ಜಗಳೂರು: ನಾನು ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದಿಲ್ಲ. 25 ವರ್ಷಗಳ ಹಿಂದೆಯೇ ಬಂದಿದ್ದು, ಇದೇ ಕ್ಷೇತ್ರದ ಮಗನಾಗಿದ್ದೇನೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದವನಲ್ಲ ಎಂದು ಮಾಜಿ ಶಾಸಕರು ಸಭೆ-ಸಮಾರಂಭಗಳಲ್ಲಿ ಪದೇ ಪದೇ ಹೇಳುತ್ತಾರೆ. ಆದರೆ ಈ ಕ್ಷೇತ್ರದ ಮಗನವಾಗಿದ್ದು ಅರಸಿಕೆರೆ ಹೋಬಳಿ ವ್ಯಾಪ್ತಿಯಲ್ಲಿ ಮನೆ ಮತ್ತು ಜಮೀನು ಇದೆ. 1998ರಲ್ಲಿ ಕ್ಷೇತ್ರಕ್ಕೆ ಕಬಡ್ಡಿ ಕ್ರೀಡೆ ಪರಿಚಯಿಸಿ ರಾಜಕಾರಣದಲ್ಲಿ ತೊಡಗಿದ್ದೇನೆ. ಜನರು ನನ್ನನ್ನು ಮೆಚ್ಚಿ ಮೂರು ಬಾರಿ ಆಶೀರ್ವಾದ ಮಾಡಿದ್ದಾರೆ ಎಂದರು.
ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ತಾಲೂಕಿನ 57 ಕೆರೆ ತುಂಬಿಸುವ ಯೋಜನೆ ಸಾಕಾರಗೊಂಡಿದೆ. ಅಲ್ಲದೆ ವರುಣನ ಕೃಪೆಯಿಂದ ತುಪ್ಪದಹಳ್ಳಿ ಕೆರೆ ಕೋಡಿ ಬಿದ್ದಿದ್ದು, ಕೆರೆ ಪ್ರದೇಶಕ್ಕೆ ಮೇ 24ರಂದು ಸಿರಿಗೆರೆ ಶ್ರೀಗಳು ಭೇಟಿ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ರಾಜಕೀಯ ಮುತ್ಸದ್ಧಿಗಳು, ರೈತರು ತುಪ್ಪದಹಳ್ಳಿ ಕೆರೆ ವೀಕ್ಷಣೆ ಮಾಡಲಿದ್ದಾರೆ ಎಂದ ಶಾಸಕರು, ತಾಲೂಕಿನಲ್ಲಿ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಸಾಕಷ್ಟಿದೆ. ದರ ಹೆಚ್ಚಳ ಸೇರಿದಂತೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ 12 ಮನೆಗಳು ಮಳೆಯಿಂದ ಹಾನಿಗೊಳಗಾಗಿದ್ದು ತಹಶೀಲ್ದಾರ್ ಮೂಲಕ ಪರಿಶೀಲನೆ ನಡೆಸಿ ಭಾಗಶಃ ಹಾನಿಗೊಳಗಾದವರಿಗೆ 50 ಸಾವಿರದಿಂದ 3 ಲಕ್ಷದವರೆಗೂ ಸರ್ಕಾರದಿಂದ ಪರಿಹಾರ ಒದಗಿಸಲಾಗುವುದು. ಚಿಕ್ಕ ಅರಕೆರೆಯಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪಿದ್ದು ಕುಟುಂಬಕ್ಕೆ ಸಾಂತ್ವನ ಹೇಳಿ 5 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಎಸ್‌ಎಸ್ ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಜಗಳೂರು ತಾಲೂಕು ಸತತ ಮೂರನೇ ಬಾರಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿ ಶೈಕ್ಷಣಿಕ ಪ್ರಗತಿ ಸಾಧಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ. ನಾಗಪ್ಪ, ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ಪಪಂ ಅಧ್ಯಕ್ಷ ಸಿದ್ದಪ್ಪ, ಮಾಜಿ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಮಂಜಮ್ಮ, ಸದಸ್ಯರಾದ ನವೀನ್, ದೇವರಾಜ್, ಪಾಪಲಿಂಗಪ್ಪ, ಮುಖಂಡರಾದ ನಾಗರಾಜ್, ಗೌರಿಪುರ ಶಿವಣ್ಣ, ಬಿಸ್ತುವಳ್ಳಿ ಬಾಬು, ಹನುಮಂತಪ್ಪ, ಇಂದ್ರೇಶ್, ವಕೀಲ ಹನುಮಂತಪ್ಪ, ಪೂಜಾರ ಸಿದ್ದಪ್ಪ, ಓಬಳೇಶ್ ಇತರರು ಇದ್ದರು.