Advertisement
ಬೆಂಗಳೂರು: ಒಂದೆಡೆ ಸೂರ್ಯೋದಯ, ಇನ್ನೊಂದೆಡೆ ಜಾತಿ, ಧರ್ಮ, ವಯಸ್ಸಿನ ಭೇದವಿಲ್ಲದೆ ಆ ಸೂರ್ಯನಿಗೆ ನಮಸ್ಕರಿಸಿದ ಸಾವಿರಾರು ಮಂದಿ. ಬಳಿಕ ಯೋಗದ ವಿವಿಧ ಆಸನಗಳ ಪ್ರದರ್ಶನ, ಪ್ರಾಣಾಯಾಮ, ಧ್ಯಾನ… ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ಸಾಮೂಹಿಕ ಯೋಗ ಪ್ರದರ್ಶನದ ವೇಳೆ ಕಂಡು ಬಂದ ದೃಶ್ಯಗಳಿವು.
Related Articles
Advertisement
ಈ ವೇಳೆ ತಾಡಾಸನ, ವೃಕ್ಷಾಸನ, ಅರ್ಧಚಕ್ರಾಸನ, ತ್ರಿಕೋನಾಸನ, ವಜ್ರಾಸನ, ಸುಖಾಸನ, ಮಕರಾಸನ, ಭುಜಂಗಾಸನ, ಪವನಮುಕ್ತಾಸನ, ಕಪಾಲಬಾತಿ, ನಾಡಿಶೋಧ ಸೇರಿ ಯೋಗದ ವಿಭಿನ್ನ ಕ್ರಿಯೆಗಳನ್ನು ಮಾಡಲಾಯಿತು. ಅಂತಿಮವಾಗಿ ಬೆಳಿಗ್ಗೆ 7.40ಕ್ಕೆ ಶ್ರೀ ಪ್ರಕಾಶ್ ಗುರೂಜಿಯಿಂದ ಶಾಂತಿ ಮಂತ್ರ ಮತ್ತು ಸಂಕಲ್ಪ ಹಾಗೂ 7.50ಕ್ಕೆ ಶ್ರೀ ಯೋಗರವರಿಂದ ಪ್ರಜ್ಞಾ ಯೋಗ ನೆರವೇರಿತು.
ವಿಶ್ವದ ಹಿರಿಯ ವ್ಯಕ್ತಿಯಿಂದ ಯೋಗ: ಜಗತ್ತಿನ ಹಿರಿಯ ವ್ಯಕ್ತಿ ಮತ್ತು ಯೋಗ ಸಾಧಕ, 123 ವರ್ಷದ ಸ್ವಾಮಿ ಶಿವಾನಂದ ಅವರು ಈ ಬಾರಿ ಪ್ರದರ್ಶನದ ಕೇಂದ್ರ ಬಿಂದುವಾಗಿದ್ದರು. ಮೂಲತಃ ಪಶ್ಚಿಮ ಬಂಗಾಳದ ಸ್ವಾಮಿ ಶಿವಾನಂದರು, ಇಂದಿಗೂ ಅದ್ಭುತವಾಗಿ ಯೋಗಾಸನ ಮಾಡುತ್ತಾರೆ. ಸಭಾ ಕಾರ್ಯಕ್ರಮದ ನಂತರ ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿದರು. “ಸಮತೋಲನ ಆಹಾರ ಮತ್ತು ಯೋಗ ಒಳಗೊಂಡ ಜೀವನಶೈಲಿ ಆರೋಗ್ಯದ ಗುಟ್ಟು’ ಎಂದು ಅವರು ತಿಳಿಸಿದರು.
