Advertisement

ಯೋಗದಿಂದ ಪರಿಪೂರ್ಣ ಆರೋಗ್ಯ: ಪುಟ್ಟರಾಜು

11:07 AM Jun 22, 2019 | keerthan |

ಬೆಳ್ತಂಗಡಿ: ವೈಜ್ಞಾನಿಕ ವಾಗಿ ನಾವು ಎಷ್ಟೇ ಮುಂದು ವರಿದರೂ ದೈಹಿಕ ಮತ್ತು ಮಾನಸಿಕ ವಾಗಿ ಪರಿಪೂರ್ಣ ಆರೋಗ್ಯ ಕಾಯ್ದುಕೊಳ್ಳಲು ಯೋಗ ಸಹಕಾರಿ ಎಂಬುದನ್ನು ಅರ್ಥೈಸಿಕೊಳ್ಳಬೇಕಾ ಗಿದೆ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್‌. ಪುಟ್ಟರಾಜು ಹೇಳಿದರು.

Advertisement

ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ ಹಾಗೂ ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಜಂಟಿ ಆಶ್ರಯದಲ್ಲಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶುಕ್ರವಾರ ನಡೆದ 5ನೇ ವಿಶ್ವಯೋಗ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಔಷಧ ರಹಿತ ಚಿಕಿತ್ಸೆ
ನಾನು 13 ವರ್ಷಗಳ ಹಿಂದೆ ಇಲ್ಲಿನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯಕ್ಕೆ ಬಂದಿದ್ದೆ. ಪತ್ನಿ ವರ್ಷಕ್ಕೊಮ್ಮೆ ಬಂದು ಚಿಕಿತ್ಸೆ ಪಡೆಯುತ್ತಾರೆ. ಯಾವುದೇ ಔಷಧವಿಲ್ಲದೆ ಆಹಾರ ಹಾಗೂ ಯೋಗಗಳ ಮೂಲಕ ಆರೋಗ್ಯವನ್ನು ಕಾಪಾಡುವ ಇಲ್ಲಿನ ಕ್ರಮವನ್ನು ಇಂದಿಗೂ ಅನುಸರಿಸುತ್ತಿದ್ದೇನೆ ಎಂದು ಹೇಳಿದರು.

ನೀರಿನ ಅಭಾವಕ್ಕೆ ಕ್ರಮ
ವಾರಗಳ ಹಿಂದೆ ಕ್ಷೇತ್ರದಲ್ಲಿ ನೀರಿನ ಅಭಾವದಿಂದ ಭಕ್ತರಿಗೆ ಸಾಕಷ್ಟು ತೊಂದರೆಯಾಗಿತ್ತು. ಈ ವಿಷಯ ತಿಳಿದ ಮುಖ್ಯಮಂತ್ರಿಗಳು ತತ್‌ಕ್ಷಣ ತರ್ತು ಸಭೆ ಕರೆದು ಕ್ಷೇತ್ರಕ್ಕೆ ನೀರು ಒದಗಿಸಲು ಕ್ರಮ ಕೈಗೊಂಡಿದ್ದಾರೆ ಎಂದರು. ಡಾ| ಹೆಗ್ಗಡೆಯವರು ರಾಜ್ಯದ ವಿವಿಧೆಡೆ ನೀರಿನ ಅಭಾವಿರುವಲ್ಲಿ ಶ್ರೀ ಕ್ಷೇತ್ರದ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕುಡಿಯುವ ನೀರಿನ ಪೂರೈಕೆ ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಯೋಗ ಭಾರತದ ಆಸ್ತಿ. ಅದೀಗ ಜಗತ್ತಿನಾದ್ಯಂತ ಪಸರಿಸುವ ಮೂಲಕ ಭಾರತವು ಮತ್ತೂಮ್ಮೆ ವಿಶ್ವಗುರುವಾಗಿದೆ. ಯೋಗವನ್ನು ಯಾವುದೇ ಬಜೆಟ್‌ ಇಲ್ಲದೇ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದರು.

