ಮೂಡುಬಿದಿರೆ: ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡುಬಿದಿರೆ ಮಂಡಲ ಹಾಗೂ ಪತಂಜಲಿ ಯೋಗ ಸಮಿತಿ ಇವುಗಳ ಸಹಭಾಗಿತ್ವದಲ್ಲಿ ವಿಶ್ವ ಯೋಗ ದಿನಾಚರಣೆ ಸಮುದಾಯ ಆರೋಗ್ಯ ಕೇಂದ್ರದ ಬಳಿಯ ಶ್ಯಾಮಿಲಿ ಎನ್ ಕ್ಲೇವ್ ನಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯನ್ನು ಶಾಸಕ ಉಮಾನಾಥ್ ಕೋಟ್ಯಾನ್ ಅವರು ಉದ್ಘಾಟಿಸಿದರು.
ಪತಂಜಲಿ ಯೋಗವನ್ನು ಬಾಬಾ ರಾಮದೇವ್ ಭಾರತದಲ್ಲಿ ಪ್ರಸಾರಮಾಡಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಯೋಗವನ್ನು ವಿಶ್ವಮಾನ್ಯ ಗೊಳಿಸಿದವರು. ಏಳು ವರ್ಷಗಳ ಹಿಂದೆ ಜೂ.21ರಂದು ಪ್ರಥಮಬಾರಿಗೆ ವಿಶ್ವ ಯೋಗ ದಿನ ಆಚರಣೆಗೆ ನಾಂದಿ ಹಾಡಿದರು.ಯೋಗವು ಕೊರೊನಾ ದಂಥ ರೋಗನ್ನು ಎದುರಿಸುವ ಶಕ್ತಿ ಹೊಂದಿದೆ ಎಂದು ಉಮಾನಾಥ ಕೋಟ್ಯಾನ್ ಅಭಿಪ್ರಾಯ ಪಟ್ಟರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್ ಎಂ ಮಾತನಾಡಿ, ಮನಸ್ಸನ್ನು ದೇಹದೊಂದಿಗೆ ಸೇರಿಸುವುದೇ ಯೋಗ; ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಶಕ್ತಿ ಬೆಳೆಸಿಕಳ್ಳಲು ಯೋಗ ಸಹಾಯಕ. ಯೋಗದ ಸಮರ್ಪಕ ಅನುಷ್ಠಾನದಿಂದ ಆತ್ಮವು ಪರಮಾತ್ಮವಾಗಲು ಸಾಧ್ಯ ಎಂದರು.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಪತಂಜಲಿ ಯೋಗ ಸಮಿತಿ ಸದಸ್ಯರು, ನ್ಯಾಯವಾದಿ ಶಾಂತಿಪ್ರಸಾದ್ ಹೆಗ್ಡೆ, ಪ್ರಮುಖರಾದ ಲಕ್ಷ್ಮಣ ಪೂಜಾರಿ, ಗೋಪಾಲ್ ಶೆಟ್ಟಿಗಾರ್, ಸಾತ್ವಿಕ್ ಮಲ್ಯ, ಪತಂಜಲಿ ಯೋಗ ಸಮಿತಿಯ ತಾಲೂಕು ಸಂಯೋಜಕಿ ಸವಿತಾ, ಪುರಸಭಾ ಸದಸ್ಯರುಗಳು, ಯೋಗ ಗುರುಗಳಾದ ಶರತ್, ಕಿಶೋರ್, ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಕಾರ್ಯದರ್ಶಿ ಗೋಪಾಲ ಶೆಟ್ಟಿಗಾರ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಮುನ್ನ ಪತಂಜಲಿ ಯೋಗ ಸಮಿತಿಯ ವಿವಿಧ ಅಭ್ಯಾಸಕೇಂದ್ರಗಳ ಸದಸ್ಯರು ಯೋಗ, ಪ್ರಾಣಾಯಾಮ ಪ್ರಸ್ತುತ ಪಡಿಸಿದರು.