ವಾಷಿಂಗ್ಟನ್: ‘ಅಮೆರಿಕದ(US)ಜ್ಯೋತಿಯನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್( Kamala Harris) ಅವರಿಗೆ ರವಾನಿಸಲಾಗಿದೆ. ಆದರೆ ಡೆಮಾಕ್ರಟಿಕ್ ಗಳ ಕೆಲಸ ಇನ್ನೂ ಮುಗಿದಿಲ್ಲ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ(Barack Obama) ಹೇಳಿದ್ದಾರೆ.
ಡೆಮಾಕ್ರಟಿಕ್ ನ್ಯಾಶನಲ್ ಕನ್ವೆನ್ಷನ್‌ನಲ್ಲಿ ಭಾಷಣ ಮಾಡಿದ ಒಬಾಮಾ, ‘ಕಮಲಾ ಹ್ಯಾರಿಸ್ ಮತ್ತು ಟಿಮ್ ವಾಲ್ಜ್ ಅವರು ಬ್ಲೂ ಕಾಲರ್ ಕಾರ್ಮಿಕರ ಯೋಗಕ್ಷೇಮಕ್ಕೆ ಆಳವಾಗಿ ಬದ್ಧರಾಗಿರುವ ನಾಯಕರು. ಈ ನೂತನ ಆರ್ಥಿಕತೆಯಲ್ಲಿ, ನಮ್ಮ ಆರೋಗ್ಯ ವ್ಯವಸ್ಥೆಗಳನ್ನು ನೋಡಿಕೊಳ್ಳಲು, ನಮ್ಮ ಬೀದಿಗಳನ್ನು ಸ್ವಚ್ಛಗೊಳಿಸಲು, ನಮ್ಮ ಪ್ಯಾಕೇಜ್‌ಗಳನ್ನು ತಲುಪಿಸಲು ಅಗತ್ಯವಾದ, ಕೋಟ್ಯಂತರ ಜನರ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವ ಅಧ್ಯಕ್ಷರ ಅಗತ್ಯವಿದೆ’ ಎಂದರು.
“ಕಮಲಾ ಅಧ್ಯಕ್ಷೆಯಾಗುತ್ತಾರೆ, ಅಮೆರಿಕದ ಹೊಸ ಅಧ್ಯಾಯ ಬರೆಯಲಿದ್ದಾರೆ ಎಂದು ಒಬಾಮಾ ಹೇಳಿದರು. ಈ ವೇಳೆ ಭಾರಿ ಸಂಖ್ಯೆಯಲ್ಲಿದ್ದ ಸಭಿಕರು “ಹೌದು, ಅವರು ಅಧ್ಯಕ್ಷರಾಗುತ್ತಾರೆ” ಎಂದು ಘೋಷಣೆಗಳನ್ನು ಮೊಳಗಿಸಿದರು.
”ಯುಎಸ್ ಚುನಾವಣೆ ಜಿದ್ದಾಜಿದ್ದಿನ ಓಟ. ಕಳೆದ ಕೆಲವು ವಾರಗಳಿಂದ ನಾವು ಉತ್ಪಾದಿಸಲು ಸಾಧ್ಯವಾದ ಎಲ್ಲ, ನಂಬಲಾಗದ ಶಕ್ತಿಯಿಂದಾಗಿ ಎಲ್ಲಾ ರ್‍ಯಾಲಿಗಳಿಂದಾಗಿ ಇನ್ನೂ ಬಿಗಿಯಾದ ಓಟದ ಸ್ಪರ್ಧೆಯಾಗಲಿದೆ” ಎಂದು ಒಬಾಮಾ ಹೇಳಿದರು.
‘ಅಮೆರಿಕನ್ನರು ತಮ್ಮ ಭವಿಷ್ಯಕ್ಕಾಗಿ ಮತ ಚಲಾಯಿಸಬೇಕು ಎಂದ ಒಬಾಮಾ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದರು.ಟ್ರಂಪ್ ಅವರದ್ದು ನಿರಂತರವಾದ ಹಿಡಿತ ತಪ್ಪಿದ ಮತ್ತು ಕುಂದುಕೊರತೆಗಳ ಸರಣಿಯಾಗಿದ್ದು ಈಗ ಅವರು ಕಮಲಾ ಎದುರು ಸೋಲುವ ಭಯದಲ್ಲಿದ್ದಾರೆ’ ಎಂದರು.
ಒಬಾಮಾ ಅವರಿಗೆ ಪತ್ನಿ ಮಿಚೆಲ್ ಕೂಡ ಪ್ರಚಾರದಲ್ಲಿ ಸಾಥ್ ನೀಡಿದರು.