Advertisement

Yoga: ಹದಿಹರಯದವರ ಪ್ರೈಮರಿ ಡಿಸ್ಮನೋರಿಯಾಕ್ಕೆ ಯೋಗ ಪರಿಹಾರ

12:55 PM Aug 11, 2024 | Team Udayavani |

ಯಾವುದೇ ರೋಗಶಾಸ್ತ್ರೀಯ ಸಕಾರಣವಿಲ್ಲದೆ ಋತುಸ್ರಾವದ ಸಮಯದಲ್ಲಿ ನೋವು ಸಹಿತವಾದ ಸೆಳೆತವೇ ಪ್ರೈಮರಿ ಡಿಸ್ಮನೋರಿಯಾ. ಕೆಳಹೊಟ್ಟೆಯ ಭಾಗದಲ್ಲಿ ಸೆಳೆತ ಸಹಿತವಾದ ನೋವು ಇದ್ದು, ಅದು ಬೆನ್ನು ಮತ್ತು ಕಾಲುಗಳಿಗೂ ವ್ಯಾಪಿಸುವುದು ಇದರ ಲಕ್ಷಣ. ಜಾಗತಿಕವಾಗಿ ಹದಹರಯದ ಬಾಲಕಿಯರ ಪೈಕಿ ದೊಡ್ಡ ಪ್ರಮಾಣದ ಬಾಲಕಿಯರಿಗೆ ಈ ಸಮಸ್ಯೆ ಇರುತ್ತದೆ.

Advertisement

ಅಂತರ್ಗತವಾದ ಯಾವುದೇ ರೋಗ ಅಥವಾ ಆರೋಗ್ಯ ಸಮಸ್ಯೆ ಇಲ್ಲದೇ ಋತುಚಕ್ರದ ಅವಧಿಯಲ್ಲಿ ನೋವು ಸಹಿತವಾದ ಸೆಳವು ಇದರ ಪ್ರಮುಖ ಲಕ್ಷಣವಾಗಿದ್ದು, ಹದಿಹರಯದ ಬಾಲಕಿಯರ ಪಾಲಿಗೆ ಒಂದು ದೊಡ್ಡ ಆರೋಗ್ಯ ಸಮಸ್ಯೆಯಾಗಿರುತ್ತದೆ. ಸಾಮಾನ್ಯವಾಗಿ ಋತುಸ್ರಾವ ಆರಂಭಕ್ಕೆ ಒಂದರಿಂದ ಮೂರು ದಿನ ಮುಂಚಿತವಾಗಿ ಈ ನೋವು ಆರಂಭವಾಗುತ್ತದೆ. ಋತುಸ್ರಾವ ಆರಂಭದ ಮೊದಲ ಅಥವಾ ಎರಡನೇ ದಿನ; ಇನ್ನಷ್ಟು ನಿಖರವಾಗಿ ಹೇಳುವುದಾದರೆ ಮೊದಲ 24-36 ತಾಸುಗಳಲ್ಲಿ ಈ ನೋವು ಅತ್ಯಂತ ತೀವ್ರವಾಗಿರುತ್ತದೆ.