Advertisement

ಮುಖ್ಯಮಂತ್ರಿ/ಭಕ್ತರ ಸ್ಪಂದನೆಗೆ ಅಭಾರಿ
ಬೇಸಗೆ ಕೊನೆಯಲ್ಲಿ ಶ್ರೀ ಕ್ಷೇತ್ರದಲ್ಲಿ ನೀರಿನ ಅಭಾವ ಉಂಟಾಗಿತ್ತು. ಭಕ್ತರಿಗೆ ಅನನುಕೂಲ ಆಗದಿರಲೆಂದು ಪ್ರವಾಸ ಮುಂದೂಡುವಂತೆ ವಿನಂತಿಸಲಾಗಿತ್ತು. ಮುಖ್ಯಮಂತ್ರಿ ಗಳು ಸಮಸ್ಯೆಗೆ ತತ್‌ಕ್ಷಣ ಸ್ಪಂದಿಸಿ ನೇತ್ರಾವತಿ ಮತ್ತು ನೆರಿಯ ನದಿಗೆ ಕಿಂಡಿ ಅಣೆಕಟ್ಟು ಮಂಜೂರು ಮಾಡಿದ್ದಾರೆ. ಕ್ಷೇತ್ರದ ಪರಿಸ್ಥಿತಿಯನ್ನು ಮನಗಂಡ ಅನೇಕ ಭಕ್ತರು ಟ್ಯಾಂಕರ್‌ ಹಾಗೂ ಕ್ಯಾನ್‌ಗಳಲ್ಲಿ ನೀರನ್ನು ಕೊಡುಗೆಯಾಗಿ ನೀಡಿದ್ದಾರೆ. ಅವರ ಭಕ್ತಿ – ಶ್ರದ್ಧೆಗೆ ಕ್ಷೇತ್ರ ಆಭಾರಿ ಎಂದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.ಯ ಉಪಕುಲಪತಿ ಡಾ| ಎಸ್‌. ಸಚ್ಚಿದಾನಂದ, ಶಾಸಕ ಹರೀಶ್‌ ಪೂಂಜ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಮತ್ತು ಸಿಂಡಿಕೇಟ್‌ ಬ್ಯಾಂಕಿನ ಮಹಾ ಪ್ರಬಂಧಕ ಭಾಸ್ಕರ ಹಂದೆ. ಎಸ್‌ಡಿಎಂ ಎಜುಕೇಶನಲ್‌ ಸೊಸೈಟಿಯ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಶಾಂತಿವನ ಟ್ರಸ್ಟ್‌ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ, ಯೋಗ ಮತ್ತು ನೈತಿಕ ಶಿಕ್ಷಣ ವಿಭಾಗದ ನಿರ್ದೇಶಕ ಶಶಿಕಾಂತ್‌ ಜೈನ್‌, ಉಜಿರೆ ಎಸ್‌ಡಿಎಂ ಸಿಎನ್‌ವೈಎಸ್‌ನ ಪ್ರಾಂಶುಪಾಲ ಡಾ| ಪ್ರಶಾಂತ್‌ ಶೆಟ್ಟಿ ಉಪಸ್ಥಿತರಿದ್ದರು.
ಒಂದು ಸಾವಿರ ವಿದ್ಯಾರ್ಥಿಗಳು ವಿವಿಧ ಯೋಗಗಳನ್ನು ಪ್ರಸ್ತುತ ಪಡಿಸಿದರು.

ತನುಶ್ರೀ ಯೋಗರತ್ನ
ಹೃದಯಕ್ಕಾಗಿ ಯೋಗ ಎಂಬ ಧ್ಯೇಯದಡಿ ಆಚರಿಸಲಾದ 5ನೇ ವಿಶ್ವ ಯೋಗ ಸಮಾರಂಭವನ್ನು ಹೇಮಾವತಿ ವೀ. ಹೆಗ್ಗಡೆಯವರು ಉದ್ಘಾಟಿಸಿದರು. ಯೋಗದಲ್ಲಿ 4 ವಿಶ್ವ ದಾಖಲೆ ಹಾಗೂ ಗಿನ್ನೆಸ್‌ ದಾಖಲೆ ಮಾಡಿದ 6ನೇ ತರಗತಿ ವಿದ್ಯಾರ್ಥಿನಿ ಯೋಗಪಟು ತನುಶ್ರೀ ಪಿತ್ರೋಡಿ ಅವರಿಗೆ ಯೋಗರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next