ದೊಡ್ಡಬಳ್ಳಾಪುರ: ಚೀನಾದಲ್ಲಿ ಹರಡು ತ್ತಿರುವ ಮಾರಣಾಂತಿಕ ಕೊರೊನಾ ವೈರಸ್‌ನಿಂದಾಗಿ ಇಡೀ ಜಗತ್ತೇ ಆತಂ ಕಗೊಂಡಿದೆ. ಚೀನಾಗೆ ಹೋಗಿ ಬಂದವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಈ ನಡುವೆ ಯೋಗ ಶಿಕ್ಷಕರಾಗಿ ಚೀನಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದೊಡ್ಡಬಳ್ಳಾಪುರದ ಎಚ್.ಜಿ.ರಘು, ಶಿಕ್ಷಕ ಆರ್.ಹರೀಶ್ ಆರೋಗ್ಯವಾಗಿ ಸ್ವದೇಶಕ್ಕೆ ಹಿಂತಿರುಗಿದ್ದಾರೆ. ದೊಡ್ಡಬಳ್ಳಾಪುರದ ನಿಸರ್ಗ ಯೋಗ ಕೇಂದ್ರದಲ್ಲಿ ತರಬೇತಿ ಪಡೆದು, 5 ವರ್ಷಗಳಿಂದ ಚೀನಾದ ಶಾಂಘೈ ನಗರದ ಎಸ್ ಯೋಗ ಮತ್ತು ರಿಕ್ರಿಯೇಷನ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಚ್.ಜಿ.ರಘು ಹೇಳುವಂತೆ, ಚೀನಾದಲ್ಲಿ ಈಗ ರಜೆಯ ಸಮಯ.
ನಾವು ಪ್ರತಿ ವರ್ಷ ಜನವರಿಯಲ್ಲಿ ಸ್ವಗ್ರಾಮಕ್ಕೆ ಬಂದು ಫೆ.1ರಂದು ವಾಪಸ್ ಹೋಗುತ್ತಿದ್ದೆವು. ಆದರೆ ಈ ಬಾರಿ ಕೊರೊನಾ ಸೋಂಕಿನಿಂದಾಗಿ ಊರಿಗೆ ತೆರಳುವಂತೆ ಸೂಚಿಸಿದ್ದರು. ಅಲ್ಲದೆ ಅಲ್ಲಿ ಈಗ ಚಳಿ ಹೆಚ್ಚಾಗಿರುವ ಕಾರಣ ರೋಗ ವೇಗವಾಗಿ ಹರಡುವ ಸಾಧ್ಯತೆ ಇದ್ದು, ರಜೆ ನೀಡಿದ್ದಾರೆ ಎಂದರು.
ಚೀನಾದಲ್ಲಿ ಸೋಂಕಿತರ ಮೇಲೆ ಹೆಚ್ಚಿನ ನಿಗಾ ವಹಿಸಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಕೆಮ್ಮು, ಶೀತ ಹರಡದಂತೆ ಮಾಸ್ಕ್, ಕೈಗವಜುಗಳನ್ನು ಬಳಸಲಾಗುತ್ತಿದೆ. ಮೊಬೈಲ್ ಆಸ್ಪತ್ರೆಯಲ್ಲಿ 7 ಸಾವಿರ ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಭಾರತಕ್ಕೆ ಮರಳುವಾಗ ಶಾಂಘೈ, ಮಲೇಷಿಯಾ ಹಾಗೂ ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಿ, ಕೊರೊನಾ ಲಕ್ಷಣಗಳಿಲ್ಲ ಎಂದು ದೃಢಪಡಿಸಲಾಯಿತು ಎಂದು ಮಾಹಿತಿ ನೀಡಿದರು.
ಗ್ಯಾಶಿಂಗ್ ನಗರದ ಯೋಗ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಗ ಶಿಕ್ಷಕ ಆರ್.ಹರೀಶ್ ಪ್ರತಿಕ್ರಿಯಿಸಿ, ನಾನಿದ್ದ ನಗರದಲ್ಲಿ ಹೂಹಾನ್ ನಗರದಷ್ಟು ಸೋಂಕು ಹರಡಿಲ್ಲ. ಆದರೂ ವೈರಸ್ ಹರಡದಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದಾರೆ ಎಂದರು.