Advertisement

Udupi: ಅ.24-26; ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್‌ದೇವ್‌ರಿಂದ ಯೋಗಾಭ್ಯಾಸ

08:26 PM Oct 23, 2024 | Team Udayavani |

ಉಡುಪಿ: ಪತಂಜಲಿ ಯೋಗ ಪೀಠ ಹರಿದ್ವಾರದ ಸಂಸ್ಥಾಪಕ ಬಾಬಾ ರಾಮ್‌ದೇವ್‌ ಅವರು ನಡೆಸಿಕೊಡುವ ಯೋಗಶಿಬಿರದಲ್ಲಿ ಖುದ್ದು ಭಾಗವಹಿಸಬೇಕು ಎಂಬ ಹಂಬಲ ಅನೇಕರಲ್ಲಿರುತ್ತದೆ. ಆದರೆ ಅದಕ್ಕೆ ಅವಕಾಶ ಸಿಗುವುದು ತೀರ ಕಡಿಮೆ. ಇಂತಹದ್ದೊಂದು ಅವಕಾಶ ಇದೀಗ ಕರಾವಳಿಯ ಜನರಿಗೆ ಒದಗಿ ಬಂದಿದೆ.

Advertisement

ಅ.24ರಿಂದ 26ರವರೆಗೆ ಪ್ರತಿದಿನ ಬೆಳಗ್ಗೆ 5.30ರಿಂದ 7.30ರವರೆಗೆ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಬಾಬಾ ರಾಮ್‌ದೇವ್‌ ಅವರಿಂದಲೇ ಪತಂಜಲಿ ಯೋಗ ಶಿಬಿರ ನಡೆಯಲಿದೆ.

ಈ ಶಿಬಿರದಲ್ಲಿ ಬಾಬಾ ರಾಮ್‌ದೇವ್‌ ಅವರು ಯೋಗ, ಆಸನ, ಪ್ರಾಣಾಯಾಮ ಸಹಿತ ಸುದೃಢ ಆರೋಗ್ಯಕ್ಕೆ ಪೂರಕವಾದ ಹಲವು ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ.

ಶ್ರೀ ಕೃಷ್ಣಮಠ ಶ್ರೀ ಪರ್ಯಾಯ ಪುತ್ತಿಗೆ ಮಠದ ಸಹಯೋಗದಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಭಾರತೀಯ ವಿದ್ವತ್‌ ಪರಿಷತ್‌ ಆಶ್ರಯದಲ್ಲಿ ಅ.24ರಿಂದ 26ರ ವರೆಗೆ ನಡೆಯಲಿರುವ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾಸಮ್ಮೇಳನದಲ್ಲಿ ನಿತ್ಯ ಬೆಳಗ್ಗೆ ಪತಂಜಲಿ ಯೋಗ ಇರಲಿದೆ.

ಯೋಗಿಕ್‌ ಜಾಗಿಂಗ್‌ ವಿಶೇಷ
ಈ ಬಗ್ಗೆ ಮಾಹಿತಿ ನೀಡಿದ ಪತಂಜಲಿ ರಾಜ್ಯ ಪ್ರಭಾರಿ ಭವರಲಾಲ್‌ ಆರ್ಯ ಅವರು, ಬಾಬಾ ರಾಮ್‌ದೇವ್‌ ಅವರೊಂದಿಗೆ ಯೋಗಪೀಠದ ಪ್ರಧಾನ ಕಾರ್ಯದರ್ಶಿ ಆಚಾರ್ಯ ಬಾಲಕೃಷ್ಣ ಅವರು ಉಡುಪಿ ಶಿಬಿರದಲ್ಲಿರಲಿದ್ದಾರೆ. ಮೂರು ದಿನ ಬೆಳಗ್ಗೆ 5.30ರಿಂದ 7.30ರವರೆಗೆ “ಯೋಗ ವಿಜ್ಞಾನ ಮತ್ತು ಪ್ರಾಣಾಯಾಮ ಧ್ಯಾನ ಶಿಬಿರ’ ನಡೆಯಲಿದೆ. ಈ ಶಿಬಿರದಲ್ಲಿ ಸಾಮಾನ್ಯ ಜನರು ಸುಲಭವಾಗಿ ಮಾಡಬಹುದಾದ ಯೋಗಾಸನಗಳು, ಯೋಗಿಕ್‌ ಜಾಗಿಂಗ್‌, ಸೂರ್ಯನಮಸ್ಕಾರ, ದಂಡ ಬೈಠಕ್‌ಗಳು ಹಾಗೂ ರೋಗಾನುಸಾರ ಯೋಗಾಸನಗಳು, ಆಸನಗಳು ಇರಲಿದೆ.

