Advertisement
ಕೊಂಕಣ ರೈಲ್ವೇ ಕರಾವಳಿಗೆ ಕಾಲಿಟ್ಟ ಸಂದರ್ಭ ಇದ್ದ ಸ್ಟೇಷನ್ ತೆರವಾದ ಬಳಿಕ ಪ್ಲಾಟ್ ಫಾರಂ ಕೂಡಾ ಇಲ್ಲದೇ ಪ್ರಯಾಣಿಕರು ರೈಲು ಹತ್ತಲು ಪರದಾಡುವಂತಾಗಿತ್ತು. ಇದೀಗ ಸ್ಥಳೀಯರು ಮತ್ತು ಜನಪ್ರತಿನಿಧಿಗಳ ನಿರಂತರ ಒತ್ತಡದ ಬಳಿಕ ಇನ್ನಂಜೆ ರೈಲ್ವೇ ಸ್ಪೇಷನ್ ಮೇಲ್ದರ್ಜೆಗೇರುತ್ತಿದ್ದು, ಕ್ರಾಸಿಂಗ್ – ಪಾಸಿಂಗ್ ಸ್ಟೇಷನ್ ಎಂಬ ಹೆಸರಿನಲ್ಲಿ 11.50 ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಹೊಸ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲತೆಗಾಗಿ ಸುಸಜ್ಜಿತ ಪ್ಲಾಟ್ ಫಾರಂ ಸಹಿತ ವಿವಿಧ ಮೂಲ ಸೌಕರ್ಯಗಳ ಜೋಡಣೆ, ದ್ವಿಪಥ ಹಳಿ ಜೋಡಣೆ ಸಹಿತವಾಗಿ ವಿವಿಧ ಕಾಮಗಾರಿಗಳು ಭರದಿಂದ ಸಾಗುತ್ತಿವೆ.ಇನ್ನಂಜೆಯಲ್ಲಿ ರೈಲು ನಿಲ್ದಾಣ ರಚನೆ ಕಾಮಗಾರಿ ಸಹಿತವಾಗಿ ಉಡುಪಿ ಮತ್ತು ಪಡುಬಿದ್ರಿ ರೈಲ್ವೇ ನಿಲ್ದಾಣಗಳ ನಡುವೆ ಇರುವ 18 ಕಿ.ಮೀ. ಅಂತರವನ್ನು ಕುಗ್ಗಿಸುವ ಯೋಜನೆಯಾಗಿ 6.75 ಕೋಟಿ ರೂ. ವೆಚ್ಚದಲ್ಲಿ ಕ್ರಾಸಿಂಗ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ಈ ಮೂಲಕ ವಿವಿಧ ರೈಲುಗಳು ಪಾಸಿಂಗ್‌ಗಾಗಿ ಉಡುಪಿ ನಿಲ್ದಾಣದಲ್ಲಿ ತುಂಬಾ ಹೊತ್ತು ನಿಂತು ಬಿಡುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಮತ್ತು ರೈಲುಗಳ ವಿಳಂಬ ಸಂಚಾರವನ್ನು ತಡೆಯಲು ಸಾಧ್ಯವಾಗುತ್ತದೆ. ಇಲ್ಲಿನ ಕ್ರಾಸಿಂಗ್ – ಪಾಸಿಂಗ್ ಸ್ಟೇಶನ್ ನಿರ್ಮಾಣವಾಗುವುದರಿಂದ ರೈಲುಗಳು ವೇಗವಾಗಿ ಸಾಗಲೂ ಅನುವು ಮಾಡಿ ಕೊಟ್ಟಂತಾಗುತ್ತದೆ. 2016ರಲ್ಲಿ ರೈಲ್ವೇ ಸಚಿವರಿಂದ ಚಾಲನೆ
ಇನ್ನಂಜೆ ರೈಲು ನಿಲ್ದಾಣವನ್ನು ಮೇಲ್ದರ್ಜೆ ಗೇರಿಸುವ ಯೋಜನೆಗೆ 2016ರಲ್ಲಿ ಅಂದಿನ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಹಸಿರು ನಿಶಾನೆ ತೋರಿದ್ದರು. ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ರೈಲ್ವೇ ನಿಲ್ದಾಣದ ಕಾಮಗಾರಿಯು ಮತ್ತಷ್ಟು ವೇಗ ಪಡೆದಿದೆ. ಯೋಜನೆಯಂತೆ ಕಾಮಗಾರಿ ನಡೆದರೆ ವರ್ಷಾಂತ್ಯದೊಳಗೆ ನೂತನ ಸ್ಟೇಷನ್ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ.
