ಮಂಗಳೂರು: ಎತ್ತಿನಹೊಳೆ ಯೋಜನೆಯ ಮೂಲಕ ಬಯಲು ಸೀಮೆ ಜಿಲ್ಲೆಗಳಿಗೆ ನಿರೀಕ್ಷಿತ ನೀರು ಲಭ್ಯವಾಗುವುದಿಲ್ಲ ಎಂದು ವಿಜ್ಞಾನಿಗಳು, ನೀರಾವರಿ ತಜ್ಞರು ಹಾಗೂ ಪರಿಣತರು ಹೇಳುತ್ತಿದ್ದರೂ ಯಾವುದನ್ನೂ ಲೆಕ್ಕಿಸದೆ ಯೋಜನೆಗೆ ಮುಂದಾದ ಸರಕಾರಕ್ಕೆ ಇದೀಗ ದೊಡ್ಡ ಕಂಟಕವೊಂದು ಎದುರಾಗಿದೆ. ಯೋಜನೆಯ ಬಗ್ಗೆ ವಿಚಾರಣೆ ಕೈಗೊಂಡಿರುವ ರಾಷ್ಟ್ರೀಯ ಹಸಿರು ಪೀಠದ ಆದೇಶದಂತೆ ಕಾಮಗಾರಿ ಕೈಗೊಳ್ಳುವ 8 ಅಣೆಕಟ್ಟುಗಳ ತಳಭಾಗದಲ್ಲಿ ನೀರಿನ ಪ್ರಮಾಣವನ್ನು ಅಳತೆ ಮಾಡುವ ‘ಟೆಲಿಮಿಟ್ರಿ ಸ್ಟೀಮ್ ಫ್ಲೋ ಮೀಟರ್’ ಅಳವಡಿಸುವಂತೆ ಸೂಚಿಸಿದೆ.
ನೇತ್ರಾವತಿ ಉಪನದಿಗಳಾದ ಎತ್ತಿನಹಳ್ಳ, ಕಾಡುಮನೆ ಹೊಳೆ, ಹೊಂಗದಹಳ್ಳ, ಕೇರಿಹೊಳೆಗೆ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ತಲಾ 2ರಂತೆ ಒಟ್ಟು 8 ಅಣೆಕಟ್ಟು ಕಟ್ಟುವ ಕಾಮಗಾರಿ ಈಗಾಗಲೇ ನಡೆಯುತ್ತಿದ್ದು, ಅದೇ ಜಾಗದಲ್ಲಿ ನೀರಿನ ಪ್ರಮಾಣ ಅಳವಡಿಕೆಗೆ ಮೀಟರ್ ಅಳವಡಿಸುವ ಪ್ರಕ್ರಿಯೆಯೂ ಇದೀಗ ನಡೆಯುತ್ತಿದೆ. ಜರ್ಮನಿ ಮೂಲದ ಕ್ಯಾನರಿ ಆಟೋಮೆಷನ್ ಪ್ರೈ.ಲಿ. ಕಂಪೆನಿಗೆ ಸಂಬಂಧಿಸಿದ ಮೀಟರ್ ಗಳನ್ನು ಅಳವಡಿಸಲಾಗುತ್ತಿದೆ.
8 ಅಣೆಕಟ್ಟುಗಳ ತಳಮಟ್ಟದಲ್ಲಿ ಇಡಲಾಗುವ ಮೀಟರ್ ನ ಸಹಾಯದಿಂದ ಆ ವ್ಯಾಪ್ತಿಯಲ್ಲಿ ಎಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ? ಅದರಲ್ಲಿ ಎಷ್ಟು ನೀರನ್ನು ಬಯಲು ಸೀಮೆ ಭಾಗಕ್ಕೆ ಕಳುಹಿಸಲಾಗುವುದು ಹಾಗೂ ಕೆಳಾಭಿಮುಖವಾಗಿ (ದಕ್ಷಿಣ ಕನ್ನಡ ಕಡೆಗೆ) ಹರಿಯುವ ನೀರಿನ ಪ್ರಮಾಣ ಎಷ್ಟು ಎಂಬ ನಿಖರ ಮಾಹಿತಿಯನ್ನು ಸಂಗ್ರಹಿಸಬಹುದು. ಇದೇ ಅಂಶದ ಮಾನದಂಡವನ್ನು ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭ ಪರಿಗಣಿಸುವ ಸಾಧ್ಯತೆಯೂ ಇದೆ.