Advertisement

ಇಂಟಿಗ್ರೇಟೆಡ್‌ ಥೆರಫಿ ಮಾಹಿತಿ
ಭಾರತೀಯ ಪ್ರಾಚೀನ ಚಿಕಿತ್ಸಾ ಪದ್ಧತಿಗಳಾದ ಯೋಗ, ಆಯುರ್ವೇದ, ಯುನಾನಿ, ಹೋಮಿಯೋಪಥಿ, ಸಿದ್ಧ, ಅಕ್ಯೂಪ್ರೇಸರ್‌, ಅಕ್ಯೂಪಂಚರ್‌, ಸ್ರಿಂಗಿ, ಮೆಡಿಕೆಟೆಡ್‌ ಜ್ಯೂಸ್‌, ವಾಟರ್‌, ಷಟ್‌ಕರ್ಮ, ಪಂಚಕರ್ಮ, ಬಸ್ತಿ ಒಳಗೊಂಡ ಇಂಟಿಗ್ರೆಟೆಡ್‌ ಥೆರಪಿಯ ಸಂಪೂರ್ಣ ಮಾಹಿತಿಯನ್ನು ಯೋಗ ಶಿಬಿರದಲ್ಲಿ ನೀಡಲಾಗುತ್ತದೆ.

ಜನರು ಮನೆಯಲ್ಲೇ ಇದ್ದು ಆಹಾರ ಕ್ರಮ, ದಿನಚರಿಯಲ್ಲಿ ಬದಲಾವಣೆ ಮಾಡಿ ಈ ಪದ್ಧತಿ ಅನುಸರಿಸಿದರೆ ಸಾಮಾನ್ಯ, ಗಂಭೀರ ಕಾಯಿಲೆಯಿಂದ ದೂರ ಇರಬಹುದು. ಯೋಗ ದಿನಚರಿಯಿಂದ ನಿರೋಗಿಯಾಗಿ ಬದುಕಬಹುದು. ಯೋಗ ಯೋಗಿಗಳಿಗೆ ಚಿಕಿತ್ಸಾ ಪದ್ಧತಿಯಾದರೆ, ಸಾಧಕರಿಗೆ ಸಾಧನಾ ಪದ್ಧತಿ, ಸಾಮಾನ್ಯ ಸಾಧಕರಿಗೆ ಅದು ಜೀವನ ಪದ್ಧತಿಯಾಗಿದೆ.

ಜಿಲ್ಲಾ ಪತಂಜಲಿ ಯೋಗ ಸಮಿತಿಯು ಜಿಲ್ಲಾದ್ಯಂತ 31 ಯೋಗ ಕೇಂದ್ರವನ್ನು ಹೊಂದಿದೆ. ಮೂರು ದಿನಗಳ ಶಿಬಿರದ ಅನಂತರ ಈ ಯೋಗ ಕೇಂದ್ರಗಳನ್ನು ಸಂಪರ್ಕಿಸಿ ನಿತ್ಯ ಯೋಗವನ್ನು ಮುಂದುವರಿಸಬಹುದಾಗಿದೆ ಎಂಬ ಮಾಹಿತಿ ನೀಡಿದರು.

ಉಚಿತ ಪ್ರವೇಶ
ಯೋಗಕ್ಕೆ ಬರುವವರು ಯೋಗ ಮಾಡಲು ಪೂರಕವಾದ ಮ್ಯಾಟ್ರಸ್‌(ಹಾಸಿಗೆ) ತರಬೇಕು. ಯೋಗ ಶಿಬಿರವನ್ನು ಬಾಬಾ ರಾಮ್‌ದೇವ್‌ ನಡೆಸಿಕೊಡಲಿದ್ದಾರೆ. ಹೀಗಾಗಿ ಸರಿಯಾಗಿ ಬೆಳಗ್ಗೆ 5.30ರಿಂದ ಬೆಳಗ್ಗೆ 7.30ರವರೆಗೆ 2 ಗಂಟೆಗಳ ಕಾಲ ನಡೆಯಲಿದೆ. ಯಾರು ಬೇಕಾದರೂ ಪಾಲ್ಗೊಳ್ಳಬಹುದು ಮತ್ತು ಯಾವುದೇ ಶುಲ್ಕ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next