Advertisement

ಸರಕಾರದ ಬೊಕ್ಕಸಕ್ಕೆ ಎತ್ತಿನಹೊಳೆ ಭಾರ!

01:20 AM Oct 13, 2020 | mahesh |

ಬೆಳ್ತಂಗಡಿ: ಕರಾವಳಿಗರ ಪ್ರತಿರೋಧದ ನಡುವೆಯೂ ಅಂಗೀಕರಿಸಲ್ಪಟ್ಟ ಪಶ್ಚಿಮ ಘಟ್ಟದಿಂದ ಹರಿಯುವ ಹೆಚ್ಚುವರಿ ಮಳೆ ನೀರನ್ನು 265 ಕಿ.ಮೀ. ದೂರದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತಿರುಗಿಸುವ 7 ವರ್ಷಗಳ ಹಿಂದಿನ ಎತ್ತಿನಹೊಳೆ ನೀರಾವರಿ ಯೋಜನೆ ಪೂರ್ಣಗೊಳ್ಳುವಲ್ಲಿ ಮತ್ತೆ ವಿಘ್ನ ಎದುರಾಗಿದೆ.

Advertisement

ಕೊರೊನಾದಂತಹ ಸಂದಿಗ್ಧತೆಯಲ್ಲಿ ಭೂಮಿ ಖರೀದಿ ಪ್ರಕ್ರಿಯೆಗೆ ಮುಂದಾಗಲು ರಾಜ್ಯ ಸರಕಾರದ ಬೊಕ್ಕಸಕ್ಕೆ ಅವಶ್ಯ ಸಂಪತ್ತಿನ ಕ್ರೋಡೀಕರಣ ಕಗ್ಗಂಟಾಗಿದೆ. 2013ರಲ್ಲಿ 13,000 ಕೋಟಿ ರೂ.ಗಳಿದ್ದ ಯೋಜನಾ ವೆಚ್ಚದ ಪ್ರಸಕ್ತ 20,000 ಕೋಟಿ ರೂ.ಗೇರಿದೆ. ಯೋಜನೆಯ ಪ್ರಮುಖ ಭಾಗವಾಗಿರುವ ತುಮಕೂರು ಜಿಲ್ಲೆಯ ಕೊರಟಗೆರೆಯ ಬೈರಗೊಂಡ್ಲುನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಭೂಮಿ ಸ್ವಾಧೀನಕ್ಕೆ ದೊಡ್ಡ ಹೂಡಿಕೆಯ ಅಗತ್ಯವಿದೆ.

2,000 ಎಕ್ರೆ ಭೂ ಸ್ವಾಧೀನ
ಎತ್ತಿನಹೊಳೆಯಿಂದ ದೊಡ್ಡಬಳ್ಳಾಪುರಕ್ಕೆ 8 ಕಡೆಗಳಿಂದ ಮಳೆಗಾಲದಲ್ಲಿ 24 ಟಿಂಎಂಸಿ ನೀರೆತ್ತುವ ಉದ್ದೇಶ ಹೊಂದಲಾಗಿದೆ. ಇವು ಗಳಲ್ಲಿ ಎತ್ತಿನಹೊಳೆ (4 ಕಡೆ), ಕೆಂಪುಹೊಳೆ (1), ಕಾಡುಮನೆ (2), ಹೊಂಗದಾಳ (1) ಗಳಿಂದ ನೀರೆತ್ತಿ 260 ಕಿ.ಮೀ. ದೂರದ ಬೈರಗೊಂಡ್ಲಿನಲ್ಲಿ ಶೇಖರಿಸಬೇಕಿದೆ. ಈ ಪ್ರದೇಶದಲ್ಲಿ 5 ಟಿಎಂಸಿ ನೀರು ಶೇಖರಣೆಗೆ ಅಣೆಕಟ್ಟು ನಿರ್ಮಿಸಲು 2,000 ಎಕ್ರೆ ಸಮತಟ್ಟಾದ ಭೂಮಿಯ ಆವಶ್ಯಕತೆ ಇದ್ದು ಇದಕ್ಕಾಗಿ 4 ವರ್ಷಗಳಿಂದ ತಿಕ್ಕಾಟ- ಹೋರಾಟ ಮುಂದುವರಿದಿದೆ. ಅಣೆಕಟ್ಟು ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ನಡೆಸಿ 2 ವರ್ಷಗಳೇ ಕಳೆದರೂ ರೈತರ ವಿರೋಧದ ಕೂಗು ತಗ್ಗಿಲ್ಲ.

