Advertisement

ಯೋಗ ಪ್ರಕಾರ ಹಲವಿದ್ದರೂ ಸದೃಢ ಆರೋಗ್ಯವೇ ಸಂಕಲ್ಪ

11:19 AM Jun 29, 2019 | Team Udayavani |

ಮಂಗಳೂರು: ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಸಾಮಾಜಿಕ ಆರೋಗ್ಯ, ಆಧ್ಯಾತ್ಮಿಕ ಆರೋಗ್ಯ, ನಮ್ಮೊಳಗಿನ ದೈವಿಕತೆಯ ಆತ್ಮ ಸಾಕ್ಷಾತ್ಕಾರಕ್ಕೆ ಯೋಗ ದಿವ್ಯ ಔಷಧಿ. ಇದರಲ್ಲಿ ನಾನಾ ಪ್ರಕಾರಗಳಿರಬಹುದು. ಅಂತಿಮವಾಗಿ ಫಲಿತಾಂಶ ನಮ್ಮ ಸಿದ್ಧಿ.

Advertisement

ಯೋಗಗಳ ಪೈಕಿ ಹಠಯೋಗ, ಅಷ್ಟಾಂಗ ಯೋಗ, ಅಯ್ಯಂಗಾರ್‌ ಯೋಗ, ಆರ್ಟ್‌ ಆಫ್‌ ಲಿವಿಂಗ್‌ ಇತ್ಯಾದಿಗಳ ಬಗ್ಗೆ ನಾವು ಕೇಳಿದ್ದೇವೆ. ಇವುಗಳ ನಡುವೆ ವ್ಯತ್ಯಾಸವೇನಾದರು ಇದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಇದರ ವಿಶ್ಲೇಷಣೆ ಹೀಗೆ ಮಾಡಬಹುದು.

ಹಠ ಯೋಗ
ಹಠ ಯೋಗವು ಯೋಗದ ಒಂದು ಶಾಖೆ. ಭಾರತದಲ್ಲಿ ಯೋಗವು ಮಚ್ಚೇಂದ್ರನಾಥ್‌ ಮೂಲಕ ನಾಥ ಸಂಪದದ ಯೋಗಿಗಳೊಂದಿಗೆ ಸಂಬಂಧ ಹೊಂದಿದೆ. ಹಠ ಎಂಬ ಸಂಸ್ಕೃತ ಪದದ ಅರ್ಥ ಬಲ ಮತ್ತು ಭೌತಿಕ ತಂತ್ರಗಳ ವ್ಯವಸ್ಥೆಯನ್ನು ಸೂಚಿಸುತ್ತದೆ. ಈ ಪದವು ಉದ್ದೇಶಪೂರ್ವಕ ಯಾ ಬಲವಂತ ಎಂದು ಅರ್ಥೈಸಲಾಗಿದೆ. ಹಠಯೋಗದ ಅಭ್ಯಾಸವು ಎಲ್ಲ ದೈಹಿಕ ಕಾರ್ಯಗಳನ್ನು ಒಳಗೊಂಡಂತೆ ಭೌತಿಕ ದೇಹದ ಸಂಪೂರ್ಣ ಪಾಂಡಿತ್ಯವನ್ನು ಕೇಂದ್ರೀಕರಿಸುತ್ತದೆ. ಕುಂಡಲಿನಿಯನ್ನು ಜಾಗೃತಗೊಳಿಸಲು ಮತ್ತು ರೋಗ ನಿರ್ಮೂಲನೆ, ಆಧ್ಯಾತ್ಮಿಕ ಮತ್ತು ದೈಹಿಕ ಸ್ವಾಸ್ಥ್ಯವನ್ನು ಉತ್ತೇಜಿಸಲು ಚಕ್ರಗಳನ್ನು ಸಕ್ರಿಯಗೊಳಿಸುವುದಕ್ಕೂ ಇದು ಒತ್ತು ನೀಡುತ್ತದೆ.

