Advertisement

ಬಾಂಜಾರುಮಲೆ ಉಕ್ಕಿನ ಸೇತುಬಂಧ

02:49 AM Sep 07, 2019 | Sriram |

ಬೆಳ್ತಂಗಡಿ: ಪ್ರವಾಹದಿಂದ ಸಂಪರ್ಕ ಕಳೆದುಕೊಂಡಿದ್ದ ಬಾಂಜಾರು ಮಲೆಗೆ ಯೇನಪೊಯ ಸಂಸ್ಥೆಯಿಂದ ನಿರ್ಮಾಣಗೊಳ್ಳುತ್ತಿದ್ದ 30 ಟನ್‌ ಸಾಮರ್ಥ್ಯದ ಉಕ್ಕಿನ ಸೇತುವೆ ಪೂರ್ಣಗೊಂಡಿದೆ.

Advertisement

ಆ.9ರ ಪ್ರವಾಹಕ್ಕೆ ಇಲ್ಲಿದ್ದ 65 ವರ್ಷಗಳಷ್ಟು ಹಳೆಯ ಸೇತು ಕೊಚ್ಚಿಹೋಗಿತ್ತು. ಬಳಿಕ ಜಿಲ್ಲಾಡಳಿತ ತಾತ್ಕಾಲಿಕ ಉಕ್ಕಿನ ಕಾಲು ಸಂಕ ನಿರ್ಮಿಸಿತ್ತು. ಆದರೆ ವಾಹನ ಸಂಪರ್ಕ ಇಲ್ಲದಿದ್ದ ಹಿನ್ನೆಲೆಯಲ್ಲಿ ಯೇನಪೊಯ ಸಂಸ್ಥೆ ಜಿಲ್ಲಾಡಳಿತ ಮತ್ತು ಶಾಸಕ ಹರೀಶ್‌ ಪೂಂಜ ಅವರ ಮನವಿಗೆ ಸ್ಪಂದಿಸಿ 30 ಟನ್‌ ಸಾಮರ್ಥ್ಯದ ವಾಹನ ಸಂಚರಿಸಲು ಸಾಧ್ಯವಾಗುವಂತಹ ಉಕ್ಕಿನ ಸೇತುವೆ ನಿರ್ಮಿಸಿದೆ.

15 ದಿನಗಳಲ್ಲಿ ಪೂರ್ಣ
15 ದಿನಗಳಲ್ಲಿ ಕಾಮಗಾರಿ ಪೂರ್ಣ ಗೊಂಡಿದೆ. ಮಂಗಳೂರಿನಲ್ಲಿ ವಿನ್ಯಾಸ ಗೊಳಿಸಲಾದ ಉಕ್ಕಿನ ಬೃಹತ್‌ ಪಿಲ್ಲರ್‌ಗಳನ್ನು ಅಳವಡಿಸಿ 25 ಪರಿಣಿತ ಕಾರ್ಮಿಕರಿಂದ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ. ಉಕ್ಕಿನ ಸೇತುವೆ 4.5 ಮೀ. ಅಗಲ, 12 ಮೀ.ಉದ್ದವಿದ್ದು, 30 ಟನ್‌ ಭಾರದ ವಾಹನ ಗಳು ಸಂಚರಿಸಬಹುದಾಗಿದೆ ಎಂದು ಯೇನಪೊಯ ಪ್ರಾಜೆಕ್ಟ್ ಎಂಜಿನಿ ಯರ್‌ ನವೀನ್‌ಚಂದ್ರ ತಿಳಿಸಿದ್ದಾರೆ.

ಮತ್ತೆ ಬಾಂಜಾರುಮಲೆ ಸಂಪರ್ಕ
ಶಾಶ್ವತ ಸೇತುವೆ ನಿರ್ಮಿಸಿದ್ದರಿಂದ ಬಹಳ ಪ್ರಯೋಜನವಾಗಿದೆ. ಶಾಲೆಗೆ ಹೋಗುವ ಮಕ್ಕಳಿಗೂ ಅನುಕೂಲ ವಾಗಿದೆ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿದ ಯೇನಪೊಯ, ಶಾಸಕರು, ಜಿಲ್ಲಾಡಳಿತ ಎಲ್ಲರಿಗೂ ನಾವು ಆಭಾರಿಗಳಾಗಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ.

ತಿಂಗಳಲ್ಲಿ 3 ಸಂಪರ್ಕ ಸೇತು
1953-54ರಲ್ಲಿ ಬಾಂಜಾರು ಮಲೆಯಲ್ಲಿ ಅಣಿಯೂರು ಹೊಳೆಗೆ ಸೇತುವೆ ನಿರ್ಮಿಸಲಾಗಿತ್ತು. ಆ.9ರ ಜಲಸ್ಫೋಟಕ್ಕೆ ಈ ಸೇತುವೆ ಕೊಚ್ಚಿ ಹೋದ ಬೆನ್ನಲ್ಲೇ ಸ್ಥಳೀಯರು ಮರದ ದಿಮ್ಮಿಗಳಿಂದ ಕಾಲು ಸಂಕ ನಿರ್ಮಿಸಿದ್ದರು. ಬಳಿಕ ಜಿಲ್ಲಾಡಳಿತ ಮತ್ತು ಶಾಸಕರ ಸೂಚನೆಯಂತೆ ಪುತ್ತೂರಿನ ಮಾಸ್ಟರ್‌ ಪ್ಲಾನರಿ ಸಂಸ್ಥೆಯಿಂದ 5 ಲಕ್ಷ ರೂ. ವೆಚ್ಚದಲ್ಲಿ ಉಕ್ಕಿನ ಕಾಲುಸಂಕ ನಿರ್ಮಿಸಿ ಕಳೆದ ವಾರ ಉದ್ಘಾಟಿಸಲಾಗಿತ್ತು. ಈಗ ಯೇನಪೊಯ ಶಾಶ್ವತ ಸೇತುವೆ ನಿರ್ಮಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next