Advertisement

Yoga: ಯೋಗ ಎಂದರೆ ಆಸನಗಳು ಎಂದಷ್ಟೇ ಅಲ್ಲ.. ಇಲ್ಲಿದೆ ಯೋಗ ಕುರಿತಾದ ಸ್ವಾರಸ್ಯಕರ ಸಂಗತಿಗಳು

11:03 PM Jun 20, 2024 | Team Udayavani |

ಯೋಗ ಎಂದರೆ ಆಸನಗಳು ಎಂದಷ್ಟೇ ಅಲ್ಲ ಅದರಾಚೆಗೂ ಯೋಗ ಕುರಿತಾದ ಅನೇಕ ಸ್ವಾರಸ್ಯಕರ ಮತ್ತು ಕುತೂಹಲಕರ ಸಂಗತಿಗಳಿವೆ. ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಆ ಕುರಿತು ಕಿರು ಮಾಹಿತಿ ಇಲ್ಲಿದೆ.

Advertisement

1.6 ಕೋಟಿ ಅಮೆರಿಕನ್ನರಿಂದ ಯೋಗ

ಇಡೀ ಜಗತ್ತಿನಲ್ಲಿ ಭಾರತವನ್ನು ಬಿಟ್ಟರೆ ಅಮೆರಿಕದಲ್ಲಿ ಯೋಗವು ಹೆಚ್ಚು ಪ್ರಸಿದ್ಧಿಯಾಗುತ್ತಿದೆ. ಒಂದು ಅಧ್ಯಯನದ ಪ್ರಕಾರ ಅಮೆರಿಕದ 1.6 ಕೋಟಿ ಜನರು ಯೋಗ ಪದ್ಧತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಇದಕ್ಕಾಗಿ ವರ್ಷಕ್ಕೆ 5.7 ಬಿಲಿಯನ್‌ ಡಾಲರ್‌(47 ಸಾವಿರ ಕೋಟಿ ರೂ.) ವೆಚ್ಚ ಮಾಡುತ್ತಾರೆ.

5000 ವರ್ಷಗಳ ಹಳೆಯದ್ದು!

ಇಂದು ಇಡೀಗ ಜಗತ್ತನ್ನು ಆವರಿಸಿರುವ ಯೋಗ ಇತಿಹಾಸವು 5,000 ವರ್ಷಗಳಷ್ಟು ಹಳೆಯದ್ದಾಗಿದೆ. ಭಾರತದ ಪ್ರಾಚೀನ ಪದ್ಧತಿಯಾದ ಯೋಗ ಒಂದು ಆರೋಗ್ಯಕರ ಜೀವನದ ವಿಧಾನ. ಅಧ್ಯಾತ್ಮದ ಬೆಸುಗೆಯಲ್ಲಿ ಮೂಡಿ ಬಂದಿರುವ ಈ ಪದ್ಧತಿಯ ಮೈ-ಮನಗಳನ್ನು ಉಲ್ಲಾಸಿತಗೊಳಿಸುತ್ತದೆ.

Advertisement

ಕಣ್ಣಿನ ಆರೋಗ್ಯಕ್ಕೂ ಬೇಕು ಯೋಗ

ಕಣ್ಣಿನ ದೋಷ ಹೋಗಲಾಡಿಸಲೂ ಯೋಗದಲ್ಲಿ ಪರಿಹಾರವಿದೆ. ತ್ರಾಟಕ ಎಂಬ ಕ್ರಿಯೆಯನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಕಣ್ಣಿನ ಸ್ನಾಯುಗಳು ಬಲಗೊಳ್ಳುತ್ತವೆ. ನೇತ್ರಗಳು ಶುದ್ಧೀಕರಣಗೊಂಡು ದೃಷ್ಟಿ ದೋಷ ಕಡಿಮೆಯಾಗುತ್ತದೆ. ದೀಪದ ಸಹಾಯದಿಂದ ತ್ರಾಟಕ ಧ್ಯಾನ ಮಾಡಬಹುದು.