ಜಾಗತಿಕವಾಗಿ ಹದಿಹರಯದ ಬಾಲಕಿಯರ ಪೈಕಿ ಶೇ. 50ರಿಂದ ಶೇ. 95ರಷ್ಟು ಮಂದಿಗೆ ಡಿಸ್ಮನೋರಿಯಾ ಇರಬಲ್ಲುದಾಗಿದೆ. ಹಾಗೆಯೇ ಅಧ್ಯಯನವೊಂದರಲ್ಲಿ ಕಂಡುಕೊಳ್ಳಲಾಗಿರುವಂತೆ ಉಡುಪಿ ಜಿಲ್ಲೆಯಲ್ಲಿ ಕೂಡ ಡಿಸ್ಮನೋರಿಯಾ ಶೇ. 68ರಷ್ಟು ಬಾಲಕಿಯರಲ್ಲಿ ಇದೆ. ಡಿಸ್ಮನೋರಿಯಾದ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಕೆಲವರಲ್ಲಿ ಔಷಧ ಅಂಗಡಿಯಿಂದ ಪಡೆದ ನೋವು ನಿವಾರಕದಿಂದ ಪರಿಹಾರವಾಗಬಹುದಾದಷ್ಟು ಲಘುವಾದ ನೋವು, ತೊಂದರೆ ಇರುತ್ತದೆ. ಇನ್ನು ಕೆಲವರಲ್ಲಿ ದೈನಿಕ ಕಾರ್ಯಚಟುವಟಿಕೆಗಳಿಗೆ ಸಮಸ್ಯೆ ಉಂಟುಮಾಡಬಹುದಾದ ಮತ್ತು ಹೆಚ್ಚು ತೀಕ್ಷ್ಣ ಔಷಧ ಬೇಕಾದಂತಹ ಮಧ್ಯಮ ಪ್ರಮಾಣದ ನೋವು ಇರುತ್ತದೆ. ತೀವ್ರ ತರಹದ ಪ್ರಕರಣಗಳಲ್ಲಿ ನೋವು ತೀವ್ರವಾಗಿದ್ದು, ಕಂಗಾಲಾಗಿಸಿಬಿಡುತ್ತದೆ; ಇತರ ಲಕ್ಷಣಗಳಾದ ಹೊಟ್ಟೆ ತೊಳೆಸುವಿಕೆ, ತಲೆನೋವು ಕೂಡ ಇದ್ದು, ಜೀವನ ಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಗರ್ಭಕೋಶವು ಸಂಕುಚನಗೊಳ್ಳುವುದಕ್ಕೆ ಕಾರಣವಾಗುವ ಪ್ರೊಸ್ಟಾಗ್ಲಾಂಡಿನ್‌ ಬಿಡುಗಡೆಯಂತಹ ಅಂಶಗಳಿಂದ ತಲೆದೋರುವ ಡಿಸ್ಮನೋರಿಯಾವು ಹದಿಹರಯದ ಬಾಲಕಿಯರಲ್ಲಿ ಉಂಟಾಗುವುದು ಸಾಮಾನ್ಯವಾಗಿದೆ. ಇಂತಹ ಜೀವಶಾಸ್ತ್ರೀಯ ಅಂಶಗಳು ಋತುಚಕ್ರ ಅವಧಿಯ ನೋವು ಸಹಿತ ಸೆಳೆತಕ್ಕೆ ಕಾರಣವಾಗುವುದು ಹೌದಾದರೂ ಅದು ಹದಿಹರಯದ ಬಾಲಕಿಯ ಜೀವನದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರುತ್ತದೆ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಒಂದು ಗಂಭೀರ ಹೊರೆಯಾಗಿದೆ.

Advertisement

ಶಾಲೆ-ಕಾಲೇಜಿಗೆ ಗೈರು ಹಾಜರಾತಿಯಿಂದಾಗಿ ಕಲಿಕೆಯಲ್ಲಿ ಹಿಂದುಳಿಯುವಿಕೆ, ಜೀವನ ಗುಣಮಟ್ಟ, ದೈನಿಕ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ ಕಡಿಮೆಯಾಗುವುದು ಮತ್ತು ಭಾವನಾತ್ಮಕ ಒತ್ತಡದಂತಹ ಪ್ರತಿಕೂಲ ಪರಿಣಾಮಗಳು ಉಂಟಾಗಬಹುದಾಗಿದೆ. ಆದ್ದರಿಂದ ಪ್ರೈಮರಿ ಡಿಸ್ಮನೋರಿಯಾದ ಲಕ್ಷಣಗಳು, ನಿರ್ವಹಣ ಕಾರ್ಯತಂತ್ರಗಳನ್ನು ಅರ್ಥ ಮಾಡಿಕೊಳ್ಳುವುದು ನೋವು ಮತ್ತು ತೊಂದರೆಯನ್ನು ಉಪಶಮನ ಮಾಡಿಕೊಳ್ಳಲು ಹಾಗೂ ಒಟ್ಟು ಕ್ಷೇಮ, ದೈನಿಕ ಕಾರ್ಯಚಟುವಟಿಕೆಗಳನ್ನು ಉತ್ತಮಪಡಿಸಿಕೊಳ್ಳಲು ನಿರ್ಣಾಯಕವಾಗಿವೆ.