Related Articles
ಕರಾವಳಿಗೆ ಕೊಂಕಣ ರೈಲ್ವೇ ಕಾಲಿರಿಸಿದ ಪ್ರಾರಂಭದಲ್ಲೇ ಇನ್ನಂಜೆಯಲ್ಲಿ ಕೂಡಾ ರೈಲು ನಿಲುಗಡೆಯಾಗುತ್ತಿತ್ತು ಮತ್ತು ರೈಲು ನಿಲ್ದಾಣ ಕೂಡಾ ರಚನೆಯಾಗಿತ್ತು. ಆದರೆ ಮುಂದೆ ವಿವಿಧ ಕಾರಣಗಳನ್ನು ಮುಂದಿರಿಸಿಕೊಂಡು ಇಲ್ಲಿನ ರೈಲು ನಿಲ್ದಾಣವನ್ನು ಇಲಾಖೆಯ ಮುತುವರ್ಜಿಯಲ್ಲೇ ಕೆಡವಲಾಗಿತ್ತು. ಈ ಬಗ್ಗೆ ರಾಜಕೀಯ ಕೆಸರೆರಚಾಟ, ಡೊಂಬರಾಟವೂ ನಡೆದಿತ್ತು. ಆದರೆ ಅನಂತರದ ದಿನಗಳಲ್ಲಿ ಸ್ಥಳೀಯರ ಒತ್ತಡ ಮತ್ತು ಬೇಡಿಕೆಯ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವರಾದ ವಸಂತ ವಿ. ಸಾಲ್ಯಾನ್ ಮತ್ತು ವಿನಯಕುಮಾರ್ ಸೊರಕೆ ಮೊದಲಾದವರ ವಿಶೇಷ ಪ್ರಯತ್ನದಿಂದಾಗಿ 2013ರಲ್ಲಿ ಮತ್ತೆ ರೈಲು ನಿಲುಗಡೆಗೊಳ್ಳುವಂತಾಗಿತ್ತು.
Advertisement
ಸ್ಟೇಷನ್ ಇಲ್ಲದೇ ಪರದಾಟ2013ರಲ್ಲಿ ಮತ್ತೂಮ್ಮೆ ಇನ್ನಂಜೆಯಲ್ಲಿ ರೈಲು ನಿಲುಗಡೆ ಭಾಗ್ಯ ದೊರಕಿದರೂ ಪ್ಲಾಟ್ ಫಾರಂ ಇಲ್ಲದೇ, ನಿಲ್ದಾಣವೂ ಇಲ್ಲದೇ ಪ್ರಯಾಣಿಕರು ಪರದಾಡುವಂತಾಗಿತ್ತು. ಇದನ್ನು ಮನಗಂಡು ಜಿ.ಪಂ. ಸದಸ್ಯ ಅರುಣ್ ಶೆಟ್ಟಿ ಪಾದೂರು ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಹಿಂದಿನ ಸಂಸದ ಡಿ.ವಿ. ಸದಾನಂದ ಗೌಡ, ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರಿಗೆ ಪತ್ರ ಬರೆದು ಇನ್ನಂಜೆ ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ಮುಂಬಯಿ ಮತ್ತು ಬೆಂಗಳೂರು ರೈಲುಗಳ ನಿಲುಗಡೆಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದ್ದರು. ಉದಯವಾಣಿ ಮೂಲಕವೂ ಪ್ರಯತ್ನ
ಕೊಂಕಣ ರೈಲ್ವೇ ಕರಾವಳಿಗೆ ಕಾಲಿಟ್ಟ ಪ್ರಥಮದಲ್ಲಿ ಇದ್ದ ಇನ್ನಂಜೆ ರೈಲು ನಿಲ್ದಾಣವನ್ನು ತೆರವುಗೊಳಿಸಿರುವ ಬಗ್ಗೆ ಉದಯವಾಣಿ ಹಲವು ಬಾರಿ ವಿಶೇಷ ವರದಿಗಳನ್ನು ಪ್ರಕಟಿಸಿತ್ತು. ಮಾತ್ರವಲ್ಲದೇ ನನಸಾಗಲಿ 40ರ ಕನಸು ವಿಶೇಷ ಲೇಖನ ಮಾಲಿಕೆಯಲ್ಲೂ ಈ ಬಗ್ಗೆ ವರದಿ ಪ್ರಕಟಿಸಲಾಗಿತ್ತು. 2013ರಲ್ಲಿ ರೈಲು ನಿಲುಗಡೆಯಾಗತೊಡಗಿದ ಬಳಿಕ ಇಲ್ಲೊಂದು ರೈಲ್ವೇ ಸ್ಟೇಷನ್ ನಿರ್ಮಾಣಗೊಳ್ಳ ಬೇಕೆಂಬ ಬಗ್ಗೆಯೂ ಉದಯವಾಣಿ ವಿಶೇಷ ವರದಿಗಳನ್ನು ಪ್ರಕಟಿಸುತ್ತಾ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು, ಇಲಾಖೆಯನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತಾ ಬಂದಿದೆ. ಏನೆಲ್ಲಾ ವ್ಯವಸ್ಥೆಗಳು ಸಿಗಲಿವೆ ?
