Advertisement

ನಿದ್ರಾಹೀನತೆ ಸಮಸ್ಯೆಗೆ ಯೋಗ ಅತ್ಯಂತ ಪ್ರಭಾವಶಾಲಿ ಪರಿಹಾರ

08:26 AM Jun 18, 2023 | Team Udayavani |

ಪವಿತ್ರ ಜ್ಞಾನ ಸಂಪತ್ತನ್ನೊಳಗೊಂಡ ನಮ್ಮ ಭವ್ಯ ಭಾರತ ದೇಶ ಜಗತ್ತಿಗೆ ಗುರುತಿಸುವಂತೆ ಅನೇಕ ಸುಜ್ಞಾನವನ್ನು ನೀಡುತ್ತಾ ಬಂದಿದೆ. ಅಂತಹ ಮಹಾನ್‌ ಜ್ಞಾನಗಳಲ್ಲಿ ಯೋಗವು ಅತ್ಯುನ್ನತವಾಗಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡುವಲ್ಲಿ ಯೋಗದ ಪಾತ್ರ ಸದಾ ಸರಳ ಹಾಗೂ ಅವಿಸ್ಮರಣೀಯ. ಒತ್ತಡ ಜೀವನ ಶೈಲಿಯಿಂದಾಗಿ ಇಂದು ಅನೇಕ ಜನರಲ್ಲಿ ನಿದ್ರಾಹೀನತೆಯ ಸಮಸ್ಯೆ ಹೆಚ್ಚಾಗಿ ಕಾಣಿಸುತ್ತಿದೆ. ಕೆಲಸದ ಹಾಗೂ ವೈಯಕ್ತಿಕ ಒತ್ತಡಗಳ ಮಧ್ಯೆ ಯೋಗ ಅಭ್ಯಾಸ ರೂಢಿಯಿಂದ ಆರೋಗ್ಯದ ಸ್ಥಿಮಿತವನ್ನು ಸಾಧಿಸಬಹುದು.

Advertisement

ನಿದ್ರಾಹೀನತೆಯ ಸಮಸ್ಯೆ ಅನೇಕ ಕಾರಣಗಳಿಂದ ಬರಬಹುದು. ಮುಖ್ಯವಾಗಿ ಮಾನಸಿಕ ಒತ್ತಡ, ದೈಹಿಕ ನೋವುಗಳು, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಕೆಲಸದ ಒತ್ತಡ, ಮಾನಸಿಕ ರೋಗಗಳು ಹೀಗೆ ಹಲವು ಅನೇಕ ಕಾರಣಗಳಿರಬಹುದು. ಮನಸ್ಸನ್ನು ಶಾಂತಗೊಳಿಸುವ ಮೂಲಕ ನಿದ್ರಾಹೀನತೆಯನ್ನು ನಿವಾರಿಸಬಹುದು. ಅತೀ ನಿದ್ದೆಯ ಕೊರತೆ ಮನುಷ್ಯನ ದೈಹಿಕ ಹಾಗೂ ಮಾನಸಿಕ ಸಮತೋಲನವನ್ನು ಕೆಡಿಸುತ್ತದೆ. ನಿತ್ಯ ಯೋಗ ಅಭ್ಯಾಸದ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ನಿದ್ದೆಯ ಸಮಸ್ಯೆಯಿರುವವರು ಪ್ರತೀದಿನ ಧ್ಯಾನ, ಪ್ರಾಣಾಯಾಮಗಳನ್ನು ಬಿಡದೆ ಪಾಲಿಸಿದರೆ ನಿಸ್ಸಂದೇಹ ವಾಗಿ ನಿದ್ರಾಹೀನತೆಯನ್ನು ಗೆಲ್ಲಬಹುದು. ನಿತ್ಯ ಚಟು ವಟಿಕೆಗಳನ್ನು ನಿರ್ವಹಿಸಲು ದೇಹಕ್ಕೆ ವಿಶ್ರಾಂತಿ ಮತ್ತು ನಿದ್ದೆ ಪ್ರಮುಖವಾಗಿದೆ. ಹೀಗಾಗಿ ಜನರು ಒತ್ತಡದ ಮಧ್ಯೆ ಪರಿಪೂರ್ಣ ನಿದ್ದೆ ಸರಿಯಾಗಿ ಮಾಡಬೇಕು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮೂಲಕ ಪ್ರತೀ ವರ್ಷ ಯೋಗದ ಜಾಗೃತಿ ಜಗತ್ತಿನ ಮೂಲೆ ಮೂಲೆಗೂ ಹರಡುತ್ತಿದ್ದು, ಹೀಗೆ ಜನರು ಯೋಗದ ಪಾತ್ರವನ್ನು ಅರಿತು, ನಿತ್ಯ ಜೀವನ ಶೈಲಿಯಲ್ಲಿ ಬಳಸಿ, ಉತ್ತಮ ಸಾಮಾಜಿಕ ಆರೋಗ್ಯವನ್ನು ರೂಪಿಸಬೇಕು.

