ಅಂದು ಭಾನುವಾರ. ಬೆಳಿಗ್ಗೆ ಏಳು ಗಂಟೆ. ಮನೆಯಂಗಳದಲ್ಲಿದ್ದ ಹೂಗಿಡಗಳಿಂದ ಅಮ್ಮ ಹೂ ಕೊಯ್ಯುತ್ತಿದ್ದರು. ಸದ್ದಿಲ್ಲದೆ ಮಗಳು ಅನಿತ ಅಮ್ಮನ ಹಿಂದೆ ಬಂದು ನಿಂತಿದ್ದಳು. ಅಮ್ಮ ಗಮನಿಸಿರಲಿಲ್ಲ. ಹೂ ಕೊಯ್ಯುತ್ತ ಅವರು, “ಇವತ್ತೂ ಎದುರುಮನೆ ಅಜ್ಜಿ ನಮ್ಮ ಕಾಂಪೌಂಡಿನ ಹೂಗಳನ್ನು ಕಿತ್ತಿದ್ದಾರೆ. ಮುಂದಿನ ಗಿಡದಲ್ಲಿ ಒಂದು ಕೆಂಪು ದಾಸವಾಳ ಅರಳಿತ್ತು. ಛೇ..’ ಎಂದು ತಮ್ಮಷ್ಟಕ್ಕೆ ಗೊಣಗಿಕೊಳ್ಳುತ್ತಿದ್ದರು. ಅದನ್ನು ಕೇಳಿ ಪುಟ್ಟಿ “ಅಮ್ಮ, ಎದುರುಮನೆ ಅಜ್ಜಿ ತುಂಬ ಕೆಟ್ಟವರು ಅಲ್ಲವೇನಮ್ಮ?’ ಎಂದು ಕೇಳಿದಳು. ಅಮ್ಮ ಹೇಳಿದರು, “ಹಾಗೆಲ್ಲ ಹೇಳಬಾರದು ಪುಟ್ಟಿ. ಅಜ್ಜಿ ದೊಡ್ಡವರು.’ “ದೊಡ್ಡವರಾದರೆ ಏನಮ್ಮ, ಅವರು ಕಳ್ಳತನ ಮಾಡಬಹುದಾ? ಅದು ತಪ್ಪಲ್ಲವ? ಹಿಡಿದು ಪೊಲೀಸಿಗೆ ಕೊಡಬೇಕು. ನಾನೀಗಲೇ ಹೋಗಿ ಜಗಳ ಆಡಿ ಬರಿ¤àನಮ್ಮ. ನಮ್ಮ ಹೂ ನಮಗೆ ಬೇಕು.’. ಪುಟ್ಟಿ ಮುದ್ದುಮುದ್ದಾಗಿ ಜಗಳಕ್ಕೆ ತಯಾರಾಗಿದ್ದೀನಿ ಎಂದು ಹೇಳಿದಳು. ನಗೆ ಬಂದರೂ ಅದನ್ನು ತೋರಗೊಡದೆ ಅಮ್ಮ “ನಾ ಹೇಳಲಿಲ್ಲವ ಪುಟ್ಟಿà. ಹಾಗೆಲ್ಲ ದೊಡ್ಡವರ ಬಗ್ಗೆ ಕೆಟ್ಟದು ಆಡಬಾರದು ಅಂತ. ಅವರು ಹೂ ತೆಗೆದುಕೊಂಡು ಹೋಗಿರೋದು ದೇವರ ಪೂಜೆಗೆ. ನಾವು ಹೂ ಕೀಳ್ಳೋದು ಕೂಡಾ ದೇವರ ಪೂಜೆಗೆ. ಹೂ ನಮ್ಮ ಮನೆಯದಾದರೇನಂತೆ ನಮ್ಮ ದೇವರು ಒಬ್ಬನೇ ತಾನೆ? ಬಾ ಒಳಕ್ಕೆ’ ಎನ್ನುತ್ತ ಅನಿತಾಳನ್ನು ಮನೆಯೊಳಗೆ ಕರೆದುಕೊಂಡು ಬಂದರು.