ಅಷ್ಟಾಂಗ ಯೋಗ
ಅಷ್ಟಾಂಗ ಯೋಗವನ್ನು ಕೆಲವೊಮ್ಮೆ ಅಷ್ಟಾಂಗ ವಿನ್ಯಾಸ ಯೋಗ ಎಂದು ಕರೆಯಲಾಗುತ್ತದೆ. 20ನೇ ಶತಮಾನದಲ್ಲಿ ಕೆ. ಪಟ್ಟಾಭಿ ಜೋಯಿಸ್‌ ಮತ್ತು ಟಿ. ಕೃಷ್ಣಮಾಚಾರ್ಯರು ಅಭಿವೃದ್ಧಿಪಡಿಸಿದ ಯೋಗ ಶೈಲಿಯಿದು. ಅಷ್ಟಾಂಗ ಯೋಗವು ಕ್ರಿಯಾತ್ಮಕ, ಹರಿಯುವ ಶೈಲಿಯಾಗಿದ್ದು ಅದು ದೇಹದ ಚಲನೆಯನ್ನು ಉಸಿರಾಟದೊಂದಿಗೆ ಸಂಪರ್ಕಿಸುತ್ತದೆ. ಪತಂಜಲಿ ಯೋಗ ಸೂತ್ರದಲ್ಲಿ ಅಷ್ಟಾಂಗ ಎಂಬ, ಸಂಸ್ಕೃತದಲ್ಲಿ ಎಂಟು ಕಾಲುಗಳು ಎಂಬ ಅರ್ಥದಲ್ಲಿ ನೀಡಲಾದ ಪದಕ್ಕೆ ಅಷ್ಟಾಂಗ ಯೋಗ ಎಂದು ಹೆಸರಿಡಲಾಗಿದೆ.

ಅಯ್ಯಂಗಾರ್‌ ಯೋಗ
ಬಿ.ಕೆ.ಎಸ್‌. ಅಯ್ಯಂಗಾರ್‌ ಪ್ರಖ್ಯಾತ ಯೋಗ ಸಾಧಕರು. ಅಯ್ಯಂಗಾರ್‌ ಯೋಗ ಹಠ ಯೋಗದ ಒಂದು ರೂಪ. ಇದು ಆಸನ, ಪ್ರಾಣಾಯಾಮ ವಿವರ, ನಿಖರತೆ ಮತ್ತು ಜೋಡಣೆಗೆ ಒತ್ತು ನೀಡುತ್ತದೆ. ಆಸನಗಳ ಮೂಲಕ ಚಲನಶೀಲತೆ ಮತ್ತು ಸ್ಥಿರತೆಯನ್ನು ಪಡೆಯಲಾಗುತ್ತದೆ.

Advertisement

ಆರ್ಟ್‌ ಆಫ್‌ ಲಿವಿಂಗ್‌
ಇದನ್ನು ಆಧ್ಯಾತ್ಮಿಕ ಗುರು ಶ್ರೀ ರವಿಶಂಕರ್‌ ಸ್ಥಾಪಿಸಿದ್ದಾರೆ. ಈ ಅಡಿಪಾಯವು ಒತ್ತಡ ರಹಿತ, ಆರೋಗ್ಯಕರ ಜೀವನ ನಡೆಸಲು ಪ್ರೇರೇಪಿಸುವ ಮೂಲಕ ಜನರಿಗೆ ಸ್ಫೂರ್ತಿ ನೀಡುತ್ತದೆ. ಇದರಲ್ಲಿ ಭಂಗಿಗಳು, ಉಸಿರಾಟದ ತಂತ್ರಗಳು ಮತ್ತು ತೀವ್ರ ಧ್ಯಾನ ಪ್ರಧಾನ.

ಗೋಪಾಲಕೃಷ್ಣ ದೇಲಂಪಾಡಿ
38 ವರ್ಷಗಳಿಗೂ ಹೆಚ್ಚು ಸಮಯ ಯೋಗಕಲೆಯ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಹುಟ್ಟಿದ್ದು 1958ರಲ್ಲಿ ಕಾಸರಗೋಡಿನ ದೇಲಂಪಾಡಿಯಲ್ಲಿ. ಈವರೆಗೆ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚಿನ ಮಂದಿಗೆ ಉಚಿತ ಯೋಗ ತರಬೇತಿ ನೀಡಿದ್ದಾರೆ. 1977ರಲ್ಲಿ ಪ್ರಥಮ ಯೋಗ ಪ್ರದರ್ಶನ ನೀಡಿದ ಇವರು 1983ರಿಂದ ಉಚಿತ ಯೋಗ ಶಿಬಿರ ನಡೆಸುತ್ತಿದ್ದಾರೆ. 2004ರಲ್ಲಿ ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪುರುಷರ ತಂಡದ ಮ್ಯಾನೇಜರ್‌ ಆಗಿ ಕೆಲಸ ನಿರ್ವಹಿಸಿದ್ದಾರೆ. ರಾಷ್ಟ್ರ, ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಹಲವು ಬಾರಿ ನಿರ್ಣಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next