ಪ್ರೈಮರಿ ಡಿಸ್ಮನೋರಿಯಾದ ನಿರ್ವಹಣೆಯು ಜೀವನಶೈಲಿ ಬದಲಾವಣೆಗಳು, ವೈದ್ಯಕೀಯ ಚಿಕಿತ್ಸೆ ಮತ್ತು ಪರ್ಯಾಯ ಚಿಕಿತ್ಸೆಗಳ ಪರಿಣಾಮಕಾರಿ ಸಂಯೋಜನೆಯನ್ನು ಒಳಗೊಂಡಿರುತ್ತದೆ. ಚಿಕಿತ್ಸೆಯು ಗುರಿಯು ನೋವನ್ನು ಕಡಿಮೆ ಮಾಡುವುದು, ಜೀವನ ಗುಣಮಟ್ಟವನ್ನು ಹೆಚ್ಚಿಸುವುದು ಹಾಗೂ ಹದಿಹರಯದ ಬಾಲಕಿಯರು ತಮ್ಮ ದೈನಿಕ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡುವುದು ಮತ್ತು ಒಟ್ಟಾರೆ ಕ್ಷೇಮ ಸಾಧಿಸುವುದು ಆಗಿರುತ್ತದೆ. ಹದಿಹರಯದ ಬಾಲಕಿಯರು ಋತುಸ್ರಾವ ಅವಧಿಯ ನೋವು ನಿವಾರಣೆಗಾಗಿ ತಾವೇ ಔಷಧ ಅಂಗಡಿಗಳಲ್ಲಿ ಸಿಗುವ ನೋವು ನಿವಾರಕಗಳನ್ನು ಖರೀದಿಸಿ ಸೇವಿಸುವಂತಹ ಸ್ವಯಂ ವೈದ್ಯಕ್ಕೆ ಮುಂದಾಗುವುದು ಕೂಡ ಅನೇಕ ಅಧ್ಯಯನಗಳಲ್ಲಿ ಕಂಡುಬಂದಿದೆ.

ಆದರೆ ಇಂತಹ ಕ್ರಮಗಳಿಂದ ತಾತ್ಕಾಲಿಕ ಪರಿಹಾರವಷ್ಟೇ ಸಾಧ್ಯ; ಮಾತ್ರವಲ್ಲದೆ ಇಂತಹ ಔಷಧಗಳ ದೀರ್ಘ‌ಕಾಲೀನ ಬಳಕೆಯಿಂದ ದೇಹದ ಮೇಲೆ ಅಪಾಯಕಾರಿ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ, ಡಿಸ್ಮನೋರಿಯಾವು ನೋವು ಮಾತ್ರ ಅಲ್ಲದೆ ಇನ್ನೂ ಹಲವು ಇತರ ಲಕ್ಷಣಗಳನ್ನು ಕೂಡ ಹೊಂದಿರುತ್ತದೆ. ಈ ಆರೋಗ್ಯ ಸಮಸ್ಯೆಯ ಗಮನಾರ್ಹ ತೀವ್ರತೆ ಮತ್ತು ವ್ಯಾಪಕತೆಯನ್ನು ಪರಿಗಣಿಸಿ ಶಿಕ್ಷಣ ರಂಗ ಮತ್ತು ಸರಕಾರಗಳೆರಡೂ ಈ ಸವಾಲನ್ನು ಎದುರಿಸುತ್ತಿರುವ ಹದಿಹರಯದ ಬಾಲಕಿಯರಿಗೆ ನೆರವು ನೀಡುವಂತಹ ವಿವಿಧ ಕ್ರಮಗಳನ್ನು ಕೈಗೆತ್ತಿಕೊಳ್ಳುವ ಚಿಂತನೆಯನ್ನು ಹೊಂದಿವೆ. ಆದ್ದರಿಂದಲೇ ಹದಿಹರಯದವರ ಆರೋಗ್ಯವನ್ನು ಉತ್ತಮಪಡಿಸುವುದಕ್ಕಾಗಿ ಯೋಗದಂತಹ ಸಮಗ್ರ ಆರೋಗ್ಯ ಕ್ರಮವನ್ನು ಅನುಸರಿಸುವ ಅಗತ್ಯ ಇದೆ.