ಬೆಳಗ್ಗೆ ಗಂಟೆ ಎಂಟಾಗಿತ್ತು. “ಅನಿತ ಪುಟ್ಟಿà, ಎಲ್ಲಿದ್ದೀಯ, ಸ್ನಾನಕ್ಕೆ ಬಾ’ ಎಂದು ಅಮ್ಮ ಕರೆದರು. ಅನಿತ ಎಲ್ಲೂ ಕಾಣಿಸಲಿಲ್ಲ. ಎರಡು- ಮೂರು ಬಾರಿ ಕರೆದರೂ ಅನಿತಳ ಸುಳಿವಿಲ್ಲ. ಮನೆಯ ಗೇಟು ತೆರೆದಿತ್ತು. ಆಶ್ಚರ್ಯವೆಂಬಂತೆ ಎದುರು ಮನೆ ಗೇಟು ಕೂಡ ತೆರೆದಿತ್ತು! ದೇವರಕೋಣೆಗೆ ಬಂದು ನೋಡಿದರು. ಹೂಬುಟ್ಟಿ ಕಾಣಲಿಲ್ಲ. ಅನಿತ ಏನಾದರೂ ಎದುರು ಮನೆ ಅಜ್ಜಿಯನ್ನು ನೋಡಲು ಹೋಗಿರಬಹುದೆ ಎಂದು ಅನುಮಾನಿಸಿದರು.
ಅಜ್ಜಿಯ ಜೊತೆ ಜಗಳವಾಡಿ ಏನಾದರೂ ರಾದ್ದಾಂತ ಮಾಡಿಕೊಂಡು ಬಂದರೆ ಏನಪ್ಪ ಗತಿ ಎಂದು ಕಸಿವಿಸಿಗೊಂಡರು. ಮನೆಯವರಿಗೆಲ್ಲ ಇರಿಸು-ಮುರಿಸು ಆಗುವುದಲ್ಲಿ ಸಂಶಯವಿಲ್ಲ ಎಂದುಕೊಂಡರು. ಅನಿತಾಳನ್ನು ಕರೆದುಕೊಂಡು ಬರೋಣವೆಂದು ರಸ್ತೆ ದಾಟಿ ಅಮ್ಮ ಎದುರು ಮನೆಯ ಗೇಟಿನ ಮೂಲಕ ಒಳಹೊಕ್ಕರು. ಮುಂದಿನ ಬಾಗಿಲೂ ತೆರೆದಿತ್ತು. ಮುಂದುವರಿದು ಅಮ್ಮ ಆ ಮನೆಯ ದೇವರ ಕೋಣೆಯ ಬಳಿ ಬಂದರು. ಅಲ್ಲೊಂದು ಆಶ್ಚರ್ಯ ಕಾದಿತ್ತು.
ಅನಿತಾ ಎದುರುಮನೆ ಅಜ್ಜಿಯ ಮಡಿಲಲ್ಲಿ ಹಾಯಾಗಿ ಕುಳಿತಿದ್ದಳು! ಅಜ್ಜಿ ಜೊತೆ ಏನೋ ಹರಟುತ್ತಿದ್ದಾಳೆ? ಮುಗಳ್ನಗುತ್ತ ಅಜ್ಜಿ ಅನಿತಳಿಗೆ ಮುತ್ತು ಕೊಡುತ್ತಿದ್ದಾರೆ! ಅನಿತ ಮುಂದುವರೆಸಿದಳು, “ಅಜ್ಜೀ, ಈ ಎಲ್ಲ ಹೂವನ್ನೂ ಅಮ್ಮ ನಿಮಗಾಗಿ ಕಳಿಸಿದ್ದಾರೆ. ನಿಮ್ಮನೆ ದೇವರು ನಮ್ಮನೆ ದೇವರು ಒಂದೇ ಅಲ್ಲವ, ಅದಕ್ಕೆ. ಇದನ್ನೂ ತೆಗೊಳ್ಳಿ, ನಿಮ್ಮನೆ ದೇವರ ಮೇಲೇ ಇರಿಸಿ. ಆ ಕೆಂಪು ದಾಸವಾಳ ತುಂಬಾ ಚೆನ್ನಾಗಿ ಕಾಣುತ್ತಿದೆ.’
ಇವೆಲ್ಲವನ್ನೂ ಮರೆಯಿಂದಲೇ ನೋಡುತ್ತಿದ್ದ ಅಮ್ಮನ ಕಣ್ಣುಗಳಲ್ಲಿ ಹನಿ ಮೂಡಿತು. ಪುಟ್ಟಿ ಬಗ್ಗೆ ಹೆಮ್ಮೆಯಾಯಿತು.
ಮತ್ತೂರು ಸುಬ್ಬಣ್ಣ