ಸಾನಾ : ಯೆಮೆನ್ ಮೇಲೆ ಕೋವಿಡ್ ಪರಿಣಾಮಗಳು ಅತ್ಯಂತ ಭಯಾನಕವಾಗಲಿವೆ ಎಂಬುದಾಗಿ ಕೆಲವು ತಜ್ಞರು ಎಚ್ಚರಿಸಿದ್ದಾರೆ. ವಿಶ್ವಸಂಸ್ಥೆ ಯೆಮೆನ್‌ಗೆ ನೀಡುತ್ತಿರುವ ಆರ್ಥಿಕ ನೆರವನ್ನು ಕಡಿತಗೊಳಿಸಲಾರಂಭಿಸಿರುವುದರಿಂದ ಯುದ್ಧತ್ರಸ್ತ ದೇಶ ಇನ್ನಿಲ್ಲದ ಸಂಕಷ್ಟಗಳನ್ನು ಎದುರಿಸಲಿದೆ ಎಂದು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆ ಯೆಮೆನ್‌ಗಾಗಿ 2.42 ಶತಕೋಟಿ ಡಾಲರ್ ನೆರವಿಗೆ ಮನವಿ ಮಾಡಿದ್ದರೂ ಇದರ ಶೇ. 50 ಮಾತ್ರ ಸಂಗ್ರಹವಾಗಿದೆ. ಪೌಷ್ಟಿಕ ಆಹಾರದ ಕೊರತೆ ಮತ್ತು ಸುಸಜ್ಜಿತ ವೈದ್ಯಕೀಯ ವ್ಯವಸ್ಥೆ ಇಲ್ಲದಿರುವ ದೇಶಕ್ಕೆ ವಿಶ್ವಸಂಸ್ಥೆಯ ನೆರವಿನ ಕಡಿತದ ಹೊಡೆತವನ್ನು ತಾಳಿಕೊಳ್ಳುವ ಶಕ್ತಿಯಿಲ್ಲ. ಕೋವಿಡ್ ವೈರಸ್ ಅಲ್ಲಿ ರುದ್ರ ತಾಂಡವ ಪ್ರಾರಂಭಿಸಿದರೆ ಸಾವಿನ ಲೆಕ್ಕ ಸಿಗದು ಎಂದಿದ್ದಾರೆ ವಿಶ್ವಸಂಸ್ಥೆಯ ಮಾನವೀಯ ನೆರವು ವಿಭಾಗದ ಅಧಿಕಾರಿ ಲಿಸ್ ಗ್ರೇಂಡ್.
ಸೂಕ್ತ ಸಮಯದಲ್ಲಿ ದಾನಿಗಳು ನೆರವು ನೀಡಿದಿದ್ದರೆ ಕಳೆದ 5 ವರ್ಷಗಳಲ್ಲಿ ಯುದ್ಧ, ರೋಗರುಜಿನಗಳು ಮತ್ತು ಹಸಿವಿನಿಂದ ಸಂಭವಿಸಿದ ಸಾವುಗಳನ್ನು ಕೋವಿಡ್ ಸಾವುಗಳು ಮೀರಿಸಲಿವೆ. 5 ವರ್ಷಗಳಲ್ಲಿ ಆಂತರಿಕ ಯುದ್ಧಕ್ಕೆ 1,12,000 ಮಂದಿ ಬಲಿಯಾಗಿದ್ದಾರೆ.ರೋಗಗಳು ಮತ್ತು ಹಸಿವಿನಿಂದ ಸಂಭವಿಸಿದ ಸಾವುಗಳು ನಿಖರ ಲೆಕ್ಕ ಇಲ್ಲ. ಈಗಾಗಲೇ 1.10 ಲಕ್ಷ ಜನರನ್ನು ಕಾಲರಾ ಬಾಧಿಸಿದೆ. ಪ್ರತಿ ಐವರಲ್ಲಿ ನಾಲ್ಕು ಮಂದಿಗೆ ಪ್ರಾಣ ರಕ್ಷಣೆಗಾಗಿ ನೆರವಿನ ಅಗತ್ಯವಿದೆ ಎಂದು ಇಲ್ಲಿನ ದಾರುಣ ಚಿತ್ರಣವನ್ನು ನೀಡಿದ್ದಾರೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್.
ಯೆಮೆನ್‌ನಲ್ಲಿ ಕೋವಿಡ್ ವೈರಸ್ ಪತ್ತೆ ಹಚ್ಚುವ ಸಮರ್ಪಕ ಸೌಲಭ್ಯವೇ ಇಲ್ಲ. ಆಸ್ಪತ್ರೆಗಳು ಮೂಲಸೌಲಭ್ಯಗಳ ಕೊರತೆಯಿಂದಾಗಿ ಮುಚ್ಚುತ್ತಿವೆ. ವಿಶ್ವಸಂಸ್ಥೆಯ ನೆರವಿನಿಂದ ನಡೆಯುತ್ತಿದ್ದ 150 ಹೆರಿಗೆ ಮತ್ತು ಮಹಿಳಾ ಆಸ್ಪತ್ರೆಗಳು ಬಾಗಿಲು ಎಳೆದಿವೆ ಎಂದು ಗುರೆಟೆಸ್ ತಿಳಿಸಿದ್ದಾರೆ.
ಸೌದಿ ಅರೇಬಿಯ, ಯುಎಇ ಮತ್ತು ಕುವೈಟ್ ವಾಗ್ಧಾನ ಮಾಡಿದ್ದ ನೆರವನ್ನು ಹಿಂದೆಗೆದುಕೊಂಡ ಕಾರಣ ಯೆಮೆನ್ ತೀವ್ರ ಹಣಕಾಸಿನ ಅಡಚಣೆಯನ್ನು ಎದುರಿಸುತ್ತಿದೆ.