ಬೀದರ: ವಿಶ್ವದಲ್ಲಿ ಭಾರತವು ಅತ್ಯಂತ ಶಕ್ತಿಶಾಲಿಯಾಗಿ ಬೆಳೆಯುತ್ತಿದೆ. ಯೋಗ, ಧ್ಯಾನ ಮತ್ತು ಪ್ರಾಣಾಯಾಮದಂತಹ ಅಮೂಲ್ಯ ಕೊಡುಗೆಗಳನ್ನು ವಿಶ್ವಕ್ಕೆ ನೀಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಲಿಂಗಪ್ಪ ತಗಾರೆ ಹೇಳಿದರು.
ಇಲ್ಲಿನ ಶಿವಾಜಿ ನಗರದಲ್ಲಿ ಆಯುಷ್ ಇಲಾಖೆ ನವದೆಹಲಿ, ಕೇಂದ್ರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನ ಕೇಂದ್ರ ನವದೆಹಲಿ, ಕರುಣಾಮಯ ಯುವಕ ಸಂಘ ಬೀದರ ಮತ್ತು ಕರ್ನಾಟಕ ಜಾನಪದ ಪರಿಷತ್ತು ಬೀದರ ಸಂಯುಕ್ತ ಆಶ್ರಯದಲ್ಲಿ ಜೂ.21ರಂದು ನಡೆಯಲಿರುವ ವಿಶ್ವ ಯೋಗ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಉಚಿತ ಯೋಗ ತರಬೇತಿ ಶಿಬಿರದ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗದಿಂದ ಮನುಷ್ಯ ರೋಗಮುಕ್ತನಾಗುತ್ತಾನೆ. ಅಲ್ಲದೆ ಜೀವನದಲ್ಲಿ ಉಲ್ಲಾಸ ಉತ್ಸಾಹ ಇಮ್ಮಡಿಗೊಳ್ಳುತ್ತದೆ. ಒತ್ತಡ ಜೀವನದ ಆಯಾಸ ದೂರ ಮಾಡಿ ಪರಸ್ಪರ ಸೇವಾಭಾವ ಮತ್ತು ರಾಷ್ಟ್ರಪ್ರೇಮದ ಕೆಚ್ಚು ಯೋಗದಿಂದ ಸಿಗುತ್ತದೆ ಎಂದರು.
ಶಿವಕುಮಾರ ಬಾವಗೆ ಮಾತನಾಡಿ, ಯೋಗ ದಿನ ಭಾರತದ ಹೆಮ್ಮೆ. ಇಂತಹ ಶಾಂತಿಪ್ರಿಯ ಭಾರತ ದೇಶದಲ್ಲಿ ಬುದ್ಧ, ಬಸವ, ಅಂಬೇಡ್ಕರ್, ಮೀರಾಬಾಯಿ ಮುಂತಾದವರು ಯೋಗಿಗಳೇ ಆಗಿದ್ದಾರೆ. ಬದುಕು ಮತ್ತು ಬದುಕಲು ಬಿಡು ಎಂಬುದು ಭಾರತದ ಧ್ಯೇಯವಾಕ್ಯವಾಗಿದೆ. ಇಂತಹ ಉನ್ನತ ಆತ್ಮಬಲ ಮನುಷ್ಯನಲ್ಲಿ ಬರಬೇಕಾದರೆ ಅದು ಯೋಗದಿಂದ ಮಾತ್ರ ಸಾಧ್ಯ ಎಂದರು.
ಶಿಬಿರದ ಸಂಯೋಜಕ ಹಾಗೂ ರಾಷ್ಟ್ರೀಯ ಬುಡಕಟ್ಟು ಜನಪದ ಕಲಾ ಪರಿಷತ್ತಿನ ಕಾರ್ಯದರ್ಶಿ ರಾಜಕುಮಾರ ಹೆಬ್ಟಾಳೆ ಮಾತನಾಡಿ, ನಮ್ಮ ನೆಲಮೂಲದ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯವನ್ನು ಕರ್ನಾಟಕ ಜಾನಪದ ಪರಿಷತ್ತು ಸುಮಾರು 18 ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ನಮ್ಮ ದೇಶದ ಭವ್ಯ ಸಂಸ್ಕೃತಿಯಲ್ಲಿ ಯೋಗವೂ ಒಂದು. ಈ ಯೋಗ ತರಬೇತಿ ಶಿಬಿರದಿಂದ ಅನೇಕ ಜನರಿಗೆ ಉಪಯೋಗವಾಗುತ್ತಿದೆ. ಆರೋಗ್ಯವೇ ಭಾಗ್ಯ ಎಂಬಂತೆ ಮನುಷ್ಯ ಆರೋಗ್ಯವಾಗಿದ್ದರೆ ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಯೋಗ ಕುರಿತು ವಿವರಿಸಿದರು.
ಸಿದ್ರಾಮಪ್ಪ ಕನೇರಿ, ಸುಭಾಷ ಗಜರೆ, ವೈಜಿನಾಥ ಚಿಮಕೂರೆ, ಎಸ್.ಬಿ. ಕುಚಬಾಳ, ಲಕ್ಷ್ಮಣರಾವ್ ಕಾಂಚೆ,
ಪ್ರಕಾಶ ಕನ್ನಾಳೆ, ಮಹಾರುದ್ರ ಡಾಕುಳಗಿ, ಸಂಜುಕುಮಾರ ಸ್ವಾಮಿ, ಮೀನಾಕ್ಷಿ ತಗಾರೆ, ರಘುನಾಥರಾವ್ ಪಾಂಚಾಳ, ರಾಜಕುಮಾರ ಹೆಬ್ಟಾಳೆ, ವೈಜಿನಾಥರಾವ್ ದದ್ದಾಪುರ, ಮಂಗಲಾ ಕನ್ನಾಳೆ, ಸುವರ್ಣಾಬಾಯಿ, ಡಾ| ನೀಲಕಂಠ, ಬಿ.ಕೆ. ಚೌಧರಿ, ಸಂತೋಷ ಇಂಜಿನಿಯರ್, ಬಕ್ಕಪ್ಪ ಪಾಪಗೊಂಡ, ಶರಣಪ್ಪ ಕಮಠಾಣೆ, ಸಂಜು ಪಾಟೀಲ, ನಿರಂಕಾರ ಬಂಡಿ, ಚನ್ನಪ್ಪ ಸಂಗೋಳಗಿ ಇದ್ದರು.