ಚಿಕ್ಕಬಳ್ಳಾಪುರ: ಕೋಲಾರ-ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಮುಂದಿನ ಎರಡು ವರ್ಷದ ಅವಧಿಯಲ್ಲಿ ನೀರು ಹರಿಸುವ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೀಡಿದ್ದಾರೆ ಅವರ ಮೇಲೆ ನನಗೆ ಸಂಪೂರ್ಣವಾಗಿ ನಂಬಿಕೆಯಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದರು.
ತಾಲೂಕಿನ ಜಡಲತಿಮ್ಮನಹಳ್ಳಿದ ರಾಜ್ಯ ಬೀಜ ನಿಗಮ ಆವರಣದಲ್ಲಿ ನಡೆದ ಶೀಥಲ ಘಟಕದ ಕಟ್ಟಡದ ನೂತನ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದಿಗಾರರ ಜತೆ ಮಾತನಾಡಿದರು.
ನೀರಾವರಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿ ಆಳವಾಗಿ ಅಧ್ಯಯನ ಮಾಡಿ ದ್ದಾರೆ. ಎತ್ತಿನಹೊಳೆ ಯೋಜನೆಯನ್ನು ರೂಪಿಸಿ ಆಡಳಿತಾತ್ಮಕವಾಗಿ ಅನುಮೋದನೆ ನೀಡಿರುವ ಮುಖ್ಯಮಂತ್ರಿ ಬಸವ ರಾಜ್ ಬೊಮ್ಮಾಯಿ ಅವರು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಅವಳಿ ಜಿಲ್ಲೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ನೀರು ಹರಿಸುವ ಸ್ಪಷ್ಟ ಭರವಸೆ ನೀಡಿದ್ದಾರೆ.ನನಗೆ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದರು.
ನಮ್ಮ ರಾಜ್ಯ ಒಂದು ಸುಸಂಸ್ಕೃತಿಗೆ ಹೆಸರು ಮಾಡಿದೆ. ಒಳ್ಳೆಯ ರಾಜಕಾರಣಕ್ಕೆ ಹೆಸರು ಮಾಡಲಿರುವ ರಾಜ್ಯ ಉತ್ತಮ ಮಾರ್ಗದಲ್ಲಿದೆ. ತಪ್ಪುದಾರಿ ಹಿಡಿದರೆ ಹಳ್ಳ ಹಿಡಿಯುವುದು ಗ್ಯಾರೆಂಟಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದರು.
ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ ಬಿಜೆಪಿ ಪಕ್ಷಕ್ಕೆ ಬೈದುಕೊಂಡು ಹೋದರೆ ಅವರ ಪಕ್ಷಕ್ಕೆ ಆಡಳಿತಕ್ಕೆ ಬರುತ್ತದೆ ಎಂದು ವಿರೋಧ ಪಕ್ಷದವರು ಭ್ರಮೆಯಲ್ಲಿದ್ದರೆ ಅದು ಮೂರ್ಖತನದ ಪರಮಾವಧಿ ಎಂದು ಟೀಕಿಸಿದರು.
ನಮಗೆ ರೈತರ ಬಗ್ಗೆ ಚಿಂತನೆಯಿದೆ ರೈತರ ಹಿತಕಾಯಬೇಕು, ಮಳೆಗಾಲ ಬರುತ್ತದೆ ಬೀಜ-ಗೊಬ್ಬರವನ್ನು ಹೊಂದಿಸಬೇಕು ಅದರ ಬಗ್ಗೆ ನಮಗೆ ಚಿಂತೆಯಿದೆ ಅವರಿಗೆ ಏನು ಚಿಂತೆಯಿದೆ ಎಂದು ವ್ಯಂಗ್ಯವಾಡಿದರು.