11.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಇನ್ನಂಜೆ ರೈಲ್ವೇ ಸ್ಟೇಷನ್‌ನಲ್ಲಿ ಗಾಳಿ – ಮಳೆಯಿಂದ ರಕ್ಷಣೆ ನೀಡುವ ಸುಸಜ್ಜಿತ ಸ್ಟೇಷನ್, 560 ಮೀಟರ್ ಉದ್ದದ ಪ್ಲಾಟ್‌ಫಾರಂ, ಟಿಕೆಟ್ ಕೌಂಟರ್, ನಿಯಂತ್ರಣ ಕೊಠಡಿ, ವಿಶ್ರಾಂತಿ ಕೊಠಡಿ, ಟಾಯ್ಲಟ್ ಮತ್ತು ಬಾತ್‌ರೂಮ್, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ 2 ಜನರಲ್ ಟಾಯ್ಲೆಟ್ ಮತ್ತು ವಿಶೇಷ ಚೇತನರಿಗಾಗಿ ವಿಶೇಷ ಟಾಯ್ಲೆಟ್ ಮತ್ತು ಬಾತ್‌ರೂಂ, ಸ್ಟೇಷನ್ ಮಾಸ್ಟರ್ ರೂಂ, ಕುಡಿಯುವ ನೀರಿನ ಸೌಲಭ್ಯ ಜೋಡಣೆಯಾಗುತ್ತಿದೆ. ರಾ.ಹೆ. 66ಕ್ಕೆ ಸನಿಹದಲ್ಲಿದೆ ರೈಲು ನಿಲ್ದಾಣ
ಇನ್ನಂಜೆ ರೈಲು ನಿಲ್ದಾಣವು ಕೊಂಕಣ ರೈಲ್ವೇಯ ಪಡುಬಿದ್ರಿ ಮತ್ತು ಉಡುಪಿ ನಡುವಿನ ಕಿ.ಮೀ. 701/ 2-5ರಲ್ಲಿ ಬರಲಿದೆ. ರಾಷ್ಟ್ರೀಯ ಹೆದ್ದಾರಿ 66ರ ಪಾಂಗಾಳದಿಂದ 2.5 ಕಿ.ಮೀ. ದೂರದಲ್ಲಿರುವ ಈ ನಿಲ್ದಾಣದಿಂದ ಸುತ್ತಲಿನ ಹಲವು ಗ್ರಾಮಗಳ ಜನರಿಗೆ ಅನುಕೂಲವಾಗಲಿವೆ. ಕಾಪು ತಾಲೂಕು ಕೇಂದ್ರಕ್ಕೆ ಸನಿಹದಲ್ಲಿರುವ ಇನ್ನಂಜೆ ರೈಲು ನಿಲ್ದಾಣವು ಕಾಪು, ಕುರ್ಕಾಲು, ಕಟಪಾಡಿ, ಕೋಟೆ, ಶಿರ್ವ, ಇನ್ನಂಜೆ, ಮಜೂರು, ಬೆಳ್ಮಣ್ ವ್ಯಾಪ್ತಿಯ ಜನರಿಗೆ ಹತ್ತಿರದಿಂದ ಸೇವೆಯನ್ನು ನೀಡಲಿದೆ. ಉನ್ನತ ದರ್ಜೆಯ ನಿಲ್ದಾಣವನ್ನಾಗಿ ಪರಿವರ್ತಿಸುವ ಚಿಂತನೆ
ಗ್ರಾಮೀಣ ಜನರ ಬೇಡಿಕೆಯ ಮೇರೆಗೆ ಇನ್ನಂಜೆ ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ಕ್ರಾಸಿಂಗ್ – ಪಾಸಿಂಗ್ ಸ್ಟೇಶನ್ ಆಗಿ ಪರಿವರ್ತಿಸಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಉನ್ನತ ದರ್ಜೆಯ ನಿಲ್ದಾಣವನ್ನಾಗಿ ಪರಿವರ್ತಿಸುವ ಚಿಂತನೆಯೂ ರೈಲ್ವೇ ಇಲಾಖೆಯದ್ದಾಗಿದೆ. ಇಲ್ಲಿ 11.50 ಕೋ. ರೂ. ವೆಚ್ಚದಲ್ಲಿ ಹೊಸ ಸ್ಟೇಷನ್, ಹೈ ಲೆವೆಲ್ ಪ್ಲಾಟ್‌ಪಾರಂ, ಕ್ರಾಸಿಂಗ್ – ಪಾಸಿಂಗ್ ಲೈನ್ ಸಹಿತ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಜನವರಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮುಂದೆ ಮುಂಬೈ – ಬೆಂಗಳೂರಿಗೆ ತೆರಳುವ ರೈಲುಗಳಿಗೂ ಇಲ್ಲಿ ನಿಲುಗಡೆ ನೀಡಬೇಕೆಂಬ ಬೇಡಿಕೆಯೂ ಇದ್ದು ಈ ಬಗ್ಗೆಯೂ ಯೋಚಿಸಲಾಗುವುದು.
