ವಾಷಿಂಗ್ಟನ್/ಹೊಸದಿಲ್ಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೂ. 16ರಂದು ಅಮೆರಿಕದ ಐತಿಹಾಸಿಕ ವಾಷಿಂಗ್ಟನ್ ಸ್ಮಾರಕವು ಹೊಸ ದಾಖಲೆಯೊಂದಕ್ಕೆ ಸಾಕ್ಷಿಯಾಗಲಿದೆ. 2,500ಕ್ಕೂ ಹೆಚ್ಚು ಮಂದಿ ಈ ಪ್ರದೇಶದಲ್ಲಿ ಸೇರಿ, ಧ್ಯಾನ ಹಾಗೂ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮೂರನೇ ಬಾರಿಗೆ ವಾಷಿಂಗ್ಟನ್ ಮಾನ್ಯುಮೆಂಟ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈಗಾಗಲೇ 2,500 ಮಂದಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ. ಇದು ಅಮೆರಿಕದಲ್ಲಿ ಅತಿದೊಡ್ಡ ಯೋಗ ಕಾರ್ಯಕ್ರಮ ಎಂಬ ಖ್ಯಾತಿಗೆ ಪಾತ್ರವಾಗಲಿದೆ ಎಂದು ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಹರ್ಷವರ್ಧನ್ ಶ್ರಿಂಗ್ಲಾ ತಿಳಿಸಿದ್ದಾರೆ.
20ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭಾರತೀಯ ರಾಯಭಾರ ಕಚೇರಿಯೇ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಯೋಗ ಕಾರ್ಯಕ್ರಮ ಮುಗಿದೊಡನೆ, ಮಹಾತ್ಮಾ ಗಾಂಧಿಯವರ 150ನೇ ಜನ್ಮ ದಿನದ ಅಂಗವಾಗಿ ಸಸ್ಯಾಹಾರಿ ಆಹಾರ ಮೇಳವನ್ನೂ ಏರ್ಪಡಿಸಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.
ಪಠ್ಯದಲ್ಲಿ ಯೋಗ: ಪ್ರಸ್ತಾಪ ಸಲ್ಲಿಕೆ
ಮುಂದಿನ ಶೈಕ್ಷಣಿಕ ವರ್ಷದಿಂದ ಯೋಗವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸುವಂಥ ಪ್ರಸ್ತಾವ ವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಕಳುಹಿಸಿದ್ದೇವೆ ಎಂದು ಆಯುಷ್ ಸಚಿವ ಶ್ರೀಪಾದ್ ನಾಯ್ಕ ಸೋಮವಾರ ತಿಳಿಸಿದ್ದಾರೆ.
ಶಾಲೆ ಹಾಗೂ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣದ ಪಠ್ಯದಲ್ಲಿ ಯೋಗವನ್ನು ಕಡ್ಡಾಯ ವಿಷಯ ವನ್ನಾಗಿ ಸೇರ್ಪಡೆಗೊಳಿಸುವ ಪ್ರಸ್ತಾಪ ಇದರಲ್ಲಿದೆ ಎಂದಿದ್ದಾರೆ.