ಬೆಂಗಳೂರು: ಎತ್ತಿನ ಹೊಳೆ ಯೋಜನೆ ಅನುಷ್ಠಾನ ವಿಚಾರದಲ್ಲಿ ಅಡೆತಡೆ ನಿವಾರಿ ಸಲು ಶೀಘ್ರ ಸಭೆ ಕರೆದು ಇತ್ಯರ್ಥಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆ ಯಲ್ಲಿ ಭರವಸೆ ನೀಡಿದ್ದಾರೆ.
ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಡಾ| ಜಿ. ಪರಮೇಶ್ವರ್ ಪ್ರಸ್ತಾವಕ್ಕೆ ಮಧ್ಯಪ್ರವೇಶಿಸಿ ಉತ್ತರ ನೀಡಿದ ಬೊಮ್ಮಾಯಿ ಅವರು ಯೋಜನೆ ಜಾರಿ ಬಗ್ಗೆ ಯಾವುದೇ ಅನುಮಾನ ಬೇಡ, ನಮ್ಮ ಸರಕಾರ ಯೋಜನೆ ಅನುಷ್ಠಾನ ಮಾಡಿಯೇ ಸಿದ್ಧ ಎಂದರು.
ವಿಷಯ ಪ್ರಸ್ತಾವಿಸಿದ ಡಾ| ಜಿ. ಪರಮೇಶ್ವರ್ ಅವರು ಕೊರಟಗರೆ ವ್ಯಾಪ್ತಿಯಲ್ಲಿ ಬೈರಗೊಂಡ್ಲು ಜಲಾಶಯ ನಿರ್ಮಾಣಕ್ಕೆ ಭೂ ಸ್ವಾಧೀನ ಅಗತ್ಯವಿದ್ದು 319 ಕೋಟಿ ರೂ. ನೀಡಿದರೆ ಎಲ್ಲವೂ ಸುಸೂತ್ರವಾಗಲಿದೆ. ಆದರೆ, ಅದಕ್ಕೆ ಅಧಿಕಾರಿಗಳು ಮೀನಾ ಮೇಷ ಎಣಿಸಿದ್ದರಿಂದ ಯೋಜನೆಯ ವೆಚ್ಚ 23 ಸಾವಿರ ಕೋಟಿ ರೂ. ತಲುಪಿದೆ. ಇದಕ್ಕೆ ಯಾರು ಹೊಣೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಈಗಾಗಲೇ ಎರಡು ಬಹುದೊಡ್ಡ ಅಡ್ಡಿ ಅಡೆತಡೆಗಳು ನಿವಾರಣೆಯಾಗಿದ್ದು, ಒಂದೆರಡು ತಿಂಗಳಲ್ಲಿ ಎತ್ತಿನ ಹೊಳೆಯಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದರು.
ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಪ್ರಕರಣಗಳಲ್ಲಿ ರೈತರಿಗೆ ಹಣಪಾವತಿ ಮಾಡುವುದು ವಿಳಂಬವಾದಲ್ಲಿ ಭೂಸ್ವಾಧೀನ ಅಧಿಕಾರಿಗಳನ್ನೇ ಜವಾಬ್ದಾರಿ ಮಾಡಲಾಗುವುದು ಎಂದು ಹೇಳಿದರು.