Advertisement

ಒತ್ತಡ ನಿವಾರಣೆಗೆ ಯೋಗ ; ಗರ್ಭವತಿಯರಿಗೆ ವರದಾನ

03:45 AM Jun 25, 2017 | |

ಯೋಗ: ಯೋಗ ಎಂಬ ಪದವು ಸಂಸ್ಕೃತದ ಮೂಲವಾದ “ಯುಜ್‌’ನಿಂದ ಉತ್ಪತ್ತಿಯಾಗಿದೆ. ಸಂಯೋಗ ಅಥವಾ ಏಕತೆ ಎಂಬುದು ಇದರ ಅರ್ಥವಾಗಿದೆ. ಇದು ದೇಹ ಹಾಗೂ ಮನಸ್ಸಿನ ಮೇಲೆ ಹಿಡಿತ ಸಾಧಿಸುತ್ತದೆ, ಬೆಸೆಯುತ್ತದೆ. ದೇಹ ಹಾಗೂ ಮನಸ್ಸಿನ ಗರಿಷ್ಠ ಕಾರ್ಯಾತ್ಮಕ ಬೆಸುಗೆಯನ್ನು ಅರ್ಥೈಸಲು ಇದು ಅತ್ಯಂತ ಸಹಕಾರಿಯಾಗಿದೆ.
 
“ಆರೋಗ್ಯವೇ ಸಂಪತ್ತು ಮತ್ತು ಮನಃಶಾಂತಿಯೇ ಆನಂದ’ ಇದು ಯೋಗದ  ಅತ್ಯಂತ ಪ್ರಮುಖ ನಂಬಿಕೆಗಳಲ್ಲಿ ಒಂದಾಗಿದೆ. ಹಾಗಾಗಿ ಈ ಕಾಲಘಟ್ಟದಲ್ಲಿ ಯೋಗ ಉತ್ತಮ ಆರೋಗ್ಯ ಹಾಗೂ ತೃಪ್ತ ಬದುಕಿಗೆ ಕೀಲಿಕೈ ಆಗಿದೆ. ಆಧುನಿಕ ವೈದ್ಯಕೀಯ ತಂತ್ರಜ್ಞಾನಕ್ಕೆ ಪೂರಕವಾಗಿ ಸಾಂಪ್ರದಾಯಿಕ, ಪ್ರಾಕೃತಿಕ ಮೂಲ ಸ್ಪರ್ಶ ಹೊಂದಿರುವ ಯೋಗವು ವ್ಯಕ್ತಿಯ ಮನಸ್ಸು ಹಾಗೂ ದೇಹದ ತೊಂದರೆಗಳನ್ನು  ನಿವಾರಿಸುವಲ್ಲಿ ಪಾತ್ರ ವಹಿಸುತ್ತದೆ. 

Advertisement

ಗರ್ಭಿಣಿಯರಲ್ಲಿ ಒತ್ತಡ
ಆಧುನಿಕ ಸಮಾಜ, ವೇಗವಾಗಿ  ಮುಂದುವರಿಯುತ್ತಿರುವ ಕೈಗಾರಿಕೀಕರಣ, ಬದಲಾದ ಜೀವನ ಶೈಲಿ ಹತ್ತು ಹಲವು ಸಂದರ್ಭಗಳಲ್ಲಿ ಜನರನ್ನು ಒತ್ತಡಕ್ಕೀಡುಮಾಡುತ್ತವೆ. ಮನುಷ್ಯನ ದೈಹಿಕ ಸಮತೋಲನ, ಒತ್ತಡವನ್ನುಂಟುಮಾಡವಂಥದ್ದು, ಒತ್ತಡ ಮತ್ತು ಒತ್ತಡಕ್ಕೆ ಸೇರ್ಪಡೆಯಾದ ಪ್ರತಿಕ್ರಿಯೆ ಇವು ಒತ್ತಡಕ್ಕೆ ಸಂಬಂಧಿಸಿದಂತೆ ಪ್ರಮುಖ ನಾಲ್ಕು ಅಂಶಗಳು. ದೇಹದ ಸಮತೋಲನವನ್ನು ತಪ್ಪಿಸುವ ಆಂತರಿಕ ಮತ್ತು ಬಾಹ್ಯ ಶಕ್ತಿಗಳಿಂದ ಒತ್ತಡ ಉಂಟಾಗುತ್ತದೆ. 

