ಕಾಟುಕುಕ್ಕೆ: ಯೋಗವನ್ನು ಜೀವನದಲ್ಲಿ ಅಳವಡಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕಾಯಿಲೆ ಹತ್ತಿರ ಸುಳಿಯದಂತೆ ಚೈತನ್ಯ ತುಂಬುವ, ಮನಸ್ಸು ಸದೃಢಗೊಳಿಸಬಲ್ಲ ಶಕ್ತಿ ಯೋಗಕ್ಕಿದೆ. ಹೀಗಾಗಿ ವಿದ್ಯಾರ್ಥಿಗಳು ಯೋಗ ಮಾಡಿ ಆರೋಗ್ಯ ಪಡೆಯಿರಿ ಎಂದು ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಪ್ರಿನ್ಸಿಪಾಲ್ ಪದ್ಮನಾಭ ಶೆಟ್ಟಿ ಕರೆಕೊಟ್ಟರು.ಅವರು ಎನ್‌ಎಸ್‌ಎಸ್ ನೇತೃತ್ವದಲ್ಲಿ ನಡೆದ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯವಾಗಿ ಮನುಷ್ಯನಿಗೆ ಸಮಯದ ಕೊರತೆ ಕಾಡುತ್ತಿದೆ. ಹೀಗಾಗಿ ಯೋಗ ಮಾಡಲು ಸಮಯವೇ ಸಿಗುವುದಿಲ್ಲ. ಕಡಿಮೆ ಸಮಯದಲ್ಲಿ ಯೋಗ ಮಾಡಿ ಅದರಿಂದ ಹೆಚ್ಚಿನ ಫಲಿತಾಂಶ ಬರಬೇಕು ಎನ್ನುತ್ತಾರೆ. ಆದರೆ ಅದು ಸಾಧ್ಯವಿಲ್ಲ. ಯೋಗವನ್ನು ನಾವು ಜೀವನದ ಒಂದು ಭಾಗವಾಗಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯ ಶಾಸ್ತ್ರ ಅಧ್ಯಾಪಿಕೆ ರಮಣಿ ಎಂ.ಎಸ್. ಮಾತನಾಡಿ, ಯೋಗವು ವಿಶ್ವಕ್ಕೆ ಭಾರತದ ಕೊಡುಗೆ. ಇಂದು 177 ರಾಜ್ಯಗಳು ಯೋಗ ದಿನವನ್ನು ಆಚರಿಸುತ್ತಿರುವುದು ಭಾರತಕ್ಕೆ ಹೆಮ್ಮೆಯ ವಿಷಯ ಎಂದರು. ಕಾರ್ಯಕ್ರಮದಲ್ಲಿ ಸಮಾಜ ಶಾಸ್ತ್ರ ಅಧ್ಯಾಪಕ ರಾಜೇಶ್ ಸಿ.ಎಚ್., ಹಿಂದಿ ಅಧ್ಯಾಪಕರಾದ ಗೋವಿಂದನ್ ನಂಬೂದಿರಿ, ಸಂಸ್ಕೃತ ಅಧ್ಯಾಪಕರಾದ ಕೃಷ್ಣನ್ ನಂಬೂದಿರಿ ಉಪಸ್ಥಿತರಿದ್ದರು.
ಇಂಗ್ಲಿಷ್ ಅಧ್ಯಾಪಕರಾದ ಬಾಲಕೃಷ್ಣ ಎಂ ಸ್ವಾಗತಿಸಿದರು. ಕನ್ನಡ ಅಧ್ಯಾಪಿಕೆ ಸರಸ್ವತಿ ಪ್ರಸನ್ನ ವಂದಿಸಿದರು. ಎನ್‌ಎಸ್‌ಎಸ್ ಯೋಜನಾ ಧಿಕಾರಿ ಮಹೇಶ್ ಏತಡ್ಕ ಕಾರ್ಯಕ್ರಮ ನಿರೂಪಿಸಿದರು.
ಯೋಗ ತರಬೇತುದಾರ ಶಶಿಧರ್ ನೀರ್ಚಾಲ್ ಯೋಗವನ್ನು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯೊಂದಿಗೆ ಮಾರ್ಗದರ್ಶನವಿತ್ತರು. ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿದ್ಯಾರ್ಥಿಗಳಿಗಾಗಿ ಯೋಗದ ಬಗ್ಗೆ ಪೋಸ್ಟರ್ ತಯಾರಿಸುವ ಸ್ಪರ್ಧೆ ನಡೆಸಲಾಯಿತು. ವಿದ್ಯಾರ್ಥಿಗಳಾದ ಕವಿತಾ ಎಸ್. ಪೈ, ಅಹಮ್ಮದ್ ಮಶೂಕ್, ಆಯಿಷತ್ ಶಾಹಾಮ ನೇತೃತ್ವ ವಹಿಸಿದರು.