ಪ್ರೈಮರಿ ಡಿಸ್ಮನೋರಿಯಾ ನಿರ್ವಹಣೆಗೆ ಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸೆಗಳ ಮೊರೆ ಹೋಗುವುದಕ್ಕೆ ಹೋಲಿಸಿದರೆ ಪರ್ಯಾಯ ಚಿಕಿತ್ಸಾ ಪದ್ಧತಿಗಳನ್ನು ಅನುಸರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಯೋಗ ಇಂತಹ ಒಂದು ಪರ್ಯಾಯ ಚಿಕಿತ್ಸಾ ಪದ್ಧತಿಯಾಗಿದ್ದು, ಪ್ರೈಮರಿ ಡಿಸ್ಮನೋರಿಯಾ ನಿರ್ವಹಣೆಗೆ ಸಾಂಪ್ರದಾಯಿಕ ಚಿಕಿತ್ಸಾ ಕ್ರಮಕ್ಕಿಂತ ಯೋಗ ಪದ್ಧತಿಯನ್ನು ಅನುಸರಿಸಿದರೆ ಹಲವಾರು ಪ್ರಯೋಜನಗಳಿವೆ.

ಈ ಪುರಾತನ ಆರೋಗ್ಯಾಭ್ಯಾಸವು ಋತುಸ್ರಾವ ಅವಧಿಯ ನೋವು ಒಳಗೊಂಡಿರುವ ದೈಹಿಕ ಮತ್ತು ಮಾನಸಿಕ ಆಯಾಮಗಳೆರಡನ್ನೂ ನಿಭಾಯಿಸುತ್ತದೆ. ಆದರೆ ಸಾಂಪ್ರದಾಯಿಕ ಚಿಕಿತ್ಸಾ ಕ್ರಮದಲ್ಲಿ ಋತುಸ್ರಾವ ಅವಧಿಯ ನೋವು ಸಹಿತ ಸೆಳೆತಕ್ಕೆ ಕಾರಣವಾಗುವ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುವುದಕ್ಕಾಗಿ ಹಾರ್ಮೋನ್‌ ಚಿಕಿತ್ಸೆಗಳನ್ನು ಮತ್ತು ಸ್ಟಿರಾಯ್ಡೆತರ ಉರಿಯೂತ ನಿವಾರಕ ಔಷಧಗಳನ್ನು ಪ್ರಯೋಗಿಸಲಾಗುತ್ತಿದ್ದು, ಇದರಿಂದ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿವೆ. ಯೋಗಾಭ್ಯಾಸದಿಂದ ಈ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.

ಯೋಗಾಭ್ಯಾಸವು ರಕ್ತ ಪರಿಚಲನೆಯನ್ನು ಉತ್ತಮಪಡಿಸುತ್ತದೆ, ಸ್ನಾಯು ಬಿಗಿತವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಕ್ಷೇಮವನ್ನು ಸಾಧಿಸುತ್ತದೆ. ಇಷ್ಟಲ್ಲದೆ ಹೊಟ್ಟೆಯ ನೋವು ಸಹಿತ ಸೆಳೆತಗಳನ್ನು ಕಡಿಮೆ ಮಾಡುವುದಕ್ಕಾಗಿಯೇ ನಿರ್ದಿಷ್ಟ ಆಸನಗಳನ್ನು ಅಭ್ಯಾಸ ಮಾಡುವುದಕ್ಕೆ ಸಾಧ್ಯವಿದೆ. ಇದಲ್ಲದೆ ಯೋಗಾಭ್ಯಾಸದ ಜತೆಗೆ ಆಳವಾದ ಉಸಿರಾಟ ಮತ್ತು ಮನಸ್ಸಂತೃಪ್ತಿ ಹೊಂದುವುದಕ್ಕೆ ಸಾಧ್ಯವಿದ್ದು, ಇದು ಋತುಸ್ರಾವ ಅವಧಿಯ ನೋವನ್ನು ಇನ್ನಷ್ಟು ತೀವ್ರಗೊಳಿಸಬಹುದಾದ ಒತ್ತಡ ಮತ್ತು ಆತಂಕಗಳನ್ನು ಕಡಿಮೆ ಮಾಡುತ್ತದೆ.

