Advertisement

ರಾಷ್ಟ್ರಧ್ವಜ ಹಿಡಿದು ಕುಣಿದಾಡಿದ ಶಾಸಕ ಯತ್ನಾಳ

03:32 PM Aug 06, 2019 | Suhan S |

ವಿಜಯಪುರ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಕಲಂ 370 ಹಾಗೂ 35-ಎ ಕಲಂ ರದ್ದು ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಲು ಹಮ್ಮಿಕೊಂಡಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ರಾಷ್ಟ್ರಧ್ವಜ ಹಿಡಿದು ಕುಣಿದುಕುಪ್ಪಳಿಸಿ ಸಂಭ್ರಮಿಸಿದರು.

Advertisement

ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಎದುರು ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ರಾಷ್ಟ್ರಧ್ವಜ ಹಾಗೂ ಪಕ್ಷದ ಧ್ವಜ ಹಿಡಿದು ಬಂದಿದ್ದ ಕಾರ್ಯಕರ್ತರು ಜಯಘೋಷ ಕೂಗಲು ಆರಂಭಿಸಿದ್ದರು. ಈ ಹಂತದಲ್ಲಿ ಸಂಭ್ರಮಾಚರಣೆಯಲ್ಲಿ ಕಾರ್ಯಕರ್ತ ಜೊತೆ ಬೆರೆತು ರಾಷ್ಟ್ರ ಧ್ವಜ ಹಿಡಿದ ಶಾಸಕ ಯತ್ನಾಳ, ಕುಣಿದು ಕುಪ್ಪಳಿಸಿದರು.

ಈ ವೇಳೆ ಮಾತನಾಡಿದ ಶಾಸಕ ಯತ್ನಾಳ, ದೇಶದಲ್ಲಿ ಈಗಾಗಲೇ ತಲಾಖ್‌ಗೆ ತಿದ್ದುಪಡಿ ತರಲಾಗಿದೆ. ಈಗ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾಗಿದೆ. ಭವಿಷ್ಯದಲ್ಲಿ ದೇಶದಲ್ಲಿ ಏಕರೂಪದ ಕಾನೂನು ಜಾರಿ ಹಾಗೂ ದೇಶದಲ್ಲಿರುವ ಎಲ್ಲರಿಗೂ ಒಂದೇ ಮದುವೆ, ಎರಡೇ ಮಕ್ಕಳು ಕಾನೂನು ಜಾರಿಗೆ ತರುವುದು ಬಾಕಿ ಇದೆ ಎಂದರು.

ನಾವು ಐದವರು, ನಮಗೆ ಇಪ್ಪತ್ತೆದು ಎಂಬ ಮಾತು ಇನ್ನು ನಡೆಯುವುದಿಲ್ಲ. ದೇಶದಲ್ಲಿ ಇರಬೇಕಾದ್ರೆ ಭಾರತ ಮಾತಾಕೀ ಜೈ ಅನ್ನಬೇಕು, ವಂದೇ ಮಾತರಂ ಹೇಳಬೇಕು. ಇಲ್ಲವಾದರೆ ನೆಹರು ಮಾಡಿಕೊಟ್ಟಿರುವ ಪಾಕಿಸ್ತಾನಕ್ಕೆ ಹೋಗಬೇಕು. ರಾಜ್ಯಸಭೆಯ ಕಾಂಗ್ರೆಸ್‌ ನಾಯಕ ಗುಲಾಮ ನಬಿ ಅಜಾದ್‌ ಕರಾಳ ದಿನ ಎಂದು ಅಬ್ಬರಿಸಿದ ಕ್ರಮ ಖಂಡನಾರ್ಹ, ಇದು ಅವರ ಕುಟುಂಬಕ್ಕೆ ಕರಾಳ ದಿನವೇ ಹೊರತು ದೇಶದ ಜನತೆಗೆ ಐತಿಹಾಸಿಕ ಸುವರ್ಣ ದಿನ ಎಂದು ಬಣ್ಣಿಸಿದರು.

ಜಮ್ಮು-ಕಾಶ್ಮೀರದ 370ನೇ ಕಲಂ ಹಾಗೂ 35 (ಎ) ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ಪ್ರಯುಕ್ತ ಪಟ್ಟಣದ ಹಿಂದೂ ಯುವ ಸಮಿತಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

Advertisement

ಈ ವೇಳೆ ಶ್ರೀಧರ ಕ್ಷತ್ರಿ, ಮಲ್ಲು ಹಾವಿನಾಳಮಠ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರು ಕೈಗೊಂಡಿರುವ ಕ್ರಮ ಸೂಕ್ತವಾಗಿದೆ. ಜಮ್ಮು-ಕಾಶ್ಮೀರದಲ್ಲಿ ನಮ್ಮ ಸೇನೆಯನ್ನು ಅತೀ ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿತ್ತು. ನಮ್ಮ ದೇಶದಲ್ಲೇ ಇದ್ದರೂ ನಮಗೆ ಸಂಬಂಧವಿರದೇ ಇರುವ ತರಹ ಅಲ್ಲಿ ಕಾನೂನು ಇತ್ತು. ಈಗ ಎಲ್ಲದಕ್ಕೂ ಮುಕ್ತಿ ದೊರೆತಿದೆ ಎಂದರು.

ರಾಜಗುರು ದೇವರ, ಶಂಕರಸಿಂಗ್‌ ಹಲವಾಯಿ ಮಾತನಾಡಿದರು. ವಿನೋದ ಹದಗಲ್, ಪ್ರವೀಣ ಮಠ, ರಾಘು ಗಡಗಲಿ, ವಿಶ್ವನಾಥ ದೇಸಾಯಿ, ವಿಶಾಲ ಮಾಜನಶೆಟ್ಟಿ, ಪ್ರಫುಲ್ ಲಾಳಸಂಗಿ, ರಮೇಶ ಮೇತ್ರಿ, ನಾಗೇಶ ಸಿಂದೆ, ಸುಧೀರ ಕರಿಕಟ್ಟಿ, ಸಿದ್ದು ಗೊರನಾಳ, ಅಖೀಲ್ ಬಂಕೂರ, ಶುಭಂ ಗಿರಣಿವಡ್ಡರ, ಅಕ್ಷಯ ಪಾಟೀಲ, ಪ್ರವೀಣ ಕೆಣಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next