“ಯೋಗೇನ ಚಿತ್ತಸ್ಯ ಪದೇನ ವಾಚಾಂ
ಮಲಂ ಶರೀರಸ್ಯ ಚವೈದ್ಯಕೇನ
ಯೋಪಾಕರೋತ್ತಂ ಪ್ರವರಂ ಮುನೀನಾಂ
ಪತಂಜಲಿ ಪ್ರಾಂಜಲಿರಾನತೋಸ್ಮಿ’
ಎಂಬ ಶ್ಲೋಕ ಕೇಳುತ್ತಾ, ಅಪ್ಪ -ಅಮ್ಮ ಮಾಡುತ್ತಿದ್ದ ಯೋಗಾ ಭ್ಯಾಸವನ್ನು ನೋಡುತ್ತಲೇ ಬೆಳೆದವಳು ನಾನು. ಆಗೆಲ್ಲ ಯೋಗ ಎಂದರೆ ವಿಚಿತ್ರ ಭಂಗಿಗಳು, ಸತ್ತಂತೆ ಮಲಗುವುದು, ಜೋರಾಗಿ ಉಸಿರಾಡುವುದು ಎನ್ನುವ ತಪ್ಪು ಅಭಿಪ್ರಾಯವಿತ್ತು.
ಮನೋವೈದ್ಯರಾದ ಅಪ್ಪ 1981ರಲ್ಲಿಯೇ “ಯೋಗ ಮತ್ತು ಟೆನ್ಶನ್ ತಲೆನೋವು’ ಕುರಿತಾಗಿ ನಿಮ್ಹಾನ್ಸ್‌ನಿಂದ ಎಂ.ಡಿ ಪಡೆದು ಅದನ್ನು ಚಿಕಿತ್ಸೆಯ ಭಾಗವಾಗಿ ಯಶಸ್ವಿಯಾಗಿ ಅಳವಡಿಸಿದವರು. ಅದಕ್ಕೆ ಪೂರಕವಾಗಿ ಅಮ್ಮ, ಯೋಗಶಿಕ್ಷಣ ಪಡೆದು ಸಾರ್ವಜನಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಯೋಗ ತರಗತಿ ನಡೆಸುತ್ತಿದ್ದರು. ಮಕ್ಕಳಾದ ನಾವು ಆರಂಭದಲ್ಲಿ ಯೋಗ ಮಾಡುತ್ತಿದ್ದದ್ದು ಅವರಿಬ್ಬರ ಒತ್ತಾಯಕ್ಕಾಗಿ ಮಾತ್ರ!
ಹಾಗೆ ರೂಢಿಯಾದ ಯೋಗಾಭ್ಯಾಸ, ಉತ್ತಮ ಜೀವನ ಶೈಲಿಗೆ- ಆರೋಗ್ಯಕ್ಕೆ ಭದ್ರಬುನಾದಿ ಎಂಬುದು ನಿಧಾನವಾಗಿ ಬುದ್ಧಿ ಬೆಳೆದಂತೆಲ್ಲ ಅರಿವಾಯಿತು. ದಂತವೈದ್ಯಕೀಯ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳೆರಡನ್ನೂ ಬೇಡುವ ವೃತ್ತಿ. ಸೂಕ್ಷವಾಗಿ ಬಾಯಿಯಲ್ಲಿ ಕೆಲಸಗಳನ್ನು ಮಾಡುವಾಗ ಒಂದೇ ಭಂಗಿಯಲ್ಲಿ ಸಾಕಷ್ಟು ಸಮಯ ಕೂರುವುದು ಅಥವಾ ನಿಲ್ಲುವುದು ಅನಿವಾರ್ಯ. ದಂತವೈದ್ಯೆಯಾಗಿ ವೃತ್ತಿಜೀವನ ಕೈಗೊಂಡು ವರ್ಷಗಟ್ಟಲೆ ಈ ರೀತಿ ಕೆಲಸ ಮಾಡುವಾಗ ಬೆನ್ನು, ಕೈ, ಭುಜ, ಕತ್ತು ನೋವು ಸರ್ವೇಸಾಮಾನ್ಯ. ಈ ನೋವನ್ನು ತಡೆಗಟ್ಟಲು, ಮಾಂಸಖಂಡಗಳಿಗೆ ಉಂಟಾಗುವ ದಣಿವನ್ನು ನಿವಾರಿಸಲು ಯೋಗದ ತ್ರಿಕೋನಾಸನ, ಉಷ್ಟಾಸನ, ಭುಜಂಗಾಸನ, ವೃಕ್ಷಾಸನ, ಸರ್ಪಾಸನ ಉಪಯುಕ್ತವಾಗಿವೆ. ಭರತನಾಟ್ಯ ನನ್ನ ಪ್ರೀತಿ ಮತ್ತು ಆಸಕ್ತಿಯ ಕ್ಷೇತ್ರ. ಗುರುಗಳಾದ ಡಾ| ವಸುಂಧರಾ ದೊರೆಸ್ವಾಮಿ ಅವರಿಂದ ಶಿಕ್ಷಣ ಪಡೆಯುತ್ತಾ ನೃತ್ಯದ ಬಳುಕು -ಬಾಗುಗಳಿಗೆ, ಭಾವ -ಭಂಗಿಗಳಿಗೆ ಯೋಗ ಹೇಗೆ ಆವಶ್ಯಕ ಎನ್ನುವ ಅರಿವು ಮೂಡಿತು. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ವೃತ್ತಿ ಮತ್ತು ಸಾಂಸಾರಿಕ ಬದುಕಿನಲ್ಲಿ ಬಹುವಿಧ ಪಾತ್ರಗಳನ್ನು ನಿರ್ವಹಿಸುವುದು ಅನಿವಾರ್ಯ. ಆಗ ಸೃಷ್ಟಿಯಾಗುವ ಒತ್ತಡ, ಆತಂಕ, ನಕಾರಾತ್ಮಕ ಭಾವನೆಗಳನ್ನು ತಗ್ಗಿಸುವಲ್ಲಿ ಪ್ರಾಣಾಯಾಮ ಮತ್ತು ಧ್ಯಾನ ಖಂಡಿತವಾಗಿಯೂ ಸಹಕಾರಿಯಾಗಿದೆ.
-ಡಾ| ಕೆ.ಎಸ್.ಚೈತ್ರಾ