ಮೈಸೂರು: ಮೈಸೂರು ಯೋಗ ಒಕ್ಕೂಟದ 17ನೇ ವಾರ್ಷಿಕೋತ್ಸವ ಹಾಗೂ ರಥಸಪ್ತಮಿ ಪ್ರಯುಕ್ತ ನಡೆದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನಗರಿಯ ಅನೇಕ ಯೋಗಾಸಕ್ತರು ಒಂದೇ ವೇದಿಕೆಯಲ್ಲಿ ಯೋಗ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು.
ಅರಮನೆ ಆವರಣದಲ್ಲಿ ಭಾನುವಾರ ನಡೆದ ಯೋಗಾ ಪ್ರದರ್ಶನಕ್ಕೆ ರಾಜವಂಶಸ್ಥೆ ಡಾ.ಪ್ರಮೋದದೇವಿ ಒಡೆಯರ್ ಅವರು ಚಾಲನೆ ನೀಡಿದರು. ಮುಂಜಾನೆಯ ಚಳಿಯನ್ನು ಲೆಕ್ಕಿಸದೆ ನಗರದ ಹಲವು ಕಡೆಗಳಿಂದ ಆಗಮಿಸಿದ್ದ ವಿವಿಧ ವಯೋಮಾನದ ಸಾವಿರಾರು ಯೋಗಾಸಕ್ತರು 108 ಬಾರಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು.
ಯೋಗಾಚಾರ್ಯ ಬಿ.ಪಿ.ಮೂರ್ತಿ, ಟಿ.ಜಲೇಂದ್ರ ಕುಮಾರ್, ನರಸಿಂಹ ಅವರ ಮಾರ್ಗದರ್ಶನದಲ್ಲಿ ಎಲ್ಲರೂ ಸಾಮೂಹಿಕವಾಗಿ ಸೂರ್ಯದೇವನಿಗೆ ನಮಸ್ಕರಿಸಿದರು. ಇದೇ ವೇಳೆ ಅರಮನೆ ಆವರಣದಲ್ಲಿ ಸೂರ್ಯ ಯಜ್ಞ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ, ಬಾರತ ಸ್ವಾಭಿಮಾನ ಟ್ರಸ್ಟ್, ವಿಜಯ ಪೌಂಡೇಷನ್, ವಿವೇಕಾನಂದ ಕೇಂದ್ರ, ಜಿಎಸ್‌ಎಸ್ ಯೋಗಿಕ್ ಪೌಂಡೇಷನ್, ಆಯುಷ್ ಇಲಾಖೆ, ಸರಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ ಸೇರಿದಂತೆ ಹಲವು ಯೋಗ ಸಂಸ್ಥೆಯ 2000ಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರೊ.ಬಾಷ್ಯಂಸ್ವಾಮಿ, ಅರಮನೆ ಮಂಡಳಿ ಸಹಾಯಕ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ, ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಡಾ.ಟಿ.ಸಿ.ಪೂರ್ಣಿಮಾ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಒಕ್ಕೂಟದ ಅಧ್ಯಕ್ಷ ಕಾರ್ಯಾಧ್ಯಕ್ಷ ಡಾ.ಎಸ್.ಚಂದ್ರಶೇಖರ್, ಕಾರ್ಯಾಧ್ಯಕ್ಷ ವೆಂಕಟೇಶ್‌ಯ್ಯ, ಉಪಾಧ್ಯಕ್ಷ ಎಂ.ಎಸ್.ರಮೇಶ್ ಕುಮಾರ್ ಇತರರು ಇದ್ದರು.