ವಿಜಯಪುರ: ಭಾರತೀಯ ಸಂಸ್ಕೃತಿ ಉತ್ಸವ ನಿಮಿತ್ತ ಜಿಲ್ಲೆಯಾದ್ಯಂತ ಯೋಗ ಅಭಿಯಾನ ಆರಂಭಗೊಂಡಿದೆ. ಇದೇ ಸಂದರ್ಭದಲ್ಲಿ ಡಿ. 30ರಿಂದ ಕಗ್ಗೋಡ ಗ್ರಾಮದಲ್ಲಿ ಎರಡು ದಿನ 50 ಸಾವಿರ ಜನರು ಪಾಲ್ಗೊಳ್ಳುವ ವಿರಾಟ್ ಯೋಗ ಶಿಬಿರದಲ್ಲಿ ಯೋಗಗುರು ಬಾಬಾ ರಾಮದೇವ ಭಾಗವಹಿಸಲಿದ್ದಾರೆ ಎಂದು ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ತಿಳಿಸಿದರು.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಗ್ಗೋಡ ಗ್ರಾಮದಲ್ಲಿ ನಡೆಯುವ ಐತಿಹಾಸಿಕ ಯೋಗ ಶಿಬಿರದ ಜಾಗೃತಿಗಾಗಿ ಜಿಲ್ಲೆಯಲ್ಲಿ 101 ಯೋಗ ಶಿಬಿರ ನಡೆಸುವ ಗುರಿಯಿದ್ದು ಈಗಾಲೇ 75 ಶಿಬಿರ ಕಂಡಿದೆ. ಮತ್ತೂಂದೆಡೆ ನಗರದ ಎಸ್.ಎಸ್.ಹೈಸ್ಕೂಲ್ ಮೈದಾನದಲ್ಲಿ ಡಿ. 21ರಿಂದ 3 ದಿನ ನಡೆಯುವ ಪೂರ್ವಭಾವಿ ಶಿಬಿರದಲ್ಲಿ 6 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಸದರಿ ಯೋಗ ಶಿಬಿರದದ ಮೂಲಕ ವಿರಾಟ ಯೋಗ ಶಿಬಿರಕ್ಕೆ ಚಾಲನೆ ದೊರೆಯಲಿದೆ. ಈ ಶಿಬಿರದ ಬಳಿಕ ರಾಜ್ಯದಲ್ಲಿ ಈಗಾಗಲೇ ಇರುವ 500 ಯೋಗ ಶಿಕ್ಷಕರ ಸಂಖ್ಯೆಯನ್ನು 50 ಸಾವಿರಕ್ಕೆ ಹಾಗೂ 1100 ಯೋಗ ಶಿಬಿರಗಳನ್ನು 11,000 ಶಿಬಿರಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಡಿ. 30ರಿಂದ ಜೂನ್ 21ರವರೆಗೆ ರಾಜ್ಯಾದ್ಯಂತ ನಿರಂತರ ಯೋಗ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಇದರ ಬಳಿಕ ರಾಜ್ಯದ ಪ್ರತಿ ಹಳ್ಳಿ, ವಾರ್ಡ್‌ಗಳಲ್ಲಿ ಯೋಗ ಶಿಬಿರ ನಡೆಯವಂತೆ ನೋಡಿಕೊಳ್ಳುವ ಗುರಿಯೂ ಇದೆ ಎಂದು ವಿವರಿಸಿದರು.
ಕರ್ನಾಟಕ ಮಾತ್ರವಲ್ಲದೇ ದೇಶದ 650 ಜಿಲ್ಲೆಗಳಲ್ಲೂ ಯೋಗ ತರಬೇತಿ ಜೊತೆಗೆ ಕೇಂದ್ರೀಯ ಶಿಕ್ಷಣ ಪಠ್ಯ ಆಧಾರಿತ ಗುರುಕುಲ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಗುರುಕುಲ ಕೇಂದ್ರ ಆರಂಭಕ್ಕೆ ಸ್ಥಳ ಗುರುತಿಸಲಾಗಿದೆ. ಇದರ ಜೊತೆ ದೇಶದಲ್ಲೇ 1 ಲಕ್ಷ ವಿದ್ಯಾರ್ಥಿಗಳು ಏಕ ಕಾಲಕ್ಕೆ ಪಾಠ ಆಲಿಸುವ ಬೃಹತ್ ವಿಶ್ವ ವಿದ್ಯಾಲಯವೂ 2020ನೇ ಇಸ್ವಿ ವೇಳೆಗೆ ಹರಿದ್ವಾರದಲ್ಲಿ ತಲೆ ಎತ್ತಲಿದೆ ಎಂದರು.
ಇದಲ್ಲದೇ ಪತಂಜಲಿ ಯೋಗ ಟ್ರಸ್ಟ್ ಮೂಲಕ ಪಂತಂಜಲಿ ಆಯುರ್ವೇದ ಉತ್ಪನ್ನಗಳಿಂದ ಬರುವ ಆದಾಯವನ್ನು ಸುಮಾರು 10 ಸಾವಿರ ಕೋಟಿ ರೂ. ಹಣವನ್ನು ವಿದ್ಯಾದಾನ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ 300 ವಿಜ್ಞಾನಿಗಳು ಆಯುರ್ವೇದ ಸಂಶೋಧನೆ ನಡೆಸಲು 500 ಕೋಟಿ ರೂ. ವೆಚ್ಚದ ಬೃಹತ್ ಸಂಶೋಧನಾ ಕೇಂದ್ರವೂ ತಲೆ ಎತ್ತಲಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ರಾಜಶೇಖರ ಮಗಿಮಠ, ಸುನಂದ ಹೊನವಾಡ, ಸಂಗು ಕಮಕರ, ಕಿರಣಕುಮಾರ, ಶಶಿಕಲಾ ಇದ್ದರು.