ಗರ್ಭಿಣಿಯಾಗಿರುವ ಅವಧಿ  ಹಾಗೂ ಮಗುವಿನ ಜನನ ಓರ್ವ ಮಹಿಳೆಯ ಬದುಕಿನಲ್ಲಿ ತಾಯಿತನದ ಕನ್ನಡಿಯಿಟ್ಟು ನೋಡಿದಾಗ ಪ್ರತಿಫ‌ಲಿಸುವ ಪ್ರಮುಖ ಘಟ್ಟಗಳು. ಗರ್ಭಿಣಿಯಾಗಿರುವಾಗ ಅನುಭವಿಸಿದ ಒತ್ತಡ ಅಥವಾ ಮಾನಸಿಕ ಸ್ಥಿತಿಗಳಲ್ಲಾದ ಬದಲಾವಣೆ ಪರಿಣಾಮ ಆಕೆಯ ಮೇಲೆ ಅಥವಾ ಆಕೆಯ ಮಗುವಿನ ಮೇಲೆ ಉಂಟಾಗಬಹುದಾಗಿರುತ್ತದೆ.
 
ಇದು ತಾಯಿ ಮತ್ತು ಮಗುವಿನ ಮಧ್ಯೆ ಮಧ್ಯಪ್ರವೇಶಕ್ಕೆ ಕಾರಣವಾಗಬಹುದು ಮತ್ತು ಮಗುವಿನ ಬೆಳವಣಿಗೆಯನ್ನು ಪ್ರಭಾವಿಸಬಹುದು. ಗರ್ಭಿಣಿಯಲ್ಲಿ ಒತ್ತಡ ಉಂಟಾದರೆ ಭ್ರೂಣದ ಮಿದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇರುತ್ತದೆ. 

ಅಷ್ಟಾಂಗ ಯೋಗ
ಮಹರ್ಷಿ ಪತಂಜಲಿಯು ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಅಷ್ಟಾಂಗ ಯೋಗವನ್ನು ವಿವರಿಸುತ್ತಾರೆ. ಅಷ್ಟಾಂಗ ಯೋಗವು ಪ್ರಾಕೃತಿಕ ಸ್ವರೂಪದ್ದಾಗಿದೆ. ಈ ಯೋಗವು ವ್ಯಕ್ತಿತ್ವದ ಪ್ರತಿಯೊಂದು ಅಂಶವನ್ನೂ ವಿಕಸನಗೊಳಿಸುತ್ತದೆ. ಅಷ್ಟಾಂಗಯೋಗವು ಕೇವಲ ಮನಸ್ಸು ಮತ್ತು ದೇಹಕ್ಕೆ ಸೀಮಿತವಾಗುವುದಿಲ್ಲ. ದೇಹ ಹಾಗೂ ಮನಸ್ಸಿನ ಸಮನ್ವಯವನ್ನು ಹೆಚ್ಚಿಸಿ ದೇಹ ಮತ್ತು ಮನಸ್ಸಿನ ದೃಢತೆಯನ್ನು ಹೆಚ್ಚಿಸುತ್ತದೆ.

ಅಷ್ಟಾಂಗ ಯೋಗದಲ್ಲಿ 8 ಅನುಸರಣಾ ತಂತ್ರಗಳಿವೆ. ಅವೆಂದರೆ; ಯಮ, ನಿಯಮ, ಆಸನಗಳು, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ.
1.ಯಮ: ಇದು ನೈತಿಕ ಮೌಲ್ಯಗಳು ಮತ್ತು ಸಮಗ್ರತೆಯ ಭಾವವನ್ನು ಪ್ರತಿನಿಧಿಸುತ್ತದೆ. 5 ಯಮಗಳೆಂದರೆ; ಅಹಿಂಸಾ (ಹಿಂಸೆ ಮಾಡಬಾರದು), ಸತ್ಯ (ಸುಳ್ಳು ಹೇಳಬಾರದು), ಆಸ್ಥೆàಯ (ಕಳ್ಳತನ ಮಾಡಬಾರದು), ಬ್ರಹ್ಮಚರ್ಯ (ಇಂದ್ರಿಯ ನಿಗ್ರಹ), ಅಪರಿಗ್ರಹ (ದುರಾಸೆ ಮಾಡಬಾರದು). 
2.ನಿಯಮ: ಸಮಗ್ರ ಶಿಸ್ತನ್ನು ನಿಯಮ ಎನ್ನುತ್ತಾರೆ. ಅಧ್ಯಾತ್ಮದ ಅನುಸಂಧಾನ, ಧ್ಯಾನದ ಆಚರಣೆ, ಚಿಂತನಶೀಲ ಮನಃಸ್ಥಿತಿ ನಿಯಮಕ್ಕೆ ಸಂಬಂಧಿಸಿವೆ. 5 ನಿಯಮಗಳು ಇವು; ಶೌಚ (ಶುಚಿತ್ವ), ಸಂತೋಷ, ತಪಸ್‌ (ದೇಹ, ಮನಸ್ಸು ಮತ್ತು ಇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸುವುದು.), ಸ್ವಾಧ್ಯಾಯ (ಧಾರ್ಮಿಕ ಗ್ರಂಥಗಳನ್ನು ಮತ್ತು ತನ್ನತನವನ್ನು ಅಧ್ಯಯನ ನಡೆಸುವುದು). ಈಶ್ವರಪ್ರಾಣಿದಾನ ( ದೇವರಿಗೆ ಶರಣಾಗುವುದು)
3.ಆಸನ: ದೈಹಿಕ ಕ್ರಿಯೆಗಳ ಮೂಲಕ ದೇಹ ಮತ್ತು ಮನಸ್ಸನ್ನು ಬೆಸೆಯುವುದು.
4.ಪ್ರಾಣಾಯಾಮ: ದೇಹ ಹಾಗೂ ಮನಸ್ಸಿನ ಏಕಾಗ್ರತೆಗಾಗಿ ಉಸಿರನ್ನು ನಿಯಂತ್ರಿಸುವುದು.
5.ಪ್ರತ್ಯಾಹಾರ: ಬಾಹ್ಯ ಜಗತ್ತಿನ ಚೋದಕಗಳ ಗ್ರಹಿಕೆಯಿಂದ ಇಂದ್ರಿಯಗಳನ್ನು ಮುಕ್ತಗೊಳಿಸುವುದು.
6.ಧಾರಣ: ಏಕಾಗ್ರತೆ. ಮನಸ್ಸನ್ನು ಒಂದೆಡೆ ಕೇಂದ್ರೀಕರಿಸುವುದು.
7.ಧ್ಯಾನ: ಏಕಾಗ್ರತೆ ನಿರಂತರವಾಗಿ ಪ್ರವಿಸುವ ಸ್ಥಿತಿ.
8.ಸಮಾಧಿ: ಆನಂದದ ಪರಮಾವಧಿಯ ಅರಿವಿರುವ ಶಾಂತ ಸ್ಥಿತಿ.

Advertisement

ಯೋಗದ ಬಗೆಗಿನ ಸಾಮಾನ್ಯ ನಂಬಿಕೆಗಳು
1.ಯೋಗದಿಂದ ಆರೋಗ್ಯ
: ಯೋಗದಿಂದಾಗಿ ವ್ಯಕ್ತಿಯ ಆರೋಗ್ಯದಲ್ಲಾಗುವ ಒಳಿತುಗಳು ಮತ್ತು ವೈದ್ಯಕೀಯ ಪ್ರಯೋಜನಗಳ ಬಗ್ಗೆ ಸಾಕಷ್ಟು ವೈಜ್ಞಾನಿಕ ಪುರಾವೆಗಳು ಇದ್ದು ಇವು ಪ್ರಕಟಗೊಂಡಿರುತ್ತವೆ. ಈ ಸಂಬಂಧ ನಡೆಸಲಾದ ಎಲ್ಲ ಅಧ್ಯಯನಗಳು ಯೋಗದಿಂದ ದೈಹಿಕ ಚಟುವಟಿಕೆಗಳ ಹೆಚ್ಚಳದ ಜತೆಗೆ ದೈಹಿಕ ಸಾಮರ್ಥ್ಯ, ಸ್ಥಿತಿಸ್ಥಾಪಕತ್ವ ಮತ್ತು ಸಮತೋಲನ ಸಾಧಿತವಾಗುತ್ತದೆ ಎಂಬುದು ತಿಳಿದುಬಂದಿದೆ. ನಿರ್ದಿಷ್ಟ ವೈದ್ಯಕೀಯ ಪರಿಸ್ಥಿತಿಗಳಲ್ಲಿ ಯೋಗದಿಂದ ವ್ಯಕ್ತಿಗಾದ ಪ್ರಯೋಜನಗಳು ದಾಖಲಾಗಿವೆ. ಒತ್ತಡ ನಿವಾರಣೆಯಲ್ಲಿ ಹಾಗೂ ಬಹುಕಾಲದಿಂದ ಕಾಡುವ ವ್ಯಾಧಿಗಳ ನಿವಾರಣೆಯಲ್ಲಿ ಯೋಗದ ಪ್ರಯೋಜನ ವೈಜ್ಞಾನಿಕವಾಗಿ ಸಾಬೀತುಗೊಂಡಿದೆ.
 
