ಮಧುಮೇಹಕ್ಕೊಳಗಾದವರಿಗೆ ಸಾಮಾನ್ಯವಾಗಿ ಕಣ್ಣು, ಕಿಡ್ನಿ, ಹೃದಯ, ನರ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಯೋಗವನ್ನು ಸರಿಯಾದ ರೀತಿಯಲ್ಲಿ ಸೂಕ್ತ ಸಮಯಕ್ಕೆ ಮಾಡಿದ್ದೇ ಯಾದರೆ ಈ ಸಮಸ್ಯೆಗಳು ಕಾಸಿಕೊಳ್ಳುವುದು ಅತ್ಯಂತ ಕಡಿಮೆ. ಯೋಗದ ವಿವಿಧ ಆಸನಗಳು, ಪ್ರಾಣಾಯಾಮದಿಂದ ದೇಹದ ಎಲ್ಲ ಭಾಗಗಳಿಗೆ ರಕ್ತಸಂಚಲನೆ ಸಮರ್ಪಕವಾಗುವುದಲ್ಲದೆ, ಇನ್ಸುಲಿನ್ ಉತ್ಪತ್ತಿಗೆ ಸಹಕಾರಿ ಆಗಲಿದೆ. ಕೃತಕವಾಗಿ ಇನ್ಸುಲಿನ್ ಪಡೆದುಕೊಳ್ಳುವುದಕ್ಕಿಂತ ಯೋಗದಿಂದ ದೇಹದೊಳಗೆ ನೈಸರ್ಗಿಕ ವಾಗಿಯೇ ಇನ್ಸುಲಿನ್ ಉತ್ಪತ್ತಿ ಸಾಧ್ಯ ಎಂಬುದು ಕಳೆದ 20 ವರ್ಷಗಳಿಂದ ನಮ್ಮ ಅನುಭವಕ್ಕೂ ಬಂದಿದೆ.
ಯೋಗವನ್ನು ನಿತ್ಯ ಮಾಡುತ್ತ ಬಂದರೆ ಮಧುಮೇಹಿಗಳು ಮಾತ್ರೆಯಲ್ಲಿಯೇ ಸಕ್ಕರೆ ಮಟ್ಟ ನಿಯಂತ್ರಣ ಮಾಡಿಕೊಳ್ಳ ಬಹುದಾಗಿದ್ದು, ಕೃತಕ ಇನ್ಸುಲಿನ್ ಪಡೆದುಕೊಳ್ಳುವ ಆವಶ್ಯಕತೆ ಬರು ವುದಿಲ್ಲ. ಜತೆಗೆ ಮಾತ್ರೆಗಳ ಪ್ರಮಾಣವೂ ಹೆಚ್ಚು ಮಾಡಿಕೊಳ್ಳುವ ಅಗತ್ಯವೂ ಉಂಟಾಗದು. ಮುಖ್ಯವಾಗಿ ಮೊಣಕಾಲು ನೋವು, ಮೊಣಕಾಲು ಚಿಪ್ಪು ಬದಲಾವಣೆಯಂಥ ಸಮಸ್ಯೆಗಳು ದೂರವಾಗಲಿವೆ.
ಮಹಿಳೆಯರು ಕಡ್ಡಾಯವಾಗಿ ಯೋಗ ಮಾಡುವುದು ಒಳಿತು. ಸಹಜವಾಗಿ ಅವರಿಗೆ ಕಾಡುವ ಸ್ಥೂಲಕಾಯಕ್ಕಲ್ಲದೆ, ಹಲವು ಆರೋಗ್ಯ ಸಮಸ್ಯೆಗಳಿಗೆ ಇದು ಮದ್ದು, ಸೌಂದರ್ಯ ವರ್ಧನೆಗೂ ಇದು ಸಹಕಾರಿ. ಪ್ರಾಥಮಿಕ ಶಾಲಾ ಹಂತದಿಂದ ಹಿಡಿದು ಕಾಲೇಜು ಹಂತದವರೆಗೆ ಯೋಗ ಕಡ್ಡಾಯ ಮಾಡಿದರೆ ಮುಂದೆ ಎಂದೂ ಅವರು ಯೋಗದಿಂದ ದೂರ ಸರಿಯಲಾರರು. ನಾವು ಹೈಸ್ಕೂಲ್‌ನಲ್ಲಿ ಇದ್ದಾಗ ಗಿರಿಯಾಪುರ ಎಂಬ ಗ್ರಾಮದಲ್ಲಿ ಗುರುಕುಮಾರ ಆಶ್ರಮದಲ್ಲಿ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಯೋಗಾ ಸನಗಳ ಚಿತ್ರಗಳನ್ನು ಆಶ್ರಮದಲ್ಲಿ ಅಂಟಿಸಿದ್ದರು. ಅವುಗಳನ್ನು ನೋಡಿ ಯೋಗಾಭ್ಯಾಸ ಕಲಿತೆ. ಮುಂದೆ ಶಿವಯೋಗ ಮಂದಿರಕ್ಕೆ ವಟುವಾಗಿ ಬಂದಾಗ ಅಲ್ಲಿನ ಯೋಗಾಭ್ಯಾಸ ನಮಗೆ ಹೆಚ್ಚು ಸುಲಭವಾಯಿತು.
ಮಠಾಧೀಶರಾದ ಅನಂತರ ನಾಲ್ಕಾರು ವರ್ಷ ಯೋಗ ಬಿಟ್ಟಿದ್ದೆ. ಅನಂತರ ಸಮಯ ಹೊಂದಿಸಿಕೊಂಡು ಪುನರಾರಂಭಿಸಿದೆ. ಇದೀಗ 65 ವರ್ಷ. ಇಂದಿಗೂ ಯೋಗ ಬಿಟ್ಟಿಲ್ಲ. ಎಲ್ಲ ಮಠಾಧೀಶರು ಯೋಗ ಬಿಡದೆ ಮುಂದುವರಿಸಬೇಕೆಂಬುದು ನಮ್ಮ ಆಶಯ.
-ಡಾ| ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ,
ಮೂರುಸಾವಿರ ಮಠ, ಹುಬ್ಬಳ್ಳಿ