Advertisement

Yenepoya Hospital; 9ರ ಬಾಲಕಿಯ 40 ಕ್ಯಾನ್ಸರ್‌ ಗಡ್ಡೆಗಳಿಗೆ ಶಸ್ತ್ರಚಿಕಿತ್ಸೆ

11:56 PM Feb 13, 2024 | Team Udayavani |

ಉಳ್ಳಾಲ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕೇರಳ ಕೊಚ್ಚಿ ಮೂಲದ ಬಾಲಕಿಯೊಬ್ಬಳ ಶ್ವಾಸಕೋಶದಲ್ಲಿದ್ದ 40ಕ್ಕೂ ಹೆಚ್ಚು ಕ್ಯಾನ್ಸರ್‌ ಗಡ್ಡೆಗಳನ್ನು 10 ಗಂಟೆಗಳ ಸುದೀರ್ಘ‌ ಶಸ್ತ್ರಚಿಕಿತ್ಸೆಯ ಮೂಲಕ ದೇರಳಕಟ್ಟೆಯ ಯೇನಪೊಯ ವೈದ್ಯಕೀಯ ಕಾಲೇಜಿನ ಜುಲೇಖಾ ಯೇನಪೊಯ ಇನ್‌ಸ್ಟಿಟ್ಯೂಟ್‌ ಆಫ್‌ ಆಂಕಾಲಜಿಯ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದೆ.

Advertisement

ಭಾರತದಲ್ಲೇ ಮೊದಲ ಬಾರಿಗೆ ಕ್ಯಾನ್ಸರ್‌ನ ಈ ಅಪರೂಪದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, 9 ದಿನಗಳಲ್ಲೇ ಮಗು ಚೇತರಿಕೆ ಕಂಡಿದೆ ಎಂದು ಶಸ್ತ್ರ ಚಿಕಿತ್ಸೆಯ ನೇತೃತ್ವ ವಹಿಸಿದ್ದ ತಜ್ಞ ವೈದ್ಯ ಡಾ| ಜಲಾಲುದ್ದೀನ್‌ ಅಕºರ್‌ ತಿಳಿಸಿದರು.

ಶಸ್ತ್ರಚಿಕಿತ್ಸೆಯ ಮಾಹಿತಿ ನೀಡಿದ ಅವರು, 9 ವರ್ಷದ ಹೆಣ್ಣುಮಗು ಕಣ್ಣು, ತೊಡೆಯ ಮೂಳೆ, ಕರುಳು ಮತ್ತು ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿತ್ತು. ತನ್ನ 9ನೇ ತಿಂಗಳಿನಲ್ಲಿ ಮಧುರೈ ಅರವಿಂದ್‌ ಆಸ್ಪತ್ರೆ ಮತ್ತು ಹೈದರಾಬಾದ್‌ ದೃಷ್ಟಿ ಕೇಂದ್ರದಲ್ಲಿ ಕಣ್ಣಿನ ಅಬುìದಕ್ಕೆ ಚಿಕಿತ್ಸೆ ಪಡೆದಿದ್ದಳು. 2021ರಲ್ಲಿ ತೊಡೆ ಮೂಳೆಯ ಅಬುìದಕ್ಕೆ ಕೊಚ್ಚಿಯ ಲೇಕ್‌ ಶೋರ್‌ ಆಸ್ಪತ್ರೆ ಮತ್ತು ಎಸ್‌ವಿಟಿ ಆಸ್ಪತ್ರೆ ತಿರುವನಂತಪುರದಲ್ಲಿ ಚಿಕಿತ್ಸೆ ಪಡೆದಿದ್ದರು. 2022ರಲ್ಲಿ ಕೊಚ್ಚಿಯಲ್ಲಿ ಶ್ವಾಸಕೋಶ ಚಿಕಿತ್ಸೆ ಹಾಗೂ 2023ರಲ್ಲಿ ತಿರುವನಂತಪುರದ ಸರಕಾರಿ ಕಾಲೇಜಿನಲ್ಲಿ ಕರುಳಿನ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು, ಕೋಯಿಕ್ಕೋಡ್‌ನ‌ ಮಿತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದರು. ಈ ಸಮಯದಲ್ಲಿ ಶ್ವಾಸಕೋಶದ ಕ್ಯಾನ್ಸರ್‌ ಉಲ್ಬಣಗೊಂಡಿದ್ದು, ದೇಶದ 250ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಒಳಗೊಂಡಿರುವ ರಾಷ್ಟ್ರೀಯ ಕ್ಯಾನ್ಸರ್‌ ಗ್ರಿಡ್‌ನ‌ಲ್ಲಿ ಮುಂದಿನ ನಿರ್ವಹಣೆಯ ಕುರಿತು ಚರ್ಚಿಸಿ ಬಳಿಕ ದೇರಳಕಟ್ಟೆಯ ಯೇನಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರೋಗಿಯ ಕುಟುಂಬದವರು ಒಪ್ಪಿದ್ದು, ಅದರಂತೆ ಚಿಕಿತ್ಸೆ ನೀಡಿ ಯಶಸ್ವಿಯಾಗಿದ್ದೇವೆ ಎಂದರು.

ಅಪರೂಪದ ಯಶಸ್ವಿ ಶಸ್ತ್ರಚಿಕಿತ್ಸೆಯ ಮಾರ್ಗದರ್ಶನವನ್ನು ಯೇನಪೊಯ ಪರಿಗಣಿತ ವಿ.ವಿ.ಯ ಕುಲಪತಿ ಡಾ| ವಿಜಯಕುಮಾರ್‌ ಎಂ., ಮಾರ್ಗದರ್ಶನದಲ್ಲಿ ಡಾ| ಜಲಾಲುದ್ದೀನ್‌ ಅಕºರ್‌ ನೇತೃತ್ವದಲ್ಲಿ ಡಾ| ರೋಹನ್‌ ಶೆಟ್ಟಿ, ಡಾ| ಎಚ್‌.ಟಿ. ಅಮರ್‌ ರಾವ್‌, ಡಾ| ನೂರ್‌ ಮೊಹಮ್ಮದ್‌ ಅವರನ್ನೊಳಗೊಂಡ ಶಸ್ತ್ರಚಿಕಿತ್ಸಾ ತಂಡ ಹಾಗೂ ಅರಿವಳಿಕೆ ತಜ್ಞರಾದ ಡಾ| ತಿಪ್ಪೇಸ್ವಾಮಿ ನೇತೃತ್ವದಲ್ಲಿ ಡಾ| ಸಂದೇಶ್‌ (ಪೀಡಿಯಾಟ್ರಿಕ್‌ ವಿಭಾಗ) ಡಾ| ಆದರ್ಶ್‌ (ಪಲ್ಮನಲಜಿ ವಿಭಾಗ), ಡಾ| ವಿನೀತ್‌ (ಇಂಟೆನ್ಸಿವಿಸ್ಟ್‌) ಭಾಗವಹಿಸಿದ್ದರು.

ಯೇನಪೊಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಹಬೀಬ್‌ ರೆಹಮಾನ್‌ ಎ.ಎ. ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next