2.ಆತಂಕ, ಖನ್ನತೆ ನಿವಾರಣೆ: ಖನ್ನತೆಯನ್ನು ದೂರ ಮಾಡುವುದಕ್ಕಾಗಿ ವ್ಯಕ್ತಿಯ ದೇಹ ಮತ್ತು ಮನಸ್ಸಿನ ನಡುವೆ ವೈದ್ಯಕೀಯ ಮಧ್ಯಪ್ರವೇಶ ಮಾಡುವುದು ಸಾಮಾನ್ಯವಾಗಿರುತ್ತದೆ. ಈ ರೀತಿಯ ವೈದ್ಯಕೀಯ ಮಧ್ಯಪ್ರವೇಶದಲ್ಲಿ ಯೋಗವನ್ನು ಅತಿ ಹೆಚ್ಚಾಗಿ ಬಳಸಲಾಗುತ್ತದೆ. ಖನ್ನತೆಯನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ಪಾತ್ರವಹಿಸುತ್ತದೆ ಎಂಬುದನ್ನು ಮೆಟಾ ವಿಶ್ಲೇಷಣೆ ಮೂಲಕ ಪರಿಶೀಲಿಸಲಾಗಿದೆ.

ಗರ್ಭಿಣಿಯರ ಯೋಗಾಭ್ಯಾಸಹೇಗೆ? 
ಯೋಗಾಭ್ಯಾಸಕ್ಕಾಗಿ ಮೊದಲು ಶಾಂತ ಸ್ಥಳವೊಂದನ್ನು ಆಯ್ಕೆ ಮಾಡಿ. ಒಂದೋ ಹೊರಗಡೆ ಅಥವಾ ಉತ್ತಮವಾಗಿ ಗಾಳಿಯಾಡುವ ಕೋಣೆ ಆಗಬಹುದು. ಸಡಿಲವಾದ ಹಾಗೂ ಹಿತವಾದ ಬಟ್ಟೆಯನ್ನು ಉಟ್ಟುಕೊಳ್ಳಬೇಕು. ನೆಲದ ಮೇಲೆ ಮ್ಯಾಟ್‌ ಅಥವಾ ಬ್ಲ್ಯಾಂಕೆಟ್‌ನ್ನು ಹಾಕಿಕೊಳ್ಳಬೇಕು. ಇದರಿಂದ ಇನ್ನಷ್ಟು ಹಿತಾನುಭವವಾಗುತ್ತದೆ. ಹೆಚ್ಚಿನ ಬೆಳಕು, ತೊಂದರೆ, ಅಡಚಣೆ ಇರದಂತೆ ನೋಡಿಕೊಳ್ಳಬೇಕು. 

