ನವದೆಹಲಿ: ಯೋಗ ಎಲ್ಲರನ್ನೂ ಒಂದುಗೂಡಿಸುವ ಕಾರಣ ಇದು ಏಕತೆಯ ದಿನ ಮತ್ತು ಇದು ಸಾರ್ವತ್ರಿಕ ಸಹೋದರತ್ವದ ದಿನವಾಗಿದೆ ಎಂದು ಆರನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
‘ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ವಿಷಯವೇ ‘ಮನೆಯಲ್ಲಿ ಯೋಗ, ಕುಟುಂಬದೊಂದಿಗೆ ಯೋಗ’. ಇಂದು ನಾವು ಎಲ್ಲಾ ಸಾಮಾಜಿಕ ಸಮಾರಂಭಗಳಿಂದ ದೂರವಿದ್ದೇವೆ. ಹಾಗಾಗಿ ಯೋಗಾಭ್ಯಾಸದಲ್ಲಿ ಕುಟುಂಬ ಸದಸ್ಯರು ಒಗ್ಗೂಡಿದಾಗ ಅದು ಇಡೀ ಮನೆಯಲ್ಲಿ ಶಕ್ತಿಯನ್ನು ಹರಡುತ್ತದೆ ಮಾತ್ರವಲ್ಲದೆ ಯೋಗದ ಮೂಲಕ ಕುಟುಂಬ ಸಂಬಂಧವನ್ನು ಹೆಚ್ಚಿಸುವ ಸಂದರ್ಭವೂ ಇದಾಗಿದೆ” ಎಂದು ಮೋದಿ ತಿಳಿಸಿದ್ದಾರೆ.
ಕೋವಿಡ್ -19 ರ ಹಿನ್ನೆಲೆಯಲ್ಲಿ ಯೋಗವನ್ನು ಹೆಚ್ಚು ಗಂಭೀರವಾಗಿ ಅಭ್ಯಾಸ ಮಾಡುವ ಅಗತ್ಯವನ್ನು ಜಗತ್ತು ಕಂಡುಕೊಂಡಿದೆ. ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಅನೇಕ ಆಸನಗಳನ್ನು ಯೋಗವು ಹೊಂದಿದೆ. ಈ ಆಸನಗಳು ನಮ್ಮ ಸ್ನಾಯುಗಳು ಮತ್ತು ಚಯಾಪಚಯವನ್ನು ಬಲಪಡಿಸುತ್ತವೆ. ಕೋವಿಡ್ ವೈರಸ್ ನಮ್ಮ ಉಸಿರಾಟದ ವ್ಯವಸ್ಥೆಯ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ‘ಪ್ರಾಣಾಯಾಮ’ ಮಾಡುವುದು ಉತ್ತಮ ವ್ಯಾಯಾಮ ಎಂದು ಹೇಳಿದರು.
ಧರ್ಮ, ಜಾತಿ, ಲಿಂಗ, ಬಣ್ಣ, ವರ್ಗ ಮೀರಿ ಮಾನವೀಯ ಸಂಬಂಧ, ಏಕತೆ ಸಾರುವ ಶಕ್ತಿ ಯೋಗಕ್ಕಿದೆ. ಯೋಗ ಮಾಡಲು ನಮಗೆ ಬೇಕಾಗಿರುವುದು ಸ್ವಲ್ಪ ಸಮಯ ಮತ್ತು ಸ್ಥಳ. ದೃಢ, ಆರೋಗ್ಯ ಸಮಾಜ ನಿರ್ಮಾಣಕ್ಕೆ ಯೋಗ ಮಾಡುವುದು ಅತ್ಯಂತ ಉಪಕಾರಿ. ನಮ್ಮಲ್ಲಿ ಏಕತೆ, ಒಗ್ಗಟ್ಟನ್ನು ಯೋಗ ಹೆಚ್ಚಿಸಿ ಮಾನವೀಯ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.