ನಿದ್ರೆ ಎಂಬುದು ಮಾನವ ಜೀವನದ ಸುಖ- ದುಃಖ, ಬಲ-ದೌರ್ಬಲ್ಯ, ಜ್ಞಾನ-ಅಜ್ಞಾನ, ಹುಟ್ಟು- ಸಾವನ್ನು ನಿರ್ಧರಿಸುತ್ತದೆ. ಮುಂದುವರಿಯುತ್ತಿರುವ ತಂತ್ರಜ್ಞಾನ, ಯಾಂತ್ರಿಕ ಬದುಕು, ಒತ್ತಡವೇ ತುಂಬಿರುವ ದಿನಚರಿ ಇವೆಲ್ಲದುದರಿಂದ ಇಂದಿನ ಕಾಲದ ಜನರಿಗೆ ನಿದ್ರೆ ಎಂಬುದು ಕೈಗೆಟುಕದ ಅಮೃತದಂತೆ ಭಾಸವಾಗುತ್ತಿದೆ.

ಬಿಡುವಿಲ್ಲದ ಕೆಲಸಗಳ ನಡುವೆ, ಸಿಕ್ಕ ಸಮಯದಲ್ಲಿ ವಿಶ್ರಾಂತಿಗಾಗಿ ನಿದ್ರೆಯ ಮೊರೆ ಹೋದರೂ, ಮನಸ್ಸು ನಿದ್ರೆಗೆ ಸ್ಪಂದಿಸುವುದಿಲ್ಲ. ದೇಹ-ಮನಸ್ಸುಗಳಿಗೆ ಹೊಸ ಚೈತನ್ಯ ಒದಗಿಸಲು ನಿದ್ರೆ ಅತ್ಯಂತ ಅಗತ್ಯ. ಯೋಗ ಅಭ್ಯಾಸದ ಮೂಲಕ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಂಡು, ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸಬಹುದು. “ಯೋಗಃ ಚಿತ್ತ ವೃತ್ತಿ ನಿರೋಧಕ’ ಎಂಬ ಮಾತಿನಂತೆ, ಮಾನಸಿಕ ಗೊಂದಲಗಳನ್ನು ದೂರ ಮಾಡಿ, ಮನಃಶಾಂತಿಯನ್ನು ಒದಗಿಸಲು ಯೋಗದಿಂದ ಮಾತ್ರ ಸಾಧ್ಯ. ಮನಸ್ಸಿನ ಹತೋಟಿ ಇದ್ದರೆ ಉತ್ತಮ ಮಟ್ಟದ ನಿದ್ರೆಯನ್ನು ಸಾಧಿಸಬಹುದು.

Advertisement

ನಿದ್ರಾಹೀನತೆ ಆರೋಗ್ಯ ಸಮಸ್ಯೆಗಳಿಂದ ಕಾಣಿಸಿಕೊಳ್ಳುತ್ತದೆ. ಪ್ರತೀ ದಿನ ಆಸನಗಳ ಅಭ್ಯಾಸದಿಂದ ದೇಹದ ಆರೋಗ್ಯವನ್ನು ಕಾಪಾ ಡಿಕೊಳ್ಳಬಹುದು. ಪ್ರಾಣಾಯಾಮದ ಅಭ್ಯಾಸ ದಿಂದ ದೇಹದ ಪ್ರತಿಯೊಂದು ಅಂಗಾಂಗಗಳೂ ಚೈತನ್ಯ ಪೂರ್ಣಗೊಂಡು ಸರಿಯಾದ ರೀತಿಯಲ್ಲಿ ಕೆಲಸ ಮಾಡುವುದರಿಂದ ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸಬಹುದು.