ನಿದ್ರೆಗಾಗಿ ಆವರ್ತಕ ಧ್ಯಾನ ಮಾಡಿ

ಮನಸ್ಸು ಹಾಗೂ ದೇಹವನ್ನು ಸಮತೋಲನದಲ್ಲಿ ಇರಿಸಿ ಗುಣಮಟ್ಟದ ನಿದ್ದೆ ಮಾಡಲು ಆವರ್ತಕ ಧ್ಯಾನ(ಸೈಕ್ಲಿಕ್‌ ಮೆಡಿಟೇಶನ್‌) ಸಹಕಾರಿಯಾಗಿದೆ. ಸುಮಾರು 30 ನಿಮಿಷಗಳ ಕಾಲ ಮಾಡುವ ಈ ಆವರ್ತಕ ಧ್ಯಾನವು 8 ಗಂಟೆ ನಿದ್ದೆಗೆ ಸಮವಾಗಿದೆ ಎಂಬುದು ಅಧ್ಯಯನದಲ್ಲಿ ದೃಢಪಟ್ಟಿದೆ. ಒತ್ತಡವನ್ನು ಕಡಿಮೆ ಮಾಡಿ ಏಕಾಗ್ರತೆಯನ್ನು ವೃದ್ಧಿಸಲಿದೆ.

ಯೋಗ ಮಾಡಿದರೆ ವಯಸ್ಸೇ ಆಗಲ್ಲ!

ನಿಯಮವಿತವಾಗಿ ಯೋಗ ಅಭ್ಯಾಸವನ್ನು ಕೈಗೊಳ್ಳುವುದರಿಂದ ಚಿರ ಯೌವ್ವನವನ್ನು ಗಳಿಸಬಹುದು. ಯೋಗದಿಂದ ಸಮಗ್ರ ಆರೋಗ್ಯದ ಲಾಭಗಳು ದೊರೆಯುವುದರಿಂದ ವಯಸ್ಸಾದರೂ ಮುಖ ಕಾಂತಿ ಮತ್ತು ದೇಹದಲ್ಲಿ ಯೌವ್ವನದ ಲಕ್ಷಣಗಳು ಇರುತ್ತವೆ.

ಯೋಗದಲ್ಲಿ ಪಿಎಚ್‌.ಡಿ ಕೂಡ ಮಾಡಬಹುದು!

ಯೋಗದಲ್ಲೂ ಉನ್ನತ ವ್ಯಾಸಂಗ ಮಾಡಿ ಕಾಲೇಜು, ವಿವಿಗಳಲ್ಲಿ ಪ್ರಾಧ್ಯಾಪಕ ಸೇರಿದಂತೆ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಬಹುದು. ಬೆಂಗಳೂರಿನಲ್ಲಿರುವ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವಿಶ್ವವಿದ್ಯಾನಿಲಯ(ಎಸ್‌-ವ್ಯಾಸ)ದಲ್ಲಿ ಬಿಎಸ್ಸಿ, ಎಂಎಸ್ಸಿ, ಪಿಎಚ್‌.ಡಿ ಮಾಡಲು ಅವಕಾಶವಿದೆ. ದೂರ ಶಿಕ್ಷಣದಲ್ಲೂ ಈ ಕೋರ್ಸ್‌ಗಳ ಪ್ರವೇಶಾತಿ ಪಡೆಯಬಹುದು. 100 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಅತ್ಯಾಧುನಿಕ ಕ್ಯಾಂಪಸ್‌ ಇಲ್ಲಿದೆ. ದಕ್ಷಿಣ ಭಾರತದಲ್ಲೇ ಪ್ರಪ್ರಥಮ ಯೋಗ ವಿಶ್ವವಿದ್ಯಾಲಯ ಇದಾಗಿದೆ.

