗಳ ನರ ಊದಿಕೊಂಡು ಗಟ್ಟಿಯಾಗಿತ್ತು. ಅಸಾಧ್ಯ ನೋವಿನಿಂದ ಬಳಲುವಂತೆ ಮಾಡಿತು. ಮಾತ್ರೆ, ಔಷಧ ತೆಗೆದುಕೊಳ್ಳುವ ಮನಸ್ಸಿಲ್ಲದ ಭಾಗ್ಯಲಕ್ಷ್ಮಮ್ಮ ನೋವಿಗೆ ಪರಿಹಾರ ಸಿಗದೆ ಕಂಗಾಲಾಗಿದ್ದರು. ಈ ವೇಳೆ ಭಾಗ್ಯಲಕ್ಷ್ಮಮ್ಮನವರ ಕೊನೆ ಮಗ ನಾಗೇಶಾಚಾರ್ ಯೋಗಾಭ್ಯಾಸಕ್ಕೆ ಹೋಗುತ್ತಿದ್ದರು. ಅತ್ತೆ ಮಂಡಿ ನೋವಿನಿಂದ ಬಳಲುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಸೊಸೆ ಉಮಾ, ಅತ್ತೆಯನ್ನು ಯೋಗಾಭ್ಯಾಸಕ್ಕೆ ಕರೆದುಕೊಂಡು ಹೋಗುವಂತೆ ಪತಿಗೆ ಸಲಹೆ ನೀಡಿದರು.
ಆರೋಗ್ಯ ಸಮಸ್ಯೆಗೆ ತಕ್ಕ ಆಸನ: ತಾಯಿಗೆ ಯೋಗ ಕಲಿಸಲು ಮಂಡ್ಯದ ಗಾಂಧಿ ಭವನದಲ್ಲಿ ನಡೆಯುತ್ತಿರುವ ಯೋಗ ಶಿಬಿರಕ್ಕೆ ಕರೆದುಕೊಂಡು ಬಂದರು. ಅಲ್ಲಿ ಯೋಗಗುರುವಾಗಿದ್ದ ಬಾಲಕೃಷ್ಣ ಗುರೂಜಿ ಅವರು ಭಾಗ್ಯಲಕ್ಷ್ಮಮ್ಮನವರ ಸಮಸ್ಯೆ ತಿಳಿದುಕೊಂಡು ಒಂದು ಆಸನ ಹೇಳಿಕೊಟ್ಟರು. ಕಿಟಕಿಯ ಬಳಿ ನಿಂತು ಅದರ ಸರಳು ಎಷ್ಟು ಎಟುಕಿಸಲು ಸಾಧ್ಯವೋ ಅಷ್ಟನ್ನು ಹಿಡಿದುಕೊಂಡು ನಿಲ್ಲುವಂತೆ ಸಲಹೆ ನೀಡಿದರು. ಆನಂತರದಲ್ಲಿ ಸುಲಭವಾಗಿ ಕಲಿಯುವಂತಹ ಆಸನಗಳನ್ನು ಅವರಿಗೆ ಹೇಳಿಕೊಡಲಾರಂಭಿಸಿದರು. ಈ ವೇಳೆ ಭಾಗ್ಯಲಕ್ಷ್ಮಮ್ಮನವರಿಗಿದ್ದ ಮಂಡಿನೋವಿನಲ್ಲಿ ಚೇತರಿಕೆ ಕಂಡು ಬಂದಿತು.
ಆನಂತರದಲ್ಲಿ ದೇಹ ದಂಡಿಸಲು ಮುಂದಾದ ಭಾಗ್ಯಲಕ್ಷ್ಮಮ್ಮ ಯುವಕರೂ ನಾಚಿಸುವಂತೆ ಯೋಗ ಮಾಡಲು ಶುರು ಮಾಡಿದರು. ಸುಮಾರು 30ರಿಂದ 40 ಆಸನ ಸುಲಭವಾಗಿ ಮಾಡುವ ಭಾಗ್ಯಲಕ್ಷ್ಮಮ್ಮ ಎಲ್ಲರ ಆಕರ್ಷಣೆಯ ಕೇಂದ್ರಬಿಂದು.
ದೊರೆತಿರುವ ಪ್ರಶಸ್ತಿಗಳು: ಸ್ವಾಮಿ ವಿವೇಕಾನಂದ ಕನ್ನಡ ಯುವ ಯೋಗ ಬಳಕ 2014-15ನೇ ಸಾಲಿನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನಡೆಸಿದ ಚಾಂಪಿಯನ್ ಆಫ್ ದಿ ಚಾಂಪಿಯನ್ ರಾಜ್ಯಮಟ್ಟದ ಮುಕ್ತ ಯೋಗ ಸ್ಪರ್ಧೆಯಲ್ಲಿ ಮಂಡ್ಯ ಯೋಗಕುಮಾರಿ-ಯೋಗ ಕುಮಾರಿ ಪ್ರಶಸ್ತಿ, 2016-17ನೇ ಸಾಲಿನಲ್ಲಿ ನಡೆಸಿದ ರಾಷ್ಟ್ರಮಟ್ಟದ ಅಂತರ ಶಾಲಾ-ಕಾಲೇಜು ಹಾಗೂ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಭಾಗ್ಯಲಕ್ಷ್ಮಮ್ಮ ಪ್ರಥಮ ಸ್ಥಾನದೊಂದಿಗೆ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮಂಡಿ ನೋವಿನಿಂದ ಪಾರಾಗಲು ಯೋಗ ಸೇರಿಕೊಂಡ ಭಾಗ್ಯಲಕ್ಷ್ಮಮ್ಮ ಇಂದು ಯೋಗ ಗುರುವಾಗಿದ್ದಾರೆ. ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಹಾರೋಗ್ಯ ಕಾಪಾಡಿಕೊಳ್ಳುವಂತೆ ಎಲ್ಲರಿಗೂ ಸಲಹೆ ನೀಡುತ್ತಾ ಸಂತಸದ ಬದುಕು ಕಂಡುಕೊಂಡಿದ್ದಾರೆ.
● ಮಂಡ್ಯ ಮಂಜುನಾಥ್