ಹುಮನಾಬಾದ್: ಆರೋಗ್ಯವೇ ಭಾಗ್ಯ. ಆರೋಗ್ಯವನ್ನು ಕಾಪಾಡಿಕೊಳ್ಳಲು ನಿತ್ಯವೂ ಕೆಲವು ಅಭ್ಯಾಸಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳುವುದು ಅಗತ್ಯವಾಗಿದ್ದು, ಪ್ರತಿನಿತ್ಯ ಯೋಗ ಮಾಡುವುದು ರೂಢಿಸಿಕೊಳ್ಳಬೇಕು. ಸರ್ಕಾರದಿಂದ ವಿಶೇಷ ಯೋಗ ತರಬೇತಿ ಕೇಂದ್ರಗಳು ಆರಂಭಿಸಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಅಭಿಪ್ರಾಯಪಟ್ಟರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನ ಹತ್ತಿರದ ದಿ। ಬಸವರಾಜ ಪಾಟೀಲ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ ಹಾಗೂ ಆಯುಷ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚಾರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ದಿನಾಚರಣೆಯ ನಿಮಿತ್ಯ ಒಂದು ದಿನ ಯೋಗ ಮಾಡಿದರೆ ಸಾಲದು, ಯೋಗವನ್ನು ಪ್ರತಿಯೊಬ್ಬರು ತರಬೇತಿ ಪಡೆದು ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ತರಬೇತಿ ಕೇಂದ್ರಗಳು ಆರಂಭವಿಸಬೇಕು ಎಂದ ಅವರು, ಇಂದು ಇಡೀ ವಿಶ್ವವೇ ಯೋಗಕ್ಕೆ ಮಹತ್ವ ನೀಡುತ್ತಿದ್ದು, ಭಾರತೀಯರಾದ ನಾವುಗಳು ಕೂಡ ಯೋಗ ಆಚರಿಸಿಕೊಂಡು ಬೆಳೆಸಬೇಕು ಎಂದರು.
ಇಂದಿನ ದಿನಗಳಲ್ಲಿ ಒತ್ತಡವಿಲ್ಲದ ಕೆಲಸವೇ ಇಲ್ಲ, ಒತ್ತಡವಿಲ್ಲದ ದಿನವೂ ಇಲ್ಲ. ಮಾನಸಿಕ ಒತ್ತಡ ನಮ್ಮ ಜೀವನದ ಒಂದು ಅಂಗವಾಗಿ ಬಿಟ್ಟಿದೆ. ಮಾನಸಿಕ ಒತ್ತಡಕ್ಕೆ ಮಣಿಯದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಾನಸಿಕ ಸ್ಥೈರ್ಯ ಹೆಚ್ಚು ಅಗತ್ಯವಿದ್ದು, ಅದು ಯೋಗದಿಂದ ಸಾಧ್ಯವಿದೆ ಎಂದರು. ನಮ್ಮ ಹಿರಿಯರು ನೂರಾರು ವರ್ಷಗಳ ಕಾಲ ಬದುಕಿ ಜೀವನ ಮಾಡುತ್ತಿದ್ದರು ಅದಕ್ಕೆ ಯೋಗ-ಆಧ್ಯಾತ್ಮ ಮುಖ್ಯವಾಗಿತ್ತು. ಹಳೆ ಪದ್ಧತಿ ನಾವು ಕೂಡ ಅನುಸರಿಸುವ ಕಡೆಗೆ ಮುಖ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧ್ಯಾನ ಪರಿಷತ್ ಸದಸ್ಯ ಡಾ। ಚಂದ್ರಶೇಖರ ಪಾಟೀಲ, ಟಿಎಪಿಎಂಎಸ್ ಅಧ್ಯಕ್ಷ ಅಭಿಷೇಕ್ ಪಾಟೀಲ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮುರಿಗೆಪ್ಪ ವಸ್ತ್ರದ, ಡಾ। ಗೊವಿಂದ್, ಡಾ। ದಯಾನಂದ ಕಾರಬಾರಿ, ಡಾ। ಚಂದ್ರಶೇಖರ ಅಮ್ಲಾಪೂರೆ, ಡಾ। ಖದೀಜಾ ಬೇಗಂ, ಅರಣ್ಯಾಧಿಕಾರಿ ಬಸವರಾಜ ಡಾಂಗೆ ಸೇರಿದಂತೆ ಅನೇಕರು ಇದ್ದರು.