ಕೂದಲು ಬೆಳವಣಿಗೆಗೆ ಯೋಗ

ಪ್ರಸ್ತುತ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರುವುದು, ಬೆಳ್ಳಗಾಗುವುದು ಸಾಮಾನ್ಯವಾಗಿದೆ. ಇದನ್ನು ತಕ್ಕ ಮಟ್ಟಿಗೆ ತಪ್ಪಿಸಲು ಯೋಗದಲ್ಲಿ ಹಲವು ಆಸನಗಳು ಇವೆ. ಕಪಾಲಭಾತಿ, ಸರ್ವಾಂಗಾಸನ, ಮತ್ಸಾéಸನ, ವಜ್ರಾಸನ, ಉಷ್ಟ್ರಾಸನ, ಶೀರ್ಷಾಸನ ಅಭ್ಯಸಿಸುವುದರಿಂದ ತಲೆ ಹಾಗೂ ನೆತ್ತಿಯ ಭಾಗಕ್ಕೆ ಉತ್ತಮ ರಕ್ತ ಸಂಚಾರವಾಗಿ ಹಾರ್ಮೋನ್‌ಗಳ ಸಮತೋಲನ ಉಂಟಾಗಿ ಕೂದಲು ಬೆಳವಣಿಗೆಗೆ ಸಹಾಯವಾಗುತ್ತದೆ.

ನಾಯಿಗಳಿಗೆ “ಡೋಗಾ’!

ಯೋಗ ಕೇವಲ ಮನುಷ್ಯರಿಗಷ್ಟೇ ಅಲ್ಲ ನಾಯಿಗಳಿಗೂ ಉಂಟು. ಹೌದು, ನಾಯಿ ಮತ್ತು ಮಾನವರ ನಡುವಿನ ಸಂಬಂಧವನ್ನು ಮತ್ತಷ್ಟು ಗಾಢವಾಗಿಸುವುದಕ್ಕಾಗಿ ಡೋಗಾ ಯೋಗವನ್ನು ಪರಿಚಯಿಸಲಾಗಿದೆ. ನಾಯಿಗಳಿಗೂ ಯೋಗವನ್ನು ಮಾಡಿಸಲಾಗುತ್ತದೆ. 2002ರಲ್ಲಿ  ಸೂಜಿ ಟೈಟೆಲ್‌ವುನ್‌ ಎಂಬುವರು ಮೊದಲಿಗೆ ಡೋಗಾ ಆರಂಭಿಸಿದರು.

ಯೋಗಕ್ಕೆ ಒಲಿಂಪಿಕ್ಸ್‌ ಕ್ರೀಡೆ ಮಾನ್ಯತೆ

ಯೋಗ ಈಗ ಕೇವಲ ಆರೋಗ್ಯ ಪದ್ಧತಿಯಾಗಿ ಉಳಿದಿಲ್ಲ. ಅದಕ್ಕೆ ಕ್ರೀಡೆ ಸ್ಥಾನವೂ ದಕ್ಕಿದೆ. 2016ರಲ್ಲಿ ಅಮೆರಿಕ ಫೆಡರೇಶನ್‌ನ ಒಲಂಪಿಕ್ಸ್‌ ಸಮಿತಿ ಯೋಗವನ್ನು ಸ್ಪರ್ಧಾತ್ಮಕ ಕ್ರೀಡೆ ಎಂದು ಅನುಮೋದಿಸಿದೆ. ತೀರ್ಪುಗಾರರ ಮುಂದೆ ಸ್ಪರ್ಧಾಳುಗಳು ಒಟ್ಟು 3 ನಿಮಿಷದಲ್ಲಿ  ಐದು ಕಡ್ಡಾಯ ಯೋಗಾಸನಗಳನ್ನು ಪ್ರದರ್ಶಿಬೇಕಾಗುತ್ತದೆ. ಯೋಗಪಟುವಿನ ಫ್ಲೆಕ್ಸಿಬಿಲಿಟಿ, ಸಮತೋಲನ, ಟೈಮಿಂಗ್‌ ಮತ್ತು ಉಸಿರಾಟದ ಕ್ರಮಗಳನ್ನು ಪರಿಗಣಿಸಿ, ಅಂಕ ನೀಡಲಾಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next