ಬೆಂಗಳೂರು: ಭಾರತದ ಕ್ರಿಕೆಟ್ ತಂಡ ಸದ್ಯ ವಿಶ್ವ ಕ್ರಿಕೆಟ್ ನಲ್ಲಿ ಉನ್ನತ ಸ್ಥಾನದಲ್ಲಿರಲು ಆಟಗಾರರ ಫಿಟ್ನೆಸ್ ಕೂಡಾ ಪ್ರಮುಖ ಪಾತ್ರ ವಹಿಸಿದೆ. ಆಟಗಾರರ ಫಿಟ್ನೆಸ್ ಮಟ್ಟವನ್ನು ಅಳೆಯಲು ಬಿಸಿಸಿಐ ಕೆಲ ವರ್ಷಗಳ ಹಿಂದೆ ಯೋ-ಯೋ ಟೆಸ್ಟ್ ಆರಂಭಿಸಿದೆ. ವಿರಾಟ್ ಕೊಹ್ಲಿ ನಾಯಕನಾಗಿದ್ದ ಸಮಯದಲ್ಲಿ ಆರಂಭವಾದ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿದರೆ ಮಾತ್ರ ಆಟಗಾರನಿಗೆ ತಂಡದಲ್ಲಿ ಸ್ಥಾನ ನೀಡಲಾಗುತ್ತದೆ.
ಇದೀಗ ಕರ್ನಾಟಕದ ಸ್ಟಾರ್ ಆಟಗಾರ ಮಯಾಂಕ್ ಅಗರ್ವಾಲ್ ಅವರು ಯೋ- ಯೋ ಟೆಸ್ಟ್ ನಲ್ಲಿ ಭಾರತೀಯ ಸಾರ್ವಕಾಲಿಕ ದಾಖಲೆ ಮುರಿದಿದ್ದಾರೆ. ಇತ್ತೀಚೆಗೆ ಅವರು ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಅವರು 21.1 ಅಂಕ ಪಡೆದಿದ್ದಾರೆ.
ಸದ್ಯ ಭಾರತ ತಂಡದಿಂದ ಹೊರಬಿದ್ದಿರುವ ಮಯಾಂಕ್ ಮತ್ತೆ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ದೇಶಿಯ ಕ್ರಿಕೆಟ್ ನಲ್ಲಿ ಅದ್ಭುತ ಫಾರ್ಮ್ ನಲ್ಲಿರುವ ಮಯಾಂಕ್ ಇತ್ತೀಚೆಗೆ ಮುಗಿದ ಮಹಾರಾಜ ಟ್ರೋಫಿ ಟಿ20 ಲೀಗ್ ನಲ್ಲಿ ಭರ್ಜರಿ ಶತಕ ಸಿಡಿಸಿದ್ದರು.
ಮಯಾಂಕ್ ಅಗರ್ವಾಲ್ ಅವರ ಈ ಯೋ ಯೋ ಟೆಸ್ಟ್ ಅಂಕ ಭಾರತೀಯ ಕ್ರಿಕೆಟಿಗರಲ್ಲಿಯೇ ಅತೀ ಹೆಚ್ಚು ಆಗಿದೆ. ಈ ಹಿಂದಿನ ದಾಖಲೆ ಜಮ್ಮು ಕಾಶ್ಮೀರದ ಬ್ಯಾಟರ್ ಅಹಮದ್ ಬಂಡೆ ಹೆಸರಲ್ಲಿತ್ತು. ಅವರು 19.4 ಪಡೆದಿದ್ದರು. ಮಯಾಂಕ್ ಡಗಾರ್ ಅವರು 19.3 ಅಂಕ, ಮನೀಷ್ ಪಾಂಡೆ ಅವರು 19.2 ಅಂಕ ಪಡೆದಿದ್ದರು. ಈ ದಾಖಲೆಗಳನ್ನು ಮಯಾಂಕ್ ಅಗರ್ವಾಲ್ ಅಳಿಸಿ ಹಾಕಿದ್ದಾರೆ.
ಯೋ-ಯೋ ಪರೀಕ್ಷೆಯು ಒಂದು ಸವಾಲಿನ ಫಿಟ್‌ನೆಸ್ ಮೌಲ್ಯಮಾಪನವಾಗಿದ್ದು, ಇದು ಹಂತಹಂತವಾಗಿ ಕಡಿಮೆ ಸಮಯದ ಮಧ್ಯಂತರಗಳೊಂದಿಗೆ 20 ಮೀಟರ್‌ಗಳ ಅಂತರದಲ್ಲಿ ಇರಿಸಲಾದ ಎರಡು ಮಾರ್ಕರ್‌ಗಳ ನಡುವೆ ಹಿಂದಕ್ಕೆ ಮತ್ತು ಮುಂದಕ್ಕೆ ಓಡುವುದನ್ನು ಒಳಗೊಂಡಿರುತ್ತದೆ. ಪರೀಕ್ಷೆಯು ಕ್ರೀಡಾಪಟುವಿನ ಸಹಿಷ್ಣುತೆಯ ಅಳತೆಯಾಗಿದೆ. ಅವರು ಎಷ್ಟು ಶಟಲ್ ಗಳನ್ನು ಪೂರ್ಣಗೊಳಿಸುತ್ತಾರೆ ಎಂಬುದರ ಆಧಾರದ ಮೇಲೆ ಆಟಗಾರನ ಸ್ಕೋರ್ ಅನ್ನು ಲೆಕ್ಕಹಾಕಲಾಗುತ್ತದೆ.