ಈ ಸಮಗ್ರ ಕಾರ್ಯತಂತ್ರದ ಅನುಸರಣೆಯ ಮೂಲಕ ಡಿಸ್ಮನೋರಿಯಾದಿಂದ ಉಪಶಮನ ಸಾಧ್ಯವಾಗುವುದು ಮಾತ್ರವಲ್ಲದೆ, ಒಟ್ಟಾರೆ ಆರೋಗ್ಯ ಚೆನ್ನಾಗಿರುತ್ತದೆ. ಹೀಗಾಗಿ ಇದು ತಮ್ಮ ಋತುಸ್ರಾವ ಅವಧಿಯ ನೋವು ಸಹಿತ ಸೆಳೆತಕ್ಕೆ ಪರಿಹಾರ ಕಂಡುಕೊಳ್ಳಲು ಬಯಸುವ ಹದಿಹರಯದ ಬಾಲಕಿಯರಿಗೆ ಯೋಗಾಭ್ಯಾಸವು ಸುಸ್ಥಿರ ಮತ್ತು ಸಶಕ್ತ ಆಯ್ಕೆಯಾಗಿದೆ. ಋತುಸ್ರಾವ ಅವಧಿಯ ನೋವನ್ನು ಉಪಶಮನಗೊಳಿಸುವುದಕ್ಕೆ ನೆರವಾಗಬಲ್ಲ ಆಯ್ದ ಯೋಗಾಸನಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ. ಋತುಸ್ರಾವದ ಅವಧಿಯಲ್ಲಿ ತೊಂದರೆ ಮತ್ತು ಸೆಳೆತವನ್ನು ಕಡಿಮೆಗೊಳಿಸಲು ಮತ್ತು ಒಟ್ಟಾರೆ ಸೌಖ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಗಾಸನಗಳನ್ನು ಆರಿಸಲಾಗಿದೆ.

ಈ ಸರಳ ಮತ್ತು ಪರಿಣಾಮಕಾರಿ ಯೋಗಾಸನಗಳ ಅಭ್ಯಾಸವನ್ನು ಹದಿಹರಯದವರು ತಮ್ಮ ದೈನಿಕ ಚಟುವಟಿಕೆಗಳ ಭಾಗವಾಗಿ ರೂಢಿಸಿಕೊಂಡರೆ ಋತುಸ್ರಾವ ಅವಧಿಯ ತೊಂದರೆದಾಯಕ ಲಕ್ಷಣಗಳನ್ನು ನಿಭಾಯಿಸಲು ಪರಿಣಾಮಕಾರಿ ನೈಸರ್ಗಿಕ ಪರಿಹಾರವಾಗಬಲ್ಲವು. ಇದರಿಂದ ಪ್ರತೀ ತಿಂಗಳು ಕೂಡ ಹೆಚ್ಚು ಹಿತಕಾರಿ ಮತ್ತು ಸಮತೋಲಿತ ಅನುಭವ ಒದಗಬಲ್ಲುದಾಗಿದೆ.

ಇದೇ ವೇಳೆ ಈ ಯೋಗಾಸನ ಅಭ್ಯಾಸವನ್ನು ಕ್ಷಿಪ್ರ ಪರಿಹಾರದ ತಂತ್ರಗಳು ಎಂದು ಭಾವಿಸದೆ ದೀರ್ಘ‌ಕಾಲೀನ ಮಾನಸಿಕ ಮತ್ತು ದೈಹಿಕ ಕ್ಷೇಮಕ್ಕಾಗಿ ಸದಾ ಮುಂದುವರಿಸಬೇಕು ಎಂಬುದನ್ನು ಎಲ್ಲರೂ ನೆನಪಿನಲ್ಲಿ ಇರಿಸಿಕೊಳ್ಳಬೇಕು. ಆದ್ದರಿಂದ ಈ ಯೋಗಾಸನಗಳ ಅಭ್ಯಾಸಕ್ಕೆ ಸಹನೆ, ಬದ್ಧತೆ ಮತ್ತು ಇದನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡು ಸದಾ ಅಭ್ಯಸಿಸುವ ನಿರಂತರತೆ ಅಗತ್ಯವಾಗಿರುತ್ತದೆ. ಯೋಗಾಭ್ಯಾಸದ ಪ್ರಯೋಜನಗಳು ಸಾಮಾನ್ಯವಾಗಿ ಕನಿಷ್ಠ ಮೂರು ತಿಂಗಳು ಸಾಧನೆಯ ಬಳಿಕ ಅನುಭವಕ್ಕೆ ಬರುತ್ತವೆ ಮತ್ತು ಸತತ ಅಭ್ಯಾಸದ ಬಳಿಕ ದೀರ್ಘ‌ಕಾಲ ಜತೆಯಲ್ಲಿರುತ್ತವೆ.