ಯೊಗಾಭ್ಯಾಸವು, ದೇಹವನ್ನು ಸಡಿಲಗೊಳಿಸುವ ಚಟುವಟಿಕೆ, ಉಸಿರಾಟದ ಚಟುವಟಿಕೆ, ಆಸನ, ಅಧೋಮುಖ ಸ್ಥಿತಿಗಳು ಮತ್ತು ಪ್ರಾಣಾಯಾಮಗಳನ್ನು ಹೊಂದಿರುತ್ತದೆ. ರಿಲ್ಯಾಕ್ಸ್‌ ಆಗಿರುವುದಕ್ಕೆ ಯೋಗದಲ್ಲಿ ಮೊದಲ ಆದ್ಯತೆ. ರಿಲ್ಯಾಕ್ಸ್‌ ಆಗಲು ಎರಡು ತಂತ್ರಗಳಿವೆ. ಒಂದು; ಐಆರ್‌ಟಿ: ತತ್‌ಕ್ಷಣ ರಿಲ್ಯಾಕ್ಸ್‌ ಆಗುವ ತಂತ್ರ, ಇನ್ನೊಂದು ಶೀಘ್ರ ರಿಲ್ಯಾಕ್ಸ್‌ ಆಗುವ ತಂತ್ರ. ಇದರೊಂದಿಗೆ ಆಸನ ಹಾಗೂ ಮುದ್ರೆಗಳು ಜಠರ ಕುಹರಗಳನ್ನು ಗಟ್ಟಿಗೊಳಿಸುತ್ತವೆ. ಜಠರ ಕುಹರವು ಗರ್ಭವತಿಗೆ ಅತ್ಯಂತ ಪ್ರಮುಖವಾದ ಅಂಗವಾಗಿದೆ. ಎಚ್ಚರಿಕೆಯಿಂದ ಇರುವುದು ಮತ್ತು ದೇಹದಲ್ಲಿ ಯಾವುದಾದರೂ ವ್ಯತಿರಿಕ್ತ ಬದಲಾವಣೆಗಳಾಗುವುದನ್ನು ಗಮನಿಸುವುದು ಅತಿ ಅಗತ್ಯ. ಮೊದಲು ನಿಮ್ಮ ಕೈಗಳ ಚಲನೆಯನ್ನು ಏಕಾಗ್ರಗೊಳಿಸಲು ಪ್ರಯತ್ನಿಸಿ, ಕಾಲು, ಹೊಟ್ಟೆ ಮತ್ತು ಜಠರದ ಸ್ನಾಯುಗಳು ಯೋಗಾಭ್ಯಾಸದ ವೇಳೆ ಬಳಸಿಕೊಳ್ಳುವ ಅಂಗಾಂಗಗಳು. ಉಸಿರನ್ನು ಒಳಗೆ ತೆಗೆದು ಕೊಳ್ಳುವುದು ಮತ್ತು ಹೊರಗೆ ಬಿಡುವುದನ್ನು – ಒಳಗೆ-ಹೊರಗೆ ಚಟುವಟಿಕೆ ಮೂಲಕ ಪೂರಕವಾಗಿ ನಡೆಸಬೇಕು. ಪೂರ್ಣವಾಗಿ ಉಸಿರಾಡುವುದಕ್ಕೆ ಮಹತ್ವ ನೀಡಬೇಕು. ಅಂಗಗಳ ಚಲನೆಯೊಂದಿಗೆ ಉಸಿರಾಟವನ್ನು ಹೊಂದಿಸಿಕೊಳ್ಳಬೇಕು. 

ಪ್ರಸವ ಪೂರ್ವ ಅವಧಿಯಲ್ಲಿ ಯೋಗದ ಮಹತ್ವ 
ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ, ನರ ಮತ್ತು ಸ್ನಾಯುಗಳ ದೃಢತೆಗೆ, ಮಾನಸಿಕ ಆರೋಗ್ಯಕ್ಕೆ ಹಾಗೂ ನೋವು ನಿವಾರಣೆಗೆ ಯೋಗಾಭ್ಯಾಸವನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಯೋಗಾಭ್ಯಾಸದಿಂದ ಗರ್ಭಿಣಿ ಅವಸ್ಥೆಯಲ್ಲಿ, ಪ್ರಸವಕ್ಕೆ ಸಂಬಂಧಿಸಿದಂತೆ ಹಲವಾರು ಅನುಕೂಲಗಳಿವೆಯೆಂದು ದೃಢಪಟ್ಟಿದೆ. ಪ್ರಾಣಾಯಾಮ ಹಾಗೂ ಧ್ಯಾನವು ಗರ್ಭವತಿಯರ ಆರೋಗ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಅವರು ರಿಲ್ಯಾಕ್ಸ್‌ ಆಗಿ ಇರುವಂತೆ ಮಾಡುತ್ತವೆ. ಜತೆಗೆ ಪ್ರಸವಕ್ಕಾಗಿ ಅವರನ್ನು ಮಾನಸಿಕವಾಗಿ ತಯಾರುಗೊಳಿಸುತ್ತದೆ. ಕೆಲವು ನಿರ್ದಿಷ್ಟ ಆಸನಗಳು ಭ್ರೂಣ ಸರಿಯಾದ ಸ್ಥಳದಲ್ಲಿ ಇರುವುದಕ್ಕೆ ಪೂರಕವಾಗಿವೆ. 