ಭಾಗವಹಿಸಿದ್ದ ಸಾಧಕರು: ಸಾಮೂಹಿಕ ಯೋಗ ಪ್ರದರ್ಶನಲ್ಲಿ ಶ್ವಾಸ ಸಂಸ್ಥೆಯ ವಚನಾನಂದ ಗುರುಜೀ, ಪತಂಜಲಿ ಯೋಗ ಟ್ರಸ್ಟ್‌ನ ಪ್ರಕಾಶ್ ಗುರುಜೀ, ಯೋಗ ಗಂಗೋತ್ರಿಯ ಎನ್.ಆರಾಧ್ಯ, ಅರ್ಜಂಟೈನಾದ ಏಕಾರಾ ದೇವಿನಾಥ, ಬಾಗಲಕೋಟೆ ಜಿಲ್ಲೆಯ ಶಿರೂರಿನ “ವಿಜಯ ಮಹಾಂತ ತೀರ್ಥ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರ’ದ ಡಾ.ಬಸವಲಿಂಗ ಸ್ವಾಮೀಜಿ, ಸ್ವಾಮಿ ಪ್ರಣವಾನಂದ ಬ್ರಹ್ಮೇಂದ್ರ ಅವಧೂತರು ಭಾಗವಹಿಸಿದ್ದರು.ಆಕರ್ಷಿಸಿದ ಪೇರ್ ಯೋಗ ಯೋಗ ಗಂಗೋತ್ರಿ ಸಂಸ್ಥೆಯಿಂದ ಈ ಬಾರಿ ವಿಶೇಷವಾಗಿ “ಪೇರ್ ಯೋಗ’ ನಡೆಯಿತು. ಒಬ್ಬ ಜತೆಗಾರರೊಟ್ಟಿಗೆ ಮಾಡುವ ಯೋಗ ಇದಾಗಿದ್ದು, ಸ್ನೇಹಿತರು, ಕುಟುಂಬ ಸದಸ್ಯರು ಜತೆಗೂಡಿ ಮಾಡುತ್ತಾರೆ. ಒಂಟಿಯಾಗಿ ಮಾಡುವ ಯೋಗಕ್ಕಿಂತ ಭಿನ್ನವಾಗಿದ್ದು, ಪ್ರಮುಖವಾಗಿ ತ್ರಿಕೋನಾಸನ, ಅರ್ಧಚಕ್ರಸಾನಗಳನ್ನು ಮಾಡುತ್ತಾರೆ. ವೇದಿಕೆ ಮೇಲೆ 10 ಜೋಡಿಗಳಿಂದ ಪೇರ್ ಯೋಗ ಪ್ರದರ್ಶನ ನಡೆಯಿತು. ಕೇಳದ ಶಾಲಾ ಮಕ್ಕಳ ಕಲರವ: ಈ ಹಿಂದೆಲ್ಲಾ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಶಾಲಾ ಮಕ್ಕಳ ಸಂಖ್ಯೆ ಹೆಚ್ಚಿರುತ್ತಿತ್ತು. ನಗರದ ವಿವಿಧ ಶಾಲೆಗಳ ಸಾವಿರಾರು ಮಕ್ಕಳನ್ನು ಆಯುಷ್ ಇಲಾಖೆಯೇ ಆಹ್ವಾನಿಸಿ ಅವರಿಗೆ ಸಾರಿಗೆ ವ್ಯವಸ್ಥೆ ಮಾಡುತ್ತಿತ್ತು. ಆದರೆ, ಈ ಬಾರಿ ಯೋಗ ದಿನ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳಿಗೆ ಆಹ್ವಾನವಿರಲಿಲ್ಲ. ಹೀಗಾಗಿ, ಮಕ್ಕಳಿಲ್ಲದೇ ಕ್ರೀಡಾಂಗಣ ಬಣಗುಡುತ್ತಿತ್ತು. ಆರೋಗ್ಯ ಸೂತ್ರ ಬಿಡುಗಡೆ: ಈ ವೇಳೆ ಉತ್ತಮ ಆರೋಗ್ಯಕ್ಕಾಗಿ 642211 ಆರೋಗ್ಯ ಸೂತ್ರ ಬಿಡುಗಡೆ ಮಾಡಲಾಯಿತು. ಇದರ ವಿಸ್ತೃತರೂಪ; ಮನುಷ್ಯ ನಿತ್ಯ 6 ಗಂಟೆ ನಿದ್ರೆ, 4 ಲೀ. ನೀರು, 2 ಬಾರಿ ಆಹಾರ ಸೇವನೆ, 2 ಬಾರಿ ಪ್ರಾರ್ಥನೆ, ಒಂದು ಗಂಟೆ ಯೋಗಾಭ್ಯಾಸ, ವಾರಕ್ಕೆ ಒಂದು ದಿನ ಉಪವಾಸ ಮಾಡಬೇಕು ಎಂಬುದಾಗಿದೆ. ಯೋಗ ವ್ಯಾಪಾರಿಕರಣಕ್ಕೆ ತಡೆಯೊಡ್ಡಿ – ಸಚಿವ: ಯೋಗವು ನಮ್ಮ ದೇಶದ ಕೊಡುಗೆಯಾಗಿದೆ. ಆದರೆ, ಕೆಲವು ಸಂಘ ಸಂಸ್ಥೆಗಳು ಯೋಗವನ್ನು ವ್ಯಾಪಾರಿಕರಣಗೊಳಿಸುತ್ತಿದ್ದು, ಅದಕ್ಕೆ ಸ್ವಯಂ ಪ್ರೇರಣೆಯಿಂದ ತಡೆಯೊಡ್ಡಬೇಕಾದ ಅವಶ್ಯತೆ ಇದೆ ಎಂದು ಆರೋಗ್ಯ ಸಚಿವ ಶಿವಾನಂದ ಎಸ್ ಪಾಟೀಲ ಕರೆ ನೀಡಿದರು. ಯೋಗ ಇಂದು ವಿಶ್ವದ ಆರೋಗ್ಯ ಸಾಧನವಾಗಿದ್ದು, ಅದನ್ನು ಜಗತ್ತಿಗೆ ಪರಿಚಯಿಸಿದ ಹೆಮ್ಮೆ ಭಾರತೀಯರದ್ದಾಗಿದೆ. ಬೆಂಗಳೂರಿನ ಎಸ್.ವ್ಯಾಸ ವಿಶ್ವವಿದ್ಯಾಲಯ ಜಗತ್ತಿನ ಪ್ರಥಮ ಯೋಗ ವಿವಿ ಆಗಿದೆ. ಆಯುಷ್ ಇಲಾಖೆಯು ರಾಜ್ಯದ ಮೂರು ಕಡೆ ಸರ್ಕಾರಿ ಪ್ರಕೃತಿ ಯೋಗ ಚಿಕಿತ್ಸಾ ಕೇಂದ್ರ ಆರಂಭಿಸಿದೆ ಎಂದರು. 2011ರಲ್ಲಿ ಭಾರತ ಕ್ರಿಕೆಟ್ ತಂಡ “ವಿಶ್ವಕಪ್’ ಗೆಲ್ಲುವಲ್ಲೂ ಯೋಗದ ಕೊಡುಗೆ ಇತ್ತು. ಈ ಬಾರಿಯೂ ಅದೇ ರೀತಿಯಲ್ಲಿ ಭಾರತ ವಿಶ್ವಕಪ್ ಗೆಲ್ಲಲಿ ಎಂದು ಆಶಿಸುತ್ತೇನೆ. ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಸಂತೃಪ್ತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಕುಸಿತ ಕಾಣುತ್ತಿದೆ. ಈ ನಿಟ್ಟಿನಲ್ಲಿ ಉತ್ಸಾಹ, ನೆಮ್ಮದಿ ಹಾಗೂ ಉತ್ತಮ ಆರೋಗ್ಯಕ್ಕೆ ನಿತ್ಯಯೋಗಾಭ್ಯಾಸ ಅವಶ್ಯಕ ಎಂದರು. ಯೋಗದಿಂದ ಸರ್ವ ರೋಗ ನಿವಾರಣೆಯಾಗಲಿದೆ. ಯೋಗವನ್ನು ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿದರೆ ಆರಂಭದಿಂದಲೇ ಯೋಗ ಮಕ್ಕಳ ಜೀವನದ ಭಾಗವಾಗಲಿದೆ.
-ಶರವಣ, ವಿಧಾನ ಪರಿಷತ್ ಸದಸ್ಯ ಯೋಗ ಭಾರತದಲ್ಲಿ ಹುಟ್ಟಿದರೂ ಇಂದು ಅದರಿಂದ ವಿದೇಶಿಗರು ಹೆಚ್ಚು ಲಾಭ ಪಡೆಯುತ್ತಿದ್ದಾರೆ. ಯುವಜನತೆ ಕಡ್ಡಾಯವಾಗಿ ಯೋಗಾಭ್ಯಾಸ ಮಾಡಿ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು.
-ರಹೀಂ ಖಾನ್, ಯುವಜ ಸಬಲೀಕರಣ ಮತ್ತು ಕ್ರೀಡಾ ಸಚಿವ