Advertisement

ಪದ್ಮ ಪ್ರಶಸ್ತಿ; PM ಮೋದಿ, ರಾಷ್ಟ್ರಪತಿ ಎದುರು ಮಂಡಿಯೂರಿ ನಮಸ್ಕರಿಸಿದ 125 ವರ್ಷದ ಯೋಗ ಗುರು

02:49 PM Mar 22, 2022 | Team Udayavani |

ನವದೆಹಲಿ:ಈ ಬಾರಿ ಕೇಂದ್ರ ಸರ್ಕಾರ ತೆರೆಮರೆ ಕಾಯಿಗಳಂತಿದ್ದ ಹಲವಾರು ವ್ಯಕ್ತಿಗಳನ್ನು ಗುರುತಿಸಿ ದೇಶದ ಉನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಈ ಸಂದರ್ಭದಲ್ಲಿ 125 ವರ್ಷದ ಯೋಗ ಗುರು ಸ್ವಾಮಿ ಶಿವಾನಂದ ಅವರ ಸಾಧನೆ ಗುರುತಿಸಿ ಪದ್ಮ ಪ್ರಶಸ್ತಿ ನೀಡಲಾಗಿದೆ.

Advertisement

ಇದನ್ನೂ ಓದಿ:ಬುದ್ಧಿ ಹೇಳಿದ್ರೂ ಬುದ್ಧಿ ಬಿಡದ ಸೈಕೋ ಪತಿ: ಪತ್ನಿ ಕೊಲೆಗೈದು, ತಾನೂ ಆತ್ಮಹತ್ಯೆಗೆ ಯತ್ನ

ಪ್ರಧಾನಿ ಮೋದಿ, ರಾಷ್ಟ್ರಪತಿಗೆ ಯೋಗ ಗುರುವಿನ ಸಾಷ್ಟಾಂಗ ನಮಸ್ಕಾರ:

ಪ್ರಶಸ್ತಿ ಸ್ವೀಕರಿಸುವ ಮುನ್ನ ಯೋಗ ಗುರು ಮುಂದಿನ ಸಾಲಿನಲ್ಲಿ ಕುಳಿತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮುಂಭಾಗದಲ್ಲಿ ಮಂಡಿಯೂರಿ ಸಾಷ್ಟಾಂಗ ನಮಸ್ಕಾರ ಮಾಡಿದರು. ಇದನ್ನು ಗಮನಿಸಿದ ಪ್ರಧಾನಿ ಮೋದಿಯವರು ಕೂಡಲೇ ಎದ್ದು ನಿಂತು ತಾವೂ ಕೂಡಾ ಬಾಗಿ ಭೂಮಿಯನ್ನು ಸ್ಪರ್ಶಿಸಿ ನಮಸ್ಕರಿಸಿದರು. ಈ ಸಂದರ್ಭದಲ್ಲಿ ನೆರೆದಿದ್ದ ಅತಿಥಿಗಳು ಎದ್ದು ನಿಂತು ಯೋಗ ಗುರುವಿನ ಸರಳತೆಗೆ ಚಪ್ಪಾಳೆ ತಟ್ಟಿ ಅಭಿನಂದಿಸಿದರು.

ಬಿಳಿ ಕುರ್ತಾ, ಧೋತಿ ಧರಿಸಿದ್ದ ಸ್ವಾಮಿ ಶಿವಾನಂದ ಅವರು ವೇದಿಕೆ ಏರುವ ಮುನ್ನ ಮಂಡಿಯೂರಿ ಸಾಷ್ಟಾಂಗ ನಮಸ್ಕಾರ ಮಾಡಿದ ನಂತರ, ಮತ್ತೊಮ್ಮೆ ವೇದಿಕೆ ಏರಿದ ಮೇಲೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಮುಂದೆ ಮಂಡಿಯೂರಿ ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವಾಗಲೇ ರಾಷ್ಟ್ರಪತಿ ಸ್ವಾಮಿ ಶಿವಾನಂದ ಅವರನ್ನು ತಾವೇ ಎತ್ತಿ ಪದ್ಮಪ್ರಶಸ್ತಿಯನ್ನು ನೀಡಿದ್ದು, ಈ ಸಂದರ್ಭದಲ್ಲಿಯೂ ರಾಷ್ಟ್ರಪತಿ ಭವನದಲ್ಲಿ ಚಪ್ಪಾಳೆ ಮುಗಿಲುಮುಟ್ಟಿತ್ತು.

