ಬಾಗಲಕೋಟೆ: ನಗರದ ಬಿವಿವಿ ಸಂಘದಿಂದ ಜೂ. 21ರಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸಂಸ್ಥೆಯ 3 ಸಾವಿರ ಸಿಬ್ಬಂದಿ ಹಾಗೂ 10 ಸಾವಿರ ವಿದ್ಯಾರ್ಥಿಗಳಿಂದ ಏಕ ಕಾಲಕ್ಕೆ ಯೋಗಾಭ್ಯಾಸ ನಡೆಯಲಿದೆ ಎಂದು ಬಿವಿವಿ ಸಂಘದ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ| ಮಹಾಂತೇಶ ಸಾಲಿಮಠ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ. 21ರಂದು ಬೆಳಗ್ಗೆ ಬಿವಿವಿ ಸಂಘದ ಮುಖ್ಯ ಆಡಳಿತ ಕಚೇರಿ ಆವರಣ, ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಹಾಗೂ ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜು ಆವರಣ ಸೇರಿ ಒಟ್ಟು ಮೂರು ಕಡೆ ಯೋಗ ದಿನಾಚರಣೆ ನಡೆಯಲಿದೆ ಎಂದರು.
ವೈದ್ಯಕೀಯ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ ನೇತೃತ್ವ ವಹಿಸಲಿದ್ದು, ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ಆವರಣ ದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಸ್.ಎಸ್. ಕುಪ್ಪಸ್ತ ನೇತೃತ್ವ ವಹಿಸುವರು. ಮುಖ್ಯ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಾ|ಆರ್.ಬಿ. ಹೊಸಮನಿ ಯೋಗ ತರಬೇತಿ ನೀಡುವರು. ಈ ಮೂರು ಕಡೆ ನಡೆಯುವ ಕಾರ್ಯಕ್ರಮದಲ್ಲಿ ಸಂಘದ ವಿವಿಧ ಶಾಲಾ- ಕಾಲೇಜುಗಳ 3 ಸಾವಿರ ಸಿಬ್ಬಂದಿ ಹಾಗೂ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವರು ಎಂದು ವಿವರಿಸಿದರು.
ವಿಶ್ವ ಸಂಗೀತ ದಿನಾಚರಣೆ: ಅದೇ ದಿನ ಬೆಳಗ್ಗೆ 10-30ಕ್ಕೆ ಬಿವಿವಿ ಸಂಘದ ಡಾ|ಪುಟ್ಟರಾಜ ಗವಾಯಿ ಸ್ಕೂಲ್ ಆಫ್ ಮ್ಯೂಜಿಕ್, ಬಸವೇಶ್ವರ ಕಲಾ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ವಿಶ್ವ ಯೋಗ ಮತ್ತು ವಿಶ್ವ ಸಂಗೀತ ದಿನಾಚರಣೆ ಹಮ್ಮಿಕೊಂಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಸಿಮೀಕೇರಿಯ ಹಿರಿಯ ಹಿಂದೂಸ್ತಾನ ಗಾಯಕ ಪಂಡಿತ ಎಚ್.ಆರ್. ಬಡಿಗೇರ, ಬಸವೇಶ್ವರ ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕ ಡಾ|ಜೆ.ವಿ. ಚವ್ಹಾಣ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಬಸವೇಶ್ವರ ಕಲಾ ಕಾಲೇಜಿನ ಪ್ರಾಚಾರ್ಯ ಡಾ|ವಿಜಯಕುಮಾರ ಕಟಗಿಹಳ್ಳಿಮಠ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು. ವಿಶ್ವ ಸಂಗೀತ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗದ ಹಿರಿಯ ಸಂಗೀತ ಕಲಾವಿದರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ|ವಿಜಯಕುಮಾರ ಕಟಗಿಹಳ್ಳಿಮಠ, ವಿವಿಧ ಕಾಲೇಜುಗಳ ಡಾ|ಎಸ್.ಎಚ್. ಶೆಟ್ಟರ, ಪಾರ್ವತಿ ಆಲೂರ, ಎಸ್.ಜೆ. ಒಡೆಯರ, ಐ.ಎಚ್. ಮುಚಂಡಿ, ಬೆನಕನಾಳ ಉಪಸ್ಥಿತರಿದ್ದರು.