ಯಾವುದೇ ಯೋಗ ಕ್ರಮದಲ್ಲಿ ಡಿಸ್ಮನೋರಿಯಕ್ಕೆ ಯೋಗ ಪರಿಹಾರವು ಪ್ರಾರ್ಥನೆಯೊಂದಿಗೆ ಆರಂಭವಾಗುತ್ತದೆ. ಇದಾದ ಬಳಿಕ ದೇಹವನ್ನು ಸಡಿಲಗೊಳಿಸುವ ಕುತ್ತಿಗೆ ಚಲನೆಗಳು, ಭುಜದ ಚಲನೆಗಳು, ಮೊಣಕಾಲು ಚಲನೆಗಳು, ಮಣಿಕಟ್ಟು ಚಲನೆಗಳು ಹಾಗೂ ಸರ್ವಾಂಗ ಪುಷ್ಟಿಯನ್ನು ಐದರಿಂದ ಆರು ನಿಮಿಷಗಳ ವರೆಗೆ ನಡೆಸಬೇಕು.

ಇದಾದ ಬಳಿಕ ಸೂರ್ಯನಮಸ್ಕಾರವನ್ನು ನಾಲ್ಕು ನಿಮಿಷ ನಡೆಸಬೇಕು. ನಿಲ್ಲುವ ಆಸನಗಳು (ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ತ್ರಿಕೋನಾಸನ) ಕುಳಿತುಕೊಂಡು ಮಾಡುವ ಆಸನಗಳು (ಪದ್ಮಾಸನ, ವಜ್ರಾಸನ, ಭದ್ರಾಸನ, ಉಷ್ಟ್ರಾಸನ, ಶಶಾಂಕಾಸನ, ಅರ್ಧ ಮತ್ಸೆéàಂದ್ರಾಸನ, ಗೋಮುಖಾಸನ), ಮುಖ ಕೆಳಗೆ ಮಾಡಿ ಮಲಗಿ ಮಾಡುವ ಆಸನಗಳು (ಮಕರಾಸನ, ಭುಜಂಗಾಸನ, ಶಲಭಾಸನ) ಮತ್ತು ಮೇಲ್ಮುಖವಾಗಿ ಮಲಗಿ ಮಾಡುವ ಆಸನಗಳು (ಉತ್ಥಾನಪಾದಾಸನ, ಅರ್ಧ ಹಲಾಸನ, ಸೇತುಬಂಧಾಸನ, ಸರ್ವಾಂಗಾಸನ, ಮತ್ಸಾéಸನ, ಶವಾಸನ) ಇವು ನಿರ್ದಿಷ್ಟ ಆಸನಗಳಾಗಿದ್ದು, 18ರಿಂದ 20 ನಿಮಿಷಗಳ ಕಾಲ ನಡೆಸಬೇಕು.

ಯೋಗಾಸನ ಅವಧಿಯು 10-12 ನಿಮಿಷಗಳ ಕಪಾಲಭಾತಿ, ಪ್ರಾಣಾಯಾಮ ಮತ್ತು ಧ್ಯಾನದೊಂದಿಗೆ ಕೊನೆಗೊಳ್ಳುತ್ತದೆ. ಈ ಎಲ್ಲ ಯೋಗಾಸನಗಳ ಅಭ್ಯಾಸವನ್ನು ನಿಧಾನವಾಗಿ ನಡೆಸಬೇಕಾಗಿದ್ದು, ತಜ್ಞರ ಮಾರ್ಗದರ್ಶನ ಅಗತ್ಯವಾಗಿರುತ್ತದೆ. ಈ ಎಲ್ಲವನ್ನೂ ಒಂದೇ ಬಾರಿಗೆ ಆರಂಭಿಸಬಾರದು ಎನ್ನುವುದನ್ನು ಕೂಡ ಗಮನದಲ್ಲಿ ಇರಿಸಿಕೊಳ್ಳಬೇಕು.