-ಬಿ.ಬಿ. ನಿಕಂ,ರೀಜನಲ್ ರೈಲ್ವೇ ಮ್ಯಾನೇಜರ್, ಕಾರವಾರ ಮೇಲ್ದರ್ಜೆಗೇರಬೇಕು
ಇನ್ನಂಜೆ ರೈಲ್ವೇ ನಿಲ್ದಾಣವು ಮೇಲ್ದರ್ಜೆಗೇರಬೇಕು, ಇಲ್ಲಿ ಲೋಕಲ್ ಟ್ರೈನ್ ಸಹಿತವಾಗಿ ಮುಂಬಯಿ ಮತ್ತು ಬೆಂಗಳೂರಿಗೆ ತೆರಳುವ ರೈಲುಗಳು ಕೂಡಾ ನಿಲುಗಡೆಯಾಗಬೇಕೆಂಬ ಬೇಡಿಕೆಯನ್ನು ಈಗಾಗಲೇ ಇಲಾಖೆಯ ಮುಂದೆ ಇರಿಸಲಾಗಿದೆ. ಅದಕ್ಕೆ ಪೂರಕವಾಗಿ ಸುಸಜ್ಜಿತ ಸ್ಟೇಷನ್ ನಿರ್ಮಾಣವಾಗುತ್ತಿದ್ದು, ಕ್ರಾಸಿಂಗ್-ಪಾಸಿಂಗ್ ಸ್ಟೇಷನ್ ಕೂಡಾ ನಿರ್ಮಾಣವಾಗುತ್ತಿದೆ. ಇದು ಗ್ರಾಮದ ಜನರ ಪಕ್ಷಾತೀತ ಹೋರಾಟಕ್ಕೆ ದೊರಕಿದ ಜಯವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ರೈಲುಗಳ ನಿಲುಗಡೆಗೂ ಒತ್ತಾಯ ಮಾಡಲಾಗುವುದು.
-ಅರುಣ್ ಶೆಟ್ಟಿ ಪಾದೂರು,
ಮಾಜಿ ಜಿ.ಪಂ. ಸದಸ್ಯರು ಬಹುಕಾಲದ ಕನಸು
ಇನ್ನಂಜೆಯ ರೈಲ್ವೇ ನಿಲ್ದಾಣವನ್ನು ಏಕಾಏಕಿಯಾಗಿ ನೆಲಸಮ ಮಾಡಿದಾಗ ಉದಯವಾಣಿಯಲ್ಲಿ ಪ್ರಕಟಗೊಂಡಿದ್ದ ವಿಶೇಷ ವರದಿಯು ಬಹಳಷ್ಟು ಪರಿಣಾಮ ಮೂಡಿಸಿತ್ತು. ಆ ಬಳಿಕ ರಾಜಕೀಯ ನಾಯಕರು ಮತ್ತು ಜನ ಪ್ರತಿನಿಧಿಗಳು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ಅಧಿಕಾರಿಗಳನ್ನೂ ಕರೆಯಿಸಿಕೊಂಡು ಹೋರಾಟಕ್ಕೆ ಅಣಿಯಾದ ಕಾರಣ 2013ರಲ್ಲಿ ರೈಲು ನಿಲುಗಡೆಗೆ ಅವಕಾಶ ದೊರಕಿತ್ತು. ರೈಲು ನಿಲಗಡೆಯಾಗುತ್ತಿದ್ದರೂ ಸ್ಟೇಷನ್ ಇಲ್ಲದೇ ಜನ ಪರದಾಡುತ್ತಿದ್ದು, ಇದೀಗ ಸುಸಜ್ಜಿತ ಸ್ಟೇಷನ್ ನಿರ್ಮಾಣದ ಮೂಲಕ ಜನರ ಬಹುಕಾಲದ ಕನಸು ನನಸಾಗುವ ಲಕ್ಷಣಗಳು ಕಾಣಿಸುತ್ತಿವೆ.
– ಸದಾಶಿವ ಬಂಗೇರ, ಕುರ್ಕಾಲು, ಹೋರಾಟ ಸಮಿತಿ ಸದಸ್ಯ – ರಾಕೇಶ್ ಕುಂಜೂರು