ಕೊರಟಗೆರೆಯಲ್ಲಿ ಸರಕಾರಿ ಬೆಲೆ ಎಕ್ರೆಗೆ 8 ಲಕ್ಷ ರೂ. ಇದ್ದರೆ ದೊಡ್ಡಬಳ್ಳಾಪುರದಲ್ಲಿ ಎಕ್ರೆಗೆ 32 ಲಕ್ಷ ರೂ. ಇದೆ. ಎರಡೂ ಕಡೆ ನೀರು ನಿಲ್ಲುವುದರಿಂದ ನಮಗೂ ಅದೇ ಬೆಲೆ ನೀಡಬೇಕು ಎಂದು ಕೊರಟಗೆರೆಯ ರೈತರು ಆಗ್ರಹಿಸುತ್ತಿದ್ದಾರೆ. ನಾಲ್ಕು ಪಟ್ಟು ಬೆಲೆ ತೆರಲು ಸರಕಾರಕ್ಕೂ ಸಂಪನ್ಮೂಲದ ಕೊರತೆ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ವರ್ಷ ಪ್ರಾಯೋಗಿಕ ನೀರೆತ್ತುವಿಕೆ ಅಧಿಕಾರಿಗಳು ಹೇಳುವಂತೆ ವಿವಿಧ  ಹಂತಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿ ದ್ದರಿಂದ ಯೋಜನಾ ವೆಚ್ಚ ಹೆಚ್ಚುಕಮ್ಮಿಯಾಗುವುದು ಸಹಜ. ಈಗಾಗಲೇ 20 ಕಿ.ಮೀ., 50 ಕಿ.ಮೀ.ನಂತೆ ಕಾಮಗಾರಿ ಗುರಿ ಹೊಂದಲಾಗಿತ್ತು. ಪೈಪ್‌ ಅಳವಡಿಕೆ, ಕಾಲುವೆ, ಹಿರಿದನಹಳ್ಳಿಯಿಂದ ಹರವನಹಳ್ಳಿ ವರೆಗೆ 7 ಅಣೆಕಟ್ಟುಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಕೆಲವೆಡೆ ವಿದ್ಯುತ್‌ ಸಂಪರ್ಕ ಸೇರಿದಂತೆ ಸಣ್ಣಪುಟ್ಟ ಕಾಮಗಾರಿ ಹಂತದಲ್ಲಿದೆ. ಮುಂದಿನ ವರ್ಷ ಶೇ. 80 ಕಾಮಗಾರಿ ಪೂರ್ಣಗೊಳ್ಳುವ ಮೂಲಕ ಪ್ರಾಯೋಗಿಕವಾಗಿ ನೀರೆತ್ತಲಾ ಗುವುದು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡರೆ ಕಾಮಗಾರಿಗೆ ವೇಗ ಸಿಗಲಿದೆ ಎಂದಿದ್ದಾರೆ.

Advertisement

ಶಿರಾಡಿಯಲ್ಲಿ ಸುರಂಗ ನಿರ್ಮಾಣಕ್ಕೆ ವಿರೋಧ
ಶಿರಾಡಿ ರಸ್ತೆಯಲ್ಲಿ 23.5 ಕಿ.ಮೀ. ಸುರಂಗ ಮಾರ್ಗ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಎತ್ತಿನ ಹೊಳೆ ಕಾಮಗಾರಿಯಿಂದಾಗಿ ಪಶ್ಚಿಮ ಘಟ್ಟದಲ್ಲಿ ನೀರಿನ ಹರಿವಿಗೆ ತಡೆಯಾಗಿ ಭೂಕುಸಿತವಾಗುತ್ತಿದೆ. ಶಿರಾಡಿ ಹಾದಿಯಲ್ಲಿ ಈಗಾಗಲೆ ರೈಲು ಮಾರ್ಗದ ಸುರಂಗಗಳು, ರಸ್ತೆ, ಎತ್ತಿನಹೊಳೆ ಅಣೆಕಟ್ಟುಗಳಿವೆ. ಒಂದೊಮ್ಮೆ ಅಣೆಕಟ್ಟಿಗೆ ಹಾನಿಯಾದರೆ ಗುಂಡ್ಯವರೆಗಿನ ಕೃಷಿಪ್ರದೇಶ ಸಂಪೂರ್ಣ ಹಾನಿಗೀಡಾಗಲಿದೆ. 8 ವರ್ಷಗಳಿಂದ ಕೆಂಪುಹೊಳೆ ಉಪನದಿಗಳ ಒರತೆ ತಗ್ಗಿದೆ. ಬಿಸಿಲೆಯಿಂದ ಚಾರ್ಮಾಡಿ ವರೆಗೆ ಒಂದೇ ಭೂಭಾಗವಾಗಿರುವುದರಿಂದ ಶೋಲಾ ಕಾಡುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಪರಿಸರ ಪ್ರೇಮಿ ದಿನೇಶ್‌ ಹೊಳ್ಳ ಅಭಿಪ್ರಾಯಪಟ್ಟಿದ್ದಾರೆ.

ಎತ್ತಿನಹೊಳೆ ಕಾಮಗಾರಿ ಹಂತಹಂತವಾಗಿ ನಡೆಸುವ ಮಧ್ಯೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಹಾಗೂ ಭೂದರ ಹೆಚ್ಚಳದಿಂದ ತಾಂತ್ರಿಕವಾಗಿ ವಿಳಂಬವಾಗಿದೆ. ಕೊರಟಗೆರೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ಮುಂದಿನ ವರ್ಷ ಪ್ರಾಯೋಗಿಕವಾಗಿ ನೀರೆತ್ತುವ ಭರವಸೆ ಇದೆ.
– ರಾಕೇಶ್‌ ಸಿಂಗ್‌, ಪ್ರಧಾನ ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next