ಯೋಗ ನಿದ್ರಾ ಧ್ಯಾನದ ಅಭ್ಯಾಸದಿಂದ ಮಾನಸಿಕ ಒತ್ತಡ, ಹೃದಯದ ಒತ್ತಡ, ಸ್ನಾಯುಗಳ ಒತ್ತಡವು ದೂರ ವಾಗಿ ಶರೀರಕ್ಕೆ ಸಂಪೂರ್ಣ ವಿಶ್ರಾಂತಿ ದೊರೆಯುತ್ತದೆ.
ಈ ರೀತಿಯ ಯೋಗಾಭ್ಯಾಸದ ಮೂಲಕ, ನೀವು ದೀರ್ಘ‌ಕಾಲದವರೆಗೂ ಸ್ವಾಭಾವಿಕವಾಗಿ ಆರಾಮವಾಗಿ ನಿದ್ರಿಸಬಹುದು. ಇದು ನಿದ್ರಾಹೀನತೆ ಅಥವಾ ಅನಿದ್ರೆಯ ಸಮಸ್ಯೆಯನ್ನು ಪರಿಹರಿಸುವ ಒಂದು ಪ್ರತಿಸಾಧಕ ಮಾರ್ಗವಾಗಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಯೋಗಾಭ್ಯಾಸದ ಮೂಲಕ ಮನಸ್ಸಿನ ಶಾಂತಿಯನ್ನು ಪಡೆಯುವುದು, ಶರೀರದ ಸ್ಥಿರತೆಯನ್ನು ಪಡೆಯುವುದು ಮತ್ತು ಆರಾಮವಾಗಿ ನಿದ್ರಿಸುವುದು ನಿದ್ರಾಹೀನತೆಗೆ ಯೋಗದ ಪ್ರಭಾವಶಾಲಿ ಪರಿಹಾರವಾಗಬಹುದು.

ನಿದ್ರಾಹೀನತೆ ಸಮಸ್ಯೆಗೆ ಕೆಲವೊಂದು ಯೋಗ ಹಾಗೂ ಪ್ರಾಣಾಯಾಮ, ಸರ್ವಾಂಗಾಸನ, ಚಕ್ರಾಸನ, ಪಶ್ಚಿಮೋತ್ಥಾನಾಸನ, ಪವನ ಮುಕ್ತಾಸನ, ಶಲಭಾಸನ, ಭುಜಂಗಾಸನ, ಧನುರಾಸನ, ಉಜ್ಜಾಯೀ ನಾಡೀಶೋಧನ, ಚಂದ್ರಭೇದನ, ಶೀತಲೀ, ಸೀತ್ಕಾರಿ, ಭ್ರಾಮರೀ ಪ್ರಾಣಾಯಾಮಗಳನ್ನು ಕ್ರಮಬದ್ಧ ಹಾಗೂ ನಿರಂತರ ಅಭ್ಯಾಸದಿಂದ ಸ್ನಾಯುಗಳು ಬಲಗೊಳ್ಳುವು ದ ರ ಜತೆಗೆ ಬುದ್ಧಿಶಕ್ತಿ, ಜ್ಞಾನ ಶಕ್ತಿ, ಮನೋಸಂಕಲ್ಪ ಏಕಾಗ್ರತೆ ವೃದ್ಧಿಸುತ್ತದೆ. ಖನ್ನತೆ, ಆತಂಕ, ಒತ್ತಡ ದೂರವಾಗಿ ನರ ಮಂಡಲವನ್ನು ಸಮತೋಲನಗೊಳಿಸುತ್ತದೆ.

ಡಾ| ಐ.ಶಶಿಕಾಂತ್‌ ಜೈನ್‌,ನಿರ್ದೇಶಕರು, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್‌(ರಿ.) ಧರ್ಮಸ್ಥಳ

 

Advertisement

Udayavani is now on Telegram. Click here to join our channel and stay updated with the latest news.

Next