Advertisement

ಎತ್ತಿನಹೊಳೆ: ರಾಜಕಾರಣಿಗಳಿಗೆ ಇದು ತುತ್ತಿನಹೊಳೆ!

03:45 AM Jan 05, 2017 | Team Udayavani |

ಬೆಳ್ತಂಗಡಿ: ಎತ್ತಿನಹೊಳೆ ಎಂಬ ಅವೈಜ್ಞಾನಿಕ ಕಾಮಗಾರಿಗಾಗಿ ಕಡಿದ ಮರಗಳ ಸಂಖ್ಯೆ ಲೆಕ್ಕ ಹಾಕಲು ಹಸಿರುಪೀಠದ ಆದೇಶದಂತೆ ಬಂದ ಸಮೀಕ್ಷಾ ತಂಡ ಹೋರಾಟಗಾರರಲ್ಲಿ ನಿರಾಸೆ ಮೂಡಿಸಿದೆ. ಸಾವಿರಾರು ಮರಗಳು ಧರೆಗುರುಳಿದರೂ ಹೋರಾಟಗಾರರ ಕೂಗು ಅರಣ್ಯರೋದನವಾಗಿದೆ. ಎತ್ತಿನಹೊಳೆಗಾಗಿ ಮರಗಳ ನಾಶವಾಗಿಲ್ಲ ಎಂದು ಜ. 13ಕ್ಕೆ ಮುನ್ನ ಕ್ಲೀನ್‌ಚಿಟ್‌ ವರದಿ ಕೊಡುವ ಎಲ್ಲ ಸಿದ್ಧತೆಗಳೂ ಪೂರ್ವನಿಯೋಜಿತವಾದಂತೆ ಭಾಸವಾಗುತ್ತಿವೆ.

Advertisement

ತುತ್ತಿನಹೊಳೆ
ಈ ಮಧ್ಯೆ ಬಿಜೆಪಿ, ಕಾಂಗ್ರೆಸ್‌ ಇದನ್ನು ಪರಿಪೂರ್ಣ ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಕೋಲಾರ ಭಾಗದಲ್ಲಿ ಬರ ವೀಕ್ಷಣೆಗೆ ತೆರಳಿದವರು ಕಾಮಗಾರಿ ನಡೆಯುತ್ತದೆ ಎನ್ನುತ್ತಾರೆ. ಇತ್ತ ಅದೇ ಪಕ್ಷದ ಸಂಸದ ನಳಿನ್‌ ಕುಮಾರ್‌ ಕಟೀಲು ಕಾಮಗಾರಿ ನಡೆದರೆ ಕರಸೇವೆ ಮೂಲಕ ನಿಲ್ಲಿಸುತ್ತೇವೆ ಎಂದು ಪಾದಯಾತ್ರೆ, ರಥಯಾತ್ರೆ ನಡೆಸುತ್ತಾರೆ. ಅತ್ತ ಸಚಿವ ರಮಾನಾಥ ರೈ ಯಾವುದೇ ಸರಕಾರ ಬಂದರೂ ಎತ್ತಿನಹೊಳೆ ಯೋಜನೆ ನಿಲ್ಲುವುದಿಲ್ಲ ಎಂದರೆ, ಅವರದ್ದೇ ಪಕ್ಷದ ಮುಖಂಡ ಬಿ. ಜನಾರ್ದನ ಪೂಜಾರಿ ಯೋಜನೆ ಅನುಷ್ಠಾನವಾದರೆ ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ. ಇದೆಂತಹ ವಿಪರ್ಯಾಸ ಎಂದು ಮತ ಹಾಕಿದ ಜನ ತಲೆ ಕೆಡಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ರಾಜಕಾರಣಿಗಳಿಗೆ ಎತ್ತಿನಹೊಳೆ ಎನ್ನುವುದು ಅವರ ಓಟಿನ ಕೈಚೀಲ ತುಂಬಿಸುವ ತುತ್ತಿನಹೊಳೆಯಾಗಿದೆ. ಅಧಿಕಾರಸ್ಥರಿಗೆ, ಅಧಿಕಾರಿಗಳಿಗೆ ಈ ಅವೈಜ್ಞಾನಿಕ ಕಾಮಗಾರಿ ಮೂಲಕ ದೊರೆಯುವ ಲಾಭ ಊಹೆಗೆ ಬಿಡಲಾಗಿದೆ.

ಭೇಟಿ ಇಲ್ಲ
ಈ ಬಾರಿ ಹಸಿರುಪೀಠದ ಸೂಚನೆ ಮೇರೆಗೆ ಜಂಟಿ ಸಮೀಕ್ಷೆಗೆ ತಂಡ ಆಗಮಿಸಿತ್ತು. ಎರಡು ದಿನಗಳ ಕಾಲ ಕೇಂದ್ರ ಪರಿಸರ ಅರಣ್ಯ ಸಚಿವಾಲಯದ ಪ್ರಾದೇಶಿಕ ಮುಖ್ಯ ಕಚೇರಿಯ ಮುಖ್ಯ ಅರಣ್ಯ ಸಂರಕ್ಷಣಾಕಾರಿ ಅವಿನಾಶ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಪದ್ಮಾವತಿ, ಪರಿಸರ ವಿಜ್ಞಾನಿ ತಿರುವನಾವಕ್ಕರಸು ಅವರ ತಂಡ ಕೆರೆಹೊಳೆ, ಎತ್ತಿನಹಳ್ಳ, ಕಪ್ಪಳ್ಳಿ, ಪ್ರದೇಶಕ್ಕೆ ಭೇಟಿ ನೀಡಿತು. ಹೆಚ್ಚು ಮರಗಳನ್ನು ಕಡಿದ ಹಿರಿದನಹಳ್ಳಿ ಬಳಿಯ ಒಡ್ಡು ಹಾಗೂ ಕಾಡುಮನೆ ಎಸ್ಟೇಟ್‌ ಒಳಗಿನ ಸ್ಥಳಗಳಿಗೆ ಮೊದಲ ದಿನ ಭೇಟಿ ಕೊಡಲೇ ಇಲ್ಲ. ಹೊಂಗಡಹಳ್ಳದಲ್ಲಿ ನಿರ್ಮಾಣವಾಗುವ ಒಡ್ಡಿಗಾಗಿ ಮರಗಳನ್ನು ಕಡಿದಿದ್ದು ಅವಶೇಷ ಸಿಗದಂತೆ ತೆರವಿಗೆ ಯತ್ನಿಸಲಾಗಿದೆ.

ನೆಡಲಾಗಿದೆ
ಅರಣ್ಯ ಇಲಾಖೆ ಪ್ರಕಾರ ಎತ್ತಿನಹೊಳೆಗಾಗಿ ಬಳಕೆಯಾಗುವುದು 13.93 ಹೆಕ್ಟೇರ್‌ ಅರಣ್ಯ. ಇದರಲ್ಲಿ ಮೀಸಲು ಅರಣ್ಯ 1.85 ಹೆಕ್ಟೇರ್‌. ಉಳಿದದ್ದು ಡೀಮ್ಡ್ ಫಾರೆಸ್ಟ್‌. ಖಾಸಗಿ ಹಾಗೂ ಕಂದಾಯ ಭೂಮಿಯಲ್ಲಿ ಕಡಿದ ಮರಗಳ ಲೆಕ್ಕಾಚಾರ ಪ್ರತ್ಯೇಕ ಇದ್ದರೂ ಇವು ಅರಣ್ಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಕಡಿದ ಮರಗಳ ಬದಲಿಗೆ ಗಿಡ ನೆಡಲು ಕರ್ನಾಟಕ ನೀರಾವರಿ ನಿಗಮ ಸೆಪ್ಟಂಬರ್‌ನಲ್ಲಿ ಅರಣ್ಯ ಇಲಾಖೆಗೆ 8 ಲಕ್ಷ ರೂ. ಪಾವತಿಸಿತ್ತು. ಕೇಂದ್ರ ಅರಣ್ಯ ಪರಿಸರ ಇಲಾಖೆ ಪ್ರಕಾರ ಒಂದು ಗಿಡಕ್ಕೆ 1,911 ರೂ. ಖರ್ಚಾಗುತ್ತದೆ. ಗುಂಡಿ ತೆಗೆದು ಗಿಡ ನೆಟ್ಟು ಐದು ವರ್ಷಗಳ ಕಾಲ ಪೋಷಿಸಲು ಈ ಹಣ. ಅರಣ್ಯ ಇಲಾಖೆ ವತಿಯಿಂದ ಮೂರುಕಣ್ಣು ಎಂಬಲ್ಲಿ 500 ಗಿಡ ನೆಡಲಾಗಿದೆ. ಇದು 42 ಮರಗಳನ್ನು ಕಡಿದ ಬಾಬ್ತು ಎನ್ನುತ್ತವೆ ಅರಣ್ಯ ಇಲಾಖೆ ಮೂಲಗಳು. ಆದರೆ ಕಾಮಗಾರಿ ಪ್ರದೇಶ ಗಮನಿಸಿದರೆ ಸಾವಿರಾರು ಮರಗಳು ಧರೆಗುರುಳಿವೆ. ಮರಗಳ ಅವಶೇಷಗಳು ಕಣ್ಣಿಗೆ ಕಾಣಸಿಗುತ್ತವೆ. ದಟ್ಟಾರಣ್ಯದಲ್ಲಿ ಕಾಮಗಾರಿ ನಡೆಸಿದ್ದು ಸುಷ್ಪಷ್ಟವಾಗಿ ಕಾಣುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಅಂಜನ ಹಾಕಬೇಕಾದ ಅಗತ್ಯವೇ ಇಲ್ಲ. ಆದರೆ ನಿಗಮ ಹಾಗೂ ಇಲಾಖೆ ಇದನ್ನು ಒಪ್ಪಲು ಸಿದ್ಧರಿಲ್ಲ. ಪರಿಶೀಲನೆಗೆ ಆಗಮಿಸಿದ ತಂಡ ಇಲ್ಲಿನ ಅಧಿಕಾರಿಗಳ ತಾಳಕ್ಕೆ ಕುಣಿಯುತ್ತಿದೆ.

ಪರಿಶೀಲನೆ ಪ್ರಹಸನ
2015ರ ಅಂತ್ಯದಲ್ಲೂ ಇಂಥದ್ದೇ ಒಂದು ಪ್ರಹಸನ ನಡೆದಿತ್ತು. ಯೋಜನೆಗಾಗಿ ಮರಗಳನ್ನು ಕಡಿಯಲು ಅನುಮತಿ ನೀಡುವ ಸಲುವಾಗಿ ಕೇಂದ್ರದ ತಂಡ ಪರಿಶೀಲನೆಗೆ ಆಗಮಿಸಿತ್ತು. ಆಗ ಸಕಲೇಶಪುರದ ಎತ್ತಿನಹಳ್ಳ ಅನಂತರ ಹೆಗ್ಗದ್ದೆಗೆ ತೆರಳಿತ್ತು. ಹೊಂಗಡಹಳ್ಳದ ಹಿರಿದನಹಳ್ಳಿ ಸಮೀಪದ ಮೊಗೇನ ಹಳ್ಳಿ ಪರಿಸರಕ್ಕೆ ಭೇಟಿ ನೀಡಿರಲಿಲ್ಲ. ಎತ್ತಿನಹಳ್ಳದ ಎರಡನೇ ಅಣೆಕಟ್ಟಿನ ಅಲವಳ್ಳಿಯಲ್ಲಿ ವಿಪರೀತ ಅರಣ್ಯ ನಾಶವಾಗಿ ಹೋರಾಟಗಾರರು, ಮಾಧ್ಯಮದವರು ಹೋದರೂ ಸಮಿತಿಯವರು ಹೋಗಿರಲೇ ಇಲ್ಲ. ಕೊನೆಗೂ ಅನುಮತಿಗೆ ನಿರಾಕ್ಷೇಪಣೆ ನೀಡಲಾಗಿತ್ತು.

Advertisement

ಅನುಮತಿ 200ಕ್ಕೆ,  ಕಡಿದದ್ದು  800!
ಯಸಳೂರು ಅರಣ್ಯ ವಲಯ ವ್ಯಾಪ್ತಿಯ ಹಿರಿದನಹಳ್ಳಿಯಲ್ಲೂ ಮರಗಳ ತೆರವು ಮಾಡಲಾಗಿದೆ. ಅಲ್ಲಿ ಖಾಸಗಿ ಭೂಮಿಯಲ್ಲಿ 200 ಮರಗಳನ್ನು ಕಡಿಯಲು ಅನುಮತಿ ನೀಡಿದ್ದರೆ 800ರಷ್ಟು ಮರಗಳನ್ನು ಕಡಿಯಲಾಗಿದೆ. ಕಡಗರಹಳ್ಳಿಯಲ್ಲಿ ಅನಧಿಕೃತವಾಗಿ ಮರಗಳನ್ನು ಕಡಿದ ಕುರಿತು ಅರಣ್ಯ ಇಲಾಖೆ ಕೇಸು ಹಾಕಿದ್ದರೂ ಕಂದಾಯ ಇಲಾಖೆ ಮೂಲಕ ಕೇಸು ಮಾಸುವಂತೆ ವರದಿ ಹಾಕಿಸಲಾಗಿದೆ. ರಾಜ್ಯ ಸರಕಾರದ ಬೊಕ್ಕಸ ಬರಿದು ಮಾಡುವ ಈ ಯೋಜನೆಯ ಪರಿವೀಕ್ಷಣೆಗೆ ಆಗಮಿಸಿದ ಕೇಂದ್ರದ ಅಧಿಕಾರಿಗಳ ತಂಡದ ವರ್ತನೆ ಹೋರಾಟಗಾರರನ್ನು ಬೆಕ್ಕಸ ಬೆರಗಾಗಿಸಿದೆ. ಆದ್ದರಿಂದ ಹೋರಾಟಗಾರರಾದ ಹಾಸನದ ಕಿಶೋರ್‌, ಮಂಗಳೂರಿನ ಪುರುಷೋತ್ತಮ್‌ ಚಿತ್ರಾಪುರ್‌, ನಿವೃತ್ತ ಐಎಎಸ್‌ ಅಧಿಕಾರಿ ವಿ.ವಿ. ಭಟ್‌ ಮೊದಲಾದವರು ಪ್ರತ್ಯೇಕ ಸಭೆ ಸೇರಿ ಹಸಿರು ಪೀಠದಲ್ಲಿನ ಅರ್ಜಿ ಶೀಘ್ರ ಇತ್ಯರ್ಥವಾಗಲು ಬೇಕಾದ ರೂಪುರೇಖೆ ಕುರಿತು ಸಮಾಲೋಚನೆ ನಡೆಸಿದರು. ರಾಜಕಾರಣಿಗಳನ್ನು ನಂಬಿದರೆ ಪರಿಸರನಾಶ ತಡೆ ಅಸಾಧ್ಯ ಎಂಬ ನಿಲುವು ಪರಿಸರ ಹೋರಾಟಗಾರರದ್ದು.

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next