ಯೋಗವು ಸಿಂಪಾಥೆಟಿಕ್‌ ಚಟುವಟಿಕೆಯನ್ನು ಕಡಿಮೆಗೊಳಿಸಿ ಪ್ಯಾರಾಸಿಂಪೆ ಥೆಟಿಕ್‌ ಚಟುವಟಿಕೆಯನ್ನು ಹೆಚ್ಚಿಸುವುದರ ಜತೆಗೆ ವ್ಯಕ್ತಿಯ ಜೀವನ ಗುಣಮಟ್ಟವನ್ನು ವೃದ್ಧಿಸುವ ಮೂಲಕ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಋತುಸ್ರಾವದ ಅವಧಿಯಲ್ಲಿ ಉರಿಯೂತ ಮತ್ತು ನೋವಿಗೆ ಕಾರಣವಾಗುವ ಸಂಯಕ್ತಗಳಾಗಿರುವ ಪ್ರೊಸ್ಟಾಗ್ಲಾಂಡಿನ್‌ಗಳ ಉತ್ಪಾದನೆಯನ್ನು ಕಡಿಮೆಗೊಳಿಸುವ ಮೂಲಕ ಡಿಸ್ಮನೋರಿಯಾವನ್ನು ಕಡಿಮೆಗೊಳಿಸಲು ಯೋಗ ಸಹಾಯ ಮಾಡಬಹುದಾಗಿದೆ.

ಅಂತಿಮವಾಗಿ ಹೇಳುವುದಾದರೆ, ಋತುಸ್ರಾವ ಅವಧಿಯ ದೈಹಿಕ ನೋವಿನಿಂದ ಉಪಶಮನ ಮತ್ತು ವಿಶ್ರಾಮಕ ತಂತ್ರಗಳಿಂದ ಭಾವನಾತ್ಮಕ ನೆರವನ್ನು ಒದಗಿಸುವ ಮೂಲಕ ಯೋಗವು ಡಿಸ್ಮನೋರಿಯಾ ನಿರ್ವಹಣೆಗೆ ಸಮಗ್ರ ಮತ್ತು ಸೂಕ್ಷ್ಮವಾದ ಕಾರ್ಯವಿಧಾನವಾಗಿದೆ. ಈ ಯೋಗಾಸನಗಳನ್ನು ನಿಯಮಿತ ಅಭ್ಯಾಸವಾಗಿ ರೂಢಿಸಿಕೊಳ್ಳುವ ಮೂಲಕ ಯುವತಿಯರು ತಮ್ಮ ಋತುಚಕ್ರ ಆರೋಗ್ಯವನ್ನು ಹೆಚ್ಚು ಚೆನ್ನಾಗಿ ನಿಭಾಯಿಸಬಹುದು ಮಾತ್ರವಲ್ಲದೆ ನೈಸರ್ಗಿಕವಾಗಿ ಒಟ್ಟು ಆರೋಗ್ಯವನ್ನು ಉತ್ತಮ ಮಟ್ಟದಲ್ಲಿ ಕಾಪಾಡಿಕೊಳ್ಳಬಹುದು. ಯೋಗಾಭ್ಯಾಸವನ್ನು ಪ್ರತ್ಯೇಕವಾಗಿ ಅಥವಾ ಇತರ ಚಿಕಿತ್ಸಾ ವಿಧಾನಗಳ ಜತೆಗೆ ಸಂಯೋಜಿತವಾಗಿ ಅನುಸರಿಸಿದರೂ ಋತುಸ್ರಾವದ ಅವಧಿಯಲ್ಲಿ ಹಿತಾನುಭವವನ್ನು ಕಾಪಾಡಿಕೊಳ್ಳಲು ಯೋಗವು ಅದ್ಭುತವಾಗಿ ಸಹಾಯ ಮಾಡುತ್ತದೆ.

ಡಾ| ಶಾಲಿನಿ ಗಣೇಶ್‌ ನಾಯಕ್‌

ಅಸಿಸ್ಟೆಂಟ್‌ ಪ್ರೊಫೆಸರ್‌

-ಡಾ| ಲಕ್ಷ್ಮೀ ಆರ್‌.

ಜೂನಿಯರ್‌ ರಿಸರ್ಚ್‌ ಫೆಲೊ

ಮಣಿಪಾಲ್‌ ಕಾಲೇಜ್‌ ಆಫ್ ನರ್ಸಿಂಗ್‌,

ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ಮತ್ತು ಯೋಗ ಚಿಕಿತ್ಸಾ ವಿಭಾಗ, ಕೆಎಂಸಿ, ಮಂಗಳೂರು)

 

Advertisement

Udayavani is now on Telegram. Click here to join our channel and stay updated with the latest news.

Next