ರಾಣಿಬೆನ್ನೂರ: ಪ್ರಧಾನಿ ನರೇಂದ್ರ ಮೋದಿ ಅವರು ಸರ್ವ ಜನರ ದೈಹಿಕ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿಯ ಸದುದ್ದೇಶದಿಂದ ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪ್ರಧಾನಿಯವರೇ ಹೆಚ್ಚಾಗಿ ಯೋಗ ಮಾಡುವ ಮೂಲಕ ಆರೋಗ್ಯವಂತರಾಗಿದ್ದು, ದೇಶವನ್ನು ಅತ್ಯಂತ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಮಹಿಳಾ ಪತಂಜಲಿ ಮೀಡಿಯಾ ಪ್ರಭಾರಿ ಹಾಗೂ ಯೋಗ ಶಿಕ್ಷಕಿ ರೇಖಾ ರಾಮಾಳದ ಹೇಳಿದರು.
ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಉಚಿತ ಯೋಗ ತರಬೇತಿ ಶಿಬಿರದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮೋದಿಯವರು ಪ್ರಧಾನಿಯಾದಾಗಿನಿಂದಲೂ ಯೋಗದತ್ತ ಹೆಚ್ಚಿನ ಗಮನ ಹರಿಸಿ ಕಳೆಗುಂದುತ್ತಿದ್ದ ಯೋಗಕ್ಕೆ ಮೆರುಗು ತರಲು ಕಾರಣೀಕರ್ತರಾಗಿದ್ದಾರೆ. ಅವರು ದಿನನಿತ್ಯ ಮಾಡುವ ಯೋಗದಿಂದಲೇ ಲವಲವಿಕೆ ಹಾಗೂ ಹುಮ್ಮಸ್ಸಿನಿಂದ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದರು.
ಸರ್ವರೂ ಯೋಗಾಭ್ಯಾಸ ರೂಢಿಸಿಕೊಂಡು ಮುನ್ನಡೆದಾಗ ಆರೋಗ್ಯವಂತರಾಗಿರಲು ಸಾಧ್ಯ. ಪುರಾತನ ಕಾಲದಿಂದಲೂ ಬಂದಿರುವ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡು ನಿತ್ಯವೂ ಯೋಗ, ಪ್ರಾಣಾಯಾಮ ಮಾಡಿದಾಗ ಮಾನಸಿಕವಾಗಿ, ದೈಹಿಕವಾಗಿ ಸದೃಢರಾಗಿರಬಹುದು. ಯೋಗ ಮಾಡುವುದರಿಂದ ರೋಗದಿಂದ ದೂರವಿರಬಹುದು ಎಂದರು.
ವಯಸ್ಸಾದ ನಂತರ ಮಂಡಿ ನೋವು, ಬಿಪಿ, ಶುಗರ್ ಸೇರಿದಂತೆ ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಾರೆ. ಇಂತಹ ಕಾಯಿಲೆಗಳಿಂದ ದೂರವಿರಲು ದಿನನಿತ್ಯ ಯೋಗ ಮಾಡಬೇಕು. ಯೋಗಕ್ಕೆ ಸರ್ವ ರೋಗವನ್ನೂ ಕಳೆಯುವ ಶಕ್ತಿ ಇದೆ. ಯೋಗದಲ್ಲಿ ಹಲವಾರು ಭಂಗಿಗಳು, ಆಸನಗಳು ಇರುತ್ತವೆ. ಯಾವ ಭಂಗಿ, ಯಾವ ಆಸನ ಮಾಡುವುದರಿಂದ ನಮ್ಮಲ್ಲಿರುವ ಕಾಯಿಲೆಗಳು ವಾಸಿಯಾಗುತ್ತವೆ ಎಂಬುದನ್ನು ಅರಿತುಕೊಂಡು ನಿತ್ಯವೂ ಯೋಗಾಸನ ಮಾಡಬೇಕೆಂದು ವಿವರಿಸಿದರು.
ಗ್ರಾಪಂ ಅಧ್ಯಕ್ಷೆ ರತ್ನವ್ವ ಬನ್ನಿಮಟ್ಟಿ, ಸಮುದಾಯ ಆರೋಗ್ಯ ಅಧಿಕಾರಿ ವಿನಾಯಕ ಎಸ್.ಜಿ., ಪಿಎಚ್‌ಸಿಒ ಯಶೋಧ ಹೊರಕೇರಿ, ಆಶಾ ಕಾರ್ಯಕರ್ತೆ ಲಕ್ಷ್ಮವ್ವ ತಹಶೀಲ್ದಾರ್, ವಿಜಯಲಕ್ಷ್ಮೀ ಬೆಳವಟಗಿ, ಸುಧಾ ಕುರವತ್ತಿ, ಮಹಲಿಂಗಪ್ಪ ಭತ್ತದ, ವೀರಪ್ಪ ಆನಿಶೆಟ್ರ, ಶಂಕ್ರಮ್ಮ ದೀಪಾವಳಿ, ಕರಿಯಮ್ಮ ಐರಣಿ, ಲತಾ ಆನಿಶೆಟ್ರ, ಕರಿಯಮ್ಮ ದಳವಾಯಿ, ಲಕ್ಷ್ಮೀ ಬಡಿಗೇರ, ಮಂಗಳಾ ಉಪ್ಪಿನ, ಯಶೋಧ ತೇಲ್ಕರ, ವಿಜಯಲಕ್ಷಿ ಬನ್ನಿಮಟ್ಟಿ, ಶಾಂತವ್ವ ಎರೇಶೀಮಿ, ದುರುಗವ್ವ ಭಜಂತ್ರಿ, ಅನ್ನಪೂರ್ಣಮ್ಮ ಬಡಿಗೇರ, ಮುದಿಮಲ್ಲಪ್ಪ ಭತ್ತದ, ತಿಮ್ಮಣ್ಣ ಭಜಂತ್ರಿ, ಅಶ್ವಿನಿ ಬಡಿಗೇರ, ಬಿ.ಎಫ್.ಬೆಳವಟಗಿ, ನೀಲಪ್ಪ ಕಂಬಳಿ, ಶಿವಪ್ಪ ಮೈಲಾರ ಮತ್ತಿತರರಿದ್ದರು.