ಎರಡು ವರ್ಷದಿಂದ ವ್ರತದಂತೆ ಪಾಲಿಸಿಕೊಂಡು ಬಂದಿದ್ದ ನಮ್ಮ ಗುಂಪಿನ ಯೋಗಾಭ್ಯಾಸ ಮಾರ್ಚ್ 22ರ ಜನತಾ ಕರ್ಫ್ಯೂನಿಂದಾಗಿ ಇದ್ದಕ್ಕಿದ್ದಂತೆ ನಿಂತುಬಿಟ್ಟಿತು! ನಂತರ ಲಾಕ್‌ಡೌನ್! 2018ರ ಮಾರ್ಚ್‌ನಲ್ಲಿ 30 ಸಂಖ್ಯೆಯಲ್ಲಿದ್ದ ಯೋಗಾಭ್ಯಾಸಿಗಳ ಸಂಖ್ಯೆ, ಕ್ರಮೇಣ ಇಳಿಮುಖವಾಗಿ ಮಾರ್ಚ್ 22, 2020ರ ಸಮಯಕ್ಕೆ 5 ಜನರಿಗೆ ಬಂದು ಮುಟ್ಟಿತ್ತು. ಆದರೂ ನಾವು ದೃಢಮನಸ್ಸಿನಿಂದ ನಮ್ಮ ವ್ರತವನ್ನು ಪಾಲಿಸಿದ್ದೆವು. ಬೆಳಿಗ್ಗೆ 5 ಗಂಟೆಗೆ ಎದ್ದು, 5.30ರ ಸಮಯಕ್ಕೆ ತರಗತಿ ಆರಂಭಿಸಿ, 6.45ರವರೆಗೆ ಅಭ್ಯಾಸ ನಡೆಸಿದ್ದೆವು. ಅಂತಹ ನಮಗೆ ಲಾಕ್‌ಡೌನ್‌ನಿಂದಾಗಿ ದಿಕ್ಕು ತೋಚದಂತಾಗಿತ್ತು. ನಮ್ಮ ನಮ್ಮ ಮನೆಯಲ್ಲಿ ನಮ್ಮಷ್ಟಕ್ಕೆ ಯೋಗಾಭ್ಯಾಸ ಮಾಡೋಣವೆಂದುಕೊಂಡರೂ ಬೆಳಗ್ಗೆ 5 ಗಂಟೆಗೆ ಏಳುವುದಕ್ಕೆ ಉದಾಸೀನ ಆರಂಭವಾಯಿತು!
ಪ್ರಪಂಚವೇ ಮಲಗಿರುವಾಗ ನಿನ್ನದೊಂದು ಮರುಳು ಎನ್ನುತ್ತಾ, ನನ್ನ ಆತ್ಮವೇ ನನ್ನನ್ನು ದಾರಿತಪ್ಪಿಸಿಬಿಡುತ್ತಿತ್ತು. ಕೆಲವೇ ಕ್ಷಣದಲ್ಲಿ ನಿದ್ದೆ ಆವರಿಸಿಬಿಡುತ್ತಿತ್ತು. ಕ್ರಮೇಣ, ಯೋಗಾಭ್ಯಾಸ ಆರಂಭದ ಸಮಯ ಒಂದು ಗಂಟೆ ವಿಳಂಬವಾಗಲಾರಂಭಿಸಿತು. ಆದರೂ ಯೋಗಾಭ್ಯಾಸ ತಪ್ಪಿಸಲಿಲ್ಲ. ಸ್ಮಾರ್ಟ್‌ಫೋನ್ ಕೊಂಡು ಆರು ವರ್ಷವಾದರೂ, ನಾನು ಫೋನ್‌ನಲ್ಲಿ ವಿಡಿಯೋ ಕಾಲ್ ಮಾಡಿರಲಿಲ್ಲ. ಶಾಲಾ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಬೇಕೇ?/ಬೇಡವೇ? ಎಂಬ ಚರ್ಚೆಯನ್ನು ಟಿವಿಯಲ್ಲಿ ನೋಡಿ- ಕೇಳಿ ತಲೆಕೆಟ್ಟುಹೋಗಿತ್ತು.
ಕಳೆದವಾರವಷ್ಟೇ ನನ್ನ ಸಹ ಯೋಗಾಭ್ಯಾಸಿಯೊಬ್ಬಳು- ಜಗತ್ತಿನಲ್ಲೆಲ್ಲ ಆನ್ ಲೈನ್ ಕ್ಲಾಸ್‌ಗಳು ನಡೆಯುತ್ತಿವೆ. ಅಂಥದೇ ಪ್ರಯೋಗವನ್ನು ನಾವೂ ಯಾಕೆ ಮಾಡಬಾರದು? ಮನೆಯಲ್ಲಿ ಸರಿಯಾಗಿ ಯೋಗ ಮಾಡಲು ಬೇಜಾರು. ಮನೆಯಿಂದ ಹೊರಗೆ ಬರಲು ಆಗುವುದಿಲ್ಲ. ಅದ್ದರಿಂದ ನಾವು ನಾಳೆಯಿಂದ ಆನ್‌ಲೈನ್ ಕ್ಲಾಸ್ ಮಾಡೋಣ್ವಾ? ಎಲ್ಲರೂ ಗೂಗಲ್ ಡಿಯೋ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ. ನಾಳೆ ಬೆಳಗ್ಗೆ 5.30ಕ್ಕೆ ಲಾಗಿನ್ ಆಗಿ ಎಂಬ ಮೆಸೇಜನ್ನು ನಮ್ಮ ಯೋಗಾಕ್ಲಾಸ್‌ನ ವಾಟ್ಸ್ಯಾಪ್ ಗ್ರೂಪಿನಲ್ಲಿ ಹಾಕಿದಳು. ಆನ್‌ಲೈನ್ ಕ್ಲಾಸ್ ಬಗ್ಗೆ ಕಲ್ಪನೆಯೇ ಇಲ್ಲದ ನಾನು, ಗೂಗಲ್ ಡಿಯೋ ಡೌನ್‌ಲೋಡ್ ಮಾಡಿಕೊಂಡೆ. ಹಿಂದಿನ ದಿನ, ಮನೆಯಲ್ಲಿಯೇ ಒಂದು ಪ್ರಯೋಗಿಕ ಆನ್‌ಲೈನ್ ಕ್ಲಾಸ್ ತರಬೇತಿ ನಡೆಯಿತು. ಮರುದಿನ ಬೆಳಗ್ಗೆ ಯೋಗ ತರಗತಿ ಆರಂಭವಾಗಿಯೇ ಬಿಟ್ಟಿತು. ಒಂದೇ ವಾರದಲ್ಲಿ ಆನ್‌ಲೈನ್ ಯೋಗ ಕ್ಲಾಸ್ ಇಷ್ಟು ಸುಲಭವಾ? ಎನ್ನಿಸಲು ಶುರುವಾಗಿದೆ.
ಒಂದು ಕಿಲೋಮೀಟರ್ ದೂರದಲ್ಲಿರುವ ಆಫ್ಲೈನ್ ಕ್ಲಾಸ್‌ಗೆ ಹೋಗಲು ಕತ್ತಲು, ಮಳೆ, ಚಳಿ, ಬೀದಿನಾಯಿ ಅಟ್ಟಿಸಿಕೊಂಡು ಬರುವ ಭಯ, ಸರಗಳ್ಳರ ಭಯ… ಇದೆಲ್ಲಾ ಇತ್ತು. ಆದರೆ ಆನ್‌ಲೈನ್ ಕ್ಲಾಸ್‌ಗೆ ಅದು ಯಾವುದೂ ಇಲ್ಲ. ನೆಟ್ವರ್ಕ್ ಸರಿಯಾಗಿ ಇದ್ದರಾಯ್ತು.
–ಸುರೇಖಾ ಭೀಮಗುಳಿ