Advertisement

ಎತ್ತಿನಹೊಳೆ: ಇಂದಿನಿಂದ ಆಮರಣಾಂತ ಉಪವಾಸ ಸತ್ಯಾಗ್ರಹ

03:45 AM Feb 10, 2017 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳಿವಿಗಾಗಿ ಹಾಗೂ ನೇತ್ರಾವತಿ ನದಿಯ ರಕ್ಷಣೆಗಾಗಿ ಅವೈಜ್ಞಾನಿಕವಾಗಿರುವ ಎತ್ತಿನಹೊಳೆ ಯೋಜನೆಯನ್ನು ಕೈಬಿಡುವ ನಿಟ್ಟಿನಲ್ಲಿ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಆಶ್ರಯದಲ್ಲಿ ಫೆ. 10ರಿಂದ ನಡೆಯುವ ಆಮರಣಾಂತ ಉಪವಾಸ ಸತ್ಯಾಗ್ರಹ ಹಾಗೂ ಬೃಹತ್‌ ಪ್ರತಿಭಟನೆಯು ನಾಡಿನ ಸಮಸ್ತ ಜನರ ಭಾಗವಹಿಸುವಿಕೆಯೊಂದಿಗೆ ಜನಾಂದೋಲನವಾಗಿ ಮೂಡಿಬರಲಿ ಎಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಗೌರವಾಧ್ಯಕ್ಷ ಎಸ್‌. ಗಣೇಶ್‌ ರಾವ್‌ ಮನವಿ ಮಾಡಿದ್ದಾರೆ.

Advertisement

ಫೆ. 10ರಂದು ಬೆಳಗ್ಗೆ 9.45ಕ್ಕೆ ನಗರದ ಪುರಭವನದ ಬಳಿಯಿರುವ ಗಾಂಧಿ ಪಾರ್ಕ್‌ನಲ್ಲಿರುವ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅಹಿಂಸಾ ಮಾರ್ಗದ ಆಮರಣಾಂತ ಉಪವಾಸಕ್ಕೆ ಪ್ರೇರಣೆ ತೆಗೆದುಕೊಂಡು ಅಲ್ಲಿಂದ 10.15ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗಕ್ಕೆ ತೆರಳಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಹಿಂದೂ ಧರ್ಮದ ಸ್ವಾಮೀಜಿಗಳು, ಕ್ರೈಸ್ತ ಧರ್ಮದ ಗುರುಗಳು, ಮುಸ್ಲಿಂ ಧರ್ಮ ಗುರುಗಳು, ಜೈನ ಧರ್ಮದ ಗುರುಗಳು, ಜಿಲ್ಲೆಯ ಹೋರಾಟಗಾರರು, ಮುಖಂಡರು, ರಾಜಕೀಯ ಧುರೀಣರು, ತುಳುನಾಟಕ ರಂಗದ ಪ್ರಮುಖರು ಹಾಗೂ ಸಾಮಾಜಿಕ ಕಳಕಳಿ ಹೊಂದಿರುವ ಬಂಧುಗಳ ಉಪಸ್ಥಿತಿಯಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು. 11.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್‌ ಪ್ರತಿಭಟನ ಸಭೆ ನಡೆಯಲಿದೆ. ಜಿಲ್ಲೆಯ ಎಲ್ಲ ಚುನಾಯಿತ ಶಾಸಕರಿಗೆ, ಜನಪ್ರತಿನಿಧಿಗಳಿಗೂ ಆಹ್ವಾನ ನೀಡಲಾಗಿದೆ. ಹೋರಾಟದಲ್ಲಿ ಎಲ್ಲರೂ ಭಾಗಿಯಾಗಿ ಯೋಜನೆ ರದ್ದುಗೊಳ್ಳುವಂತೆ ಮಾಡಬೇಕು ಎಂದವರು ತಿಳಿಸಿದ್ದಾರೆ.

ನ್ಯಾಯ ಸಿಗುವ ತನಕ …
ಕೋಲಾರ, ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರು ಕೊಡುವ ಬಗ್ಗೆ ನಮ್ಮ ವಿರೋಧವಿಲ್ಲ. ಆದರೆ ನೀರೆಲ್ಲಿದೆ ಎಂಬುದು ಪ್ರಮುಖ ಪ್ರಶ್ನೆ. ಅವೈಜ್ಞಾನಿಕವಾದ ಹಾಗೂ ಇಲ್ಲದ ನೀರನ್ನು ಕೊಡಲು ಮುಂದಾಗಿರುವ ಯೋಜನೆಯನ್ನು ತತ್‌ಕ್ಷಣ ನಿಲ್ಲಿಸಬೇಕು ಹಾಗೂ ಕೋಲಾರ- ಚಿಕ್ಕಮಗಳೂರಿನಲ್ಲಿ ಕೆರೆಗಳ ಹೂಳೆತ್ತುವ ಮೂಲಕ ಶಾಶ್ವತ ನೀರಾವರಿ ಯೋಜನೆ ಕೈಗೊಳ್ಳಬೇಕು. ನ್ಯಾಯ ಸಿಕ್ಕಿಲ್ಲವಾದರೆ ಹೋರಾಟ ಮುಂದುವರಿಯುತ್ತದೆ. ಉಪವಾಸದ ವೇಳೆ ಯಾವುದೇ ಸಮಸ್ಯೆಗಳಾದಲ್ಲಿ ಅದರ ಪರಿಣಾಮ ಜಿಲ್ಲೆಯಲ್ಲಿ ಕಾಣಲಿದೆ ಎಂದವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next