ಪ್ರಯೋಜನಗಳು
ಈ ಕೆಳಗಿನ ಕೆಲವೊಂದು ಯೋಗ ಥೆರಪಿಗಳು ಗರ್ಭಿಣಿ ಆರೋಗ್ಯವಂತೆಯಾಗಿರಲು  ಮತ್ತು ಗರ್ಭಿಣಿಯು ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಯ್ದುಕೊಳ್ಳಲು ಅತ್ಯಂತ ಸಹಕಾರಿಯಾಗಿವೆ. ಈ ಯೋಗ ತಂತ್ರಗಳು ಗರ್ಭಿಣಿಯರ ದೇಹ ವ್ಯವಸ್ಥೆಯನ್ನು ಆರೋಗ್ಯಪೂರ್ಣಗೊಳಿಸಿ ಈ ಕ್ಲಿಷ್ಟತೆಗಳನ್ನು ದೂರ ಮಾಡುತ್ತವೆ. ಈ ಕ್ಲಿಷ್ಟತೆಗಳೆಂದರೆ; ಪ್ರೀಕ್ಲೇಮಿÏಯಾ, ಜಸ್ಟೇಶನಲ್‌ ಡಯಾಬಿಟಿಸ್‌, ಪ್ರಸವ ಪೂರ್ವ ಅವಧಿಯಲ್ಲಿ ತೂಕದ ಹೆಚ್ಚಳ, ಆ್ಯಂಟೆಪಾರ್ಟಮ್‌ ಹ್ಯಾಮರೇಜ್‌, ಪೋಸ್ಟ್‌ಪಾರ್ಟಮ್‌ ಹ್ಯಾಮರೇಜ್‌. 

ಈ ಆಸನಗಳನ್ನು ಮಾಡಿ    
ಈ ಆಸನಗಳು ಪ್ಯೂಬೊಕೊಸ್ಸೀಜಿಯಲ್‌ ಸ್ನಾಯುಗಳನ್ನು ಗರ್ಭಿಣಿಯರ ಸಾಮಾನ್ಯ ಆರೋಗ್ಯಕ್ಕೆ ಹಾಗೂ ಪ್ರಸವಕ್ಕೆ ಪೂರಕವಾಗಿರುವಂತೆ ನೋಡಿಕೊಳ್ಳುತ್ತವೆ. ಅವೆಂದರೆ, ತಾಡಾಸನ, ತ್ರಿಕೋನಾಸನ, ಅರ್ಧಕಟಿಚಕ್ರಾಸನ, ವಜ್ರಾಸನ, ಬದ್ಧಕೋನಾಸನ, ಅನುಲೋಮ ವಿಲೋಮ, ಬ್ರಾಹ್ಮರಿ ಪ್ರಾಣಾಯಾಮ ಹಾಗೂ ಶವಾಸನ. ಈ ಆಸನ ಹಾಗೂ ಪ್ರಾಣಾಯಾಮಗಳು ಗರ್ಭವತಿಯರ ಆರೋಗ್ಯಕ್ಕೆ ಪೂರಕ ಎಂಬುದು ದೃಢಪಟ್ಟಿರುತ್ತದೆ. ಈ ಆಸನ ಹಾಗೂ ಪ್ರಾಣಾಯಾಮಗಳು ಪ್ರಸವ ಪೂರ್ವ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ಹೆರಿಗೆ ಹಾಗೂ ಉತ್ತಮ ತಾಯ್ತನಕ್ಕೆ ಪೂರಕ ಆರೋಗ್ಯವನ್ನು ಹೊಂದಲು ಸಹಕಾರಿಯಾಗಿವೆ. ಈ ಯೋಗಾಸನ ಹಾಗೂ ಪ್ರಾಣಾಯಾಮಗಳು ಮಾಡುವ ಗರ್ಭಿಣಿಯರಲ್ಲಿ ಒತ್ತಡ ಕಡಿಮೆ ಆಗಿರುವುದು ಸಾಕಷ್ಟು ಅಧ್ಯಯನಗಳಿಂದ ಸಾಬೀತಾಗಿದೆ. 

– ಡಾ| ಮರಿಯ ಪಾಯ್ಸ ,   
ಆಸಿಸ್ಟೆಂಟ್‌ ಪ್ರೊಫೆಸರ್‌,
ಮಣಿಪಾಲ್‌ ಕಾಲೇಜ್‌ ಆಫ್ ನರ್ಸಿಂಗ್‌, ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next