Advertisement

ಮುಂಜಾನೆ ಯೋಗ, ಎಣ್ಣೆ ರಹಿತ ಬೇಯಿಸಿದ ಅಡುಗೆ, ಶಿಸ್ತುಬದ್ಧ ಮತ್ತು ನಿಯಂತ್ರಿತ ಸರಳ ಜೀವನವೇ ಸ್ವಾಮಿ ಶಿವಾನಂದ ಅವರ ರೋಗಮುಕ್ತ ಹಾಗೂ ಸುದೀರ್ಘ ಜೀವನ ನಡೆಸಲು ಸಹಾಯಕವಾಗಿದೆ.

ಶಿವಾನಂದ ಅವರು 1896ರ ಆಗಸ್ಟ್ 8ರಂದು ಅವಿಭಜಿತದ ಭಾರತದ ಶೈಲ್ಲೆಟ್ ಜಿಲ್ಲೆ(ಈಗ ಬಾಂಗ್ಲಾದೇಶದಲ್ಲಿದೆ)ಯಲ್ಲಿ ಜನಿಸಿದ್ದರು. ತಮ್ಮ 6ನೇ ವಯಸ್ಸಿನಲ್ಲಿಯೇ ಸ್ವಾಮಿ ಶಿವಾನಂದ ಅವರು ತಂದೆ, ತಾಯಿಯನ್ನು ಕಳೆದುಕೊಂಡಿದ್ದರು. ಅದು ತೀವ್ರವಾದ ಬಡತನದಲ್ಲಿಯೇ ಪೋಷಕರು ವಿಧಿವಶರಾಗಿದ್ದರು. ಸ್ವಾಮಿ ಶಿವಾನಂದ ಅವರು ಬಡತನದಲ್ಲಿ ಕಾಲಕಳೆದವರು, ಭಿಕ್ಷುಕರಾಗಿದ್ದ ಪೋಷಕರು ಶಿವಾನಂದ ಅವರಿಗೆ ಬಾಲ್ಯದಲ್ಲಿ ಗಂಜಿ ನೀರನ್ನು ಕುಡಿಸಿ ಬೆಳೆಸಿರುವುದಾಗಿ ವರದಿ ತಿಳಿಸಿದೆ.

ಪೋಷಕರ ಅಂತ್ಯಕ್ರಿಯೆ ನಡೆದ ನಂತರ ಶಿವಾನಂದ್ ಅವರನ್ನು ಪಶ್ಚಿಮಬಂಗಾಳದ ನವದ್ವೀಪ್ ನಲ್ಲಿರುವ ಗುರೂಜೀ ಆಶ್ರಮಕ್ಕೆ ಕರೆತರಲಾಯಿತು. ಗುರು ಓಂಕಾರಾನಂದ ಗೋಸ್ವಾಮಿ ಶಿವಾನಂದ್ ಅವರನ್ನು ಆಶ್ರಮಕ್ಕೆ ಕರೆತಂದು ಯೋಗ ಸೇರಿದಂತೆ ಎಲ್ಲಾ ರೀತಿಯ ಧಾರ್ಮಿಕ ಶಿಕ್ಷಣವನ್ನು ನೀಡಿದ್ದರು.

ಸಾಮಾಜಿಕ, ಯೋಗ ಸೇವೆಯಲ್ಲಿ ತೊಡಗಿರುವ ಸ್ವಾಮಿ ಶಿವಾನಂದ ಅವರು ದೇಶ, ವಿದೇಶಗಳಲ್ಲಿ ತಿರುಗಾಟ ನಡೆಸಿದ್ದರು. ಸ್ವಾಮಿ ಶಿವಾನಂದ ಅವರು ಕಳೆದ 50 ವರ್ಷಗಳಿಂದ ಪುರಿಯಲ್ಲಿ 400-600 ಮಂದಿ ಕುಷ್ಠರೋಗ ಪೀಡಿತ ಭಿಕ್ಷುಕರ ಸೇವೆಯಲ್ಲಿ ವೈಯಕ್ತಿಕವಾಗಿ ತೊಡಗಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next