ಎತ್ತಿನಹೊಳೆ ಯೋಜನೆಯ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ, ಅದರಲ್ಲಿಯೂ ಡ್ಯಾಂ ನಿರ್ಮಿಸುವ ಸ್ಥಳದಲ್ಲಿ ನೀರಿನ ಲಭ್ಯತೆ ಅಧಿಕವಾಗಿ ಕಾಮಗಾರಿ ನಡೆಸಲು ಕಷ್ಟವಾದ ಉದಾಹರಣೆ ಇಲ್ಲ. ಜತೆಗೆ ಡ್ಯಾಂ ನಿರ್ಮಿಸುವ ಸ್ಥಳದಲ್ಲಿ ನೀರು ಸಂಗ್ರಹಗೊಂಡು ಕಾಮಗಾರಿಗೆ ಸಮಸ್ಯೆ ಆಗಿರುವ ಬಗ್ಗೆಯೂ ವರದಿ ಇಲ್ಲ. ಹೀಗಿರುವಾಗ 24 ಟಿಎಂಸಿಯಷ್ಟು ನೀರು ಸಿಗಲಾರದು ಎಂದು ಗೊತ್ತಿದ್ದರೂ ಇದನ್ನು ಪರಿಗಣಿಸದೆ ಯೋಜನೆಯನ್ನು ಮುಂದುವರಿಸಿಕೊಂಡು ಬರಲಾಗುತ್ತಿರುವ ಸರಕಾರ ಈಗ ಉತ್ತರ ನೀಡಬೇಕಿದೆ ಎಂದು ಹೋರಾಟಗಾರರು ತಿಳಿಸುತ್ತಾರೆ.
ಈ ಬಗ್ಗೆ
‘ಉದಯವಾಣಿ’ ಜತೆಗೆ ಪ್ರತಿಕ್ರಿಯೆ ನೀಡಿದ ರಾಜ್ಯ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಬಿ.ಜಿ. ಗುರುಪಾದಸ್ವಾಮಿ ಅವರು, ‘ಎತ್ತಿನಹೊಳೆ ಯೋಜನಾ ಪ್ರದೇಶದ ಡ್ಯಾಂ ಭಾಗದಲ್ಲಿ ನೀರಿನ ಲಭ್ಯತೆಯ ಪ್ರಮಾಣವನ್ನು ಲೆಕ್ಕ ಹಾಕುವ ನೆಲೆಯಲ್ಲಿ ಮೀಟರ್ ಅಳವಡಿಸಲಾಗುತ್ತಿದೆ. ಈಗಾಗಲೇ ಇದರ ಕಾಮಗಾರಿ ಆರಂಭಗೊಂಡಿದೆ’ ಎಂದರು.
3.3 ಕೋ.ರೂ.ಗಳ ಮೀಟರ್!
ಎತ್ತಿನಹೊಳೆ ಯೋಜನೆಗೆ ಸಾವಿರಾರು ಕೋ.ರೂ.ಗಳ ಅಂದಾಜು ವೆಚ್ಚದ ನಿರೀಕ್ಷೆ ಇದೆ. ಕಾಮಗಾರಿಯಿಂದಾಗಿ ಈಗಾಗಲೇ ಪಶ್ಚಿಮಘಟ್ಟ ಸೇರಿದಂತೆ ಪರಿಸರ ಸಂಪೂರ್ಣ ನಾಶವಾಗುವ ಆತಂಕದಲ್ಲಿದೆ. ಇಷ್ಟಿರುವಾಗಲೇ ಇದೀಗ ಎತ್ತಿನಹೊಳೆ ಪ್ರದೇಶದಲ್ಲಿ ನೀರು ಅಳತೆ ಮಾಡಲು ಅಳವಡಿಸುತ್ತಿರುವ ಜರ್ಮನ್ ತಂತ್ರಜ್ಞಾನದ ಮೀಟರ್‌ಗೆ 3.3 ಕೋ.ರೂ. ವೆಚ್ಚ ಮಾಡಲಾಗುತ್ತಿದೆ.
‘ಸರಕಾರ ನೀರಿನ ಲೆಕ್ಕ ಈಗ ನೀಡಲಿ’
‘ದ.ಕ. ಜಿಲ್ಲೆಯ ವ್ಯಾಪಕ ವಿರೋಧದ ನಡುವೆಯೇ ತರಾತುರಿಯಲ್ಲಿ ಎತ್ತಿನಹೊಳೆ ಯೋಜನೆಯನ್ನು ಕೈಗೆತ್ತಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಅಲ್ಲಿ ನೀರು ಇಲ್ಲ ಎಂದು ಹೇಳಿದರೂ ಕೂಡ ಕೇಳದ ಸರಕಾರ ನೀರು ಇದೆ ಎಂದು ಹಠ ತೋರಿಸಿತ್ತು. ಇದೀಗ ಅಲ್ಲಿನ ನೀರಿನ ಪ್ರಮಾಣದ ಬಗ್ಗೆ ಲೆಕ್ಕ ನೀಡುವಂತೆ ರಾಷ್ಟ್ರೀಯ ಹಸಿರು ಪೀಠವು ಸೂಚಿಸಿದ ಮೇರೆಗೆ ಮೀಟರ್ ಅಳವಡಿಕೆಗೆ ಸರಕಾರ ಮುಂದಾಗಿದೆ’.
– ಕೆ.ಎನ್. ಸೋಮಶೇಖರ